ಹೊಸನಗರ ಅಭಿವೃದ್ಧಿಗೆ ಅಡ್ಡೇಟು - ತಿಂಗಳಾಯ್ತು ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹುದ್ದೆ ಖಾಲಿ... ಖಾಲಿ...!!
ಹೊಸನಗರ : ರಾಜ್ಯದಲ್ಲಿ ಅತಿ ದೊಡ್ಡ ವಿಸ್ತೀರ್ಣ ಹೊಂದಿದ ತಾಲ್ಲೂಕು ಎನ್ನುವ ಹೆಗ್ಗಳಿಕೆಯೊಂದಿಗೇ ಅತಿ ಹಿಂದುಳಿದ ತಾಲ್ಲೂಕು ಎಂದೂ ಗುರುತಿಸಿಕೊಂಡಿರುವ, ಮಲೆನಾಡಿನ ತವರೂರಾದ ಹೊಸನಗರ ತಾಲ್ಲೂಕಿನ ಆಡಳಿತ ಕೇಂದ್ರಗಳಾಗಿರುವ ತಹಶೀಲ್ದಾರ್ ಕಚೇರಿ ಹಾಗೂ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಕ್ರಮವಾಗಿ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ ಹುದ್ದೆ ಖಾಲಿಯಾಗಿ ಹತ್ತತ್ತಿರ ಎರಡು ತಿಂಗಳಾಗುತ್ತಾ ಬಂದಿದೆ. ಹೊಸನಗರದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೋರಿಯವರು ವರ್ಗಾವಣೆಯಾಗಿ ಎರಡು ತಿಂಗಳಾಗುತ್ತಾ ಬಂದಿದ್ದು, ಇನ್ನು ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಸೊರಬ ಪುರಸಭೆಗೆ ವರ್ಗಾವಣೆಯಾಗಿ ಸರಿಯಾಗಿ ಒಂದು ತಿಂಗಳಾಗಿದೆ. ಕೋರಿಯವರು ಹೆಚ್ಚು ದಿನ ತಹಶೀಲ್ದಾರ್ ಆಗಿ ಹೊಸನಗರದಲ್ಲಿ ಕಾರ್ಯ ನಿರ್ವಹಿಸಿರಲಿಲ್ಲ. ಆದರೆ ಬಾಲಚಂದ್ರಪ್ಪ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನಾಲ್ಕೈದು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದು, ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸನಗರದಿಂದ ವರ್ಗಾವಣೆಯಾಗಿದ್ದರು. ಆದ್ದರಿಂದ ಸಧ್ಯ ಈ ಎರಡೂ ಹುದ್ದೆಗಳು ಖಾಲಿಯಾಗಿಯೇ ಉಳಿದಿದ್ದು ಪ್ರಭಾರಿ ಅಧಿಕಾರಿಗಳು ಈ ಹುದ್ದೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೂ ತಾಲ್ಲೂಕು ಆಡಳಿತ ಯಂತ್ರಕ್ಕೆ ಈ ಮೊದಲಿನ ವೇಗ ಇಲ್ಲದೇ ಇರುವುದರಿಂದ ಹೊಸನಗರ ತಾಲ್ಲೂಕಿನ ಅಭಿವೃದ್ಧಿಗೆ ಅಕ್ಷರಶಃ ಲಕ್ವಾ ಹೊಡೆದಂತಾಗಿದೆ.
ಇದಕ್ಕೆ ಸರಿಯಾಗಿ ತಾಲ್ಲೂಕು ಕಚೇರಿಯೊಂದಿಗೆ ಪಟ್ಟಣದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಸನಗರ ಪಟ್ಟಣದಲ್ಲಿ ವಾಸ್ತವ್ಯ ಇರುವುದಿಲ್ಲ ಎನ್ನುವ ಸಂಗತಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಹೊಸನಗರ ಪಟ್ಟಣದಲ್ಲಿರುವ ಬಹುತೇಕ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳು ತಾಲ್ಲೂಕು ಕೇಂದ್ರದಲ್ಲಿ ಮನೆ ಮಾಡದೆ, ಪ್ರತಿದಿನ ಸಾಗರ, ತೀರ್ಥಹಳ್ಳಿ ಶಿವಮೊಗ್ಗಗಳಿಂದ ಓಡಾಟ ನಡೆಸುತ್ತಿದ್ದಾರೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ 11 ಗಂಟೆಯಾದರೂ ಕಚೇರಿಗೆ ಬಾರದಿರುವುದು ಎಲ್ಲರ ಕಣ್ಣಿಗೆ ಕಾಣುತ್ತಿದೆ. ಇನ್ನು ಸಂಜೆ ನಾಲ್ಕು ಗಂಟೆಗೆ ಹೊಸನಗರದಿಂದ ಹೊರಡುವ ಬಸ್ಸುಗಳನ್ನೇರುವುದು ಇವರಿಗೆ ಅಭ್ಯಾಸವಾಗಿದೆ. ಇದಕ್ಕೆ ಸರಿಯಾಗಿ ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳು ಇಲ್ಲದೇ ಇರುವುದರಿಂದ ತಮ್ಮ ಮನಸ್ಸಿಗೆ ಬಂದ ಸಮಯಕ್ಕೆ ಕಚೇರಿಗೆ ಬರುವುದು, ಹೋಗುವುದು ಬಹುತೇಕ ಸಿಬ್ಬಂದಿಗಳಿಗೆ ಅಭ್ಯಾಸವಾಗಿಬಿಟ್ಟಿದೆ.
ಬೇಳೂರು ಎಚ್ಚರಿಕೆಗೂ ಕ್ಯಾರೇ ಅನ್ನದ ಸರ್ಕಾರಿ ನೌಕರರು!
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ಅವರು ಶಾಸಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಹೊಸನಗರದಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಇಂತಹ ಅಧಿಕಾರಿಗಳಿಗೆ, ’ತಡವಾಗಿ ಕಚೇರಿಗೆ ಬರುವ ಅಧಿಕಾರಿಗಳ ಅಗತ್ಯವೇ ನಮಗಿಲ್ಲ, ಅಂತಹವರನ್ನು ಇಲ್ಲಿಂದ ವರ್ಗಾವಣೆ ಮಾಡಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದೇನೋ ಸರಿ. ಶಾಸಕರ ಎಚ್ಚರಿಕೆಯ ನಂತರದ ಒಂದೆರಡು ದಿನಗಳ ಕಾಲ ಕೆಲವು ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೊಸನಗರಕ್ಕೆ ಆಗಮಿಸುತ್ತಿದ್ದವರು, ನಾಯಿ ಬಾಲ ಡೊಂಕು ಎನ್ನುವಂತೆ ಮತ್ತೆ ಹನ್ನೊಂದು ಗಂಟೆಗೆ ಬರಲಾರಂಭಿಸಿದ್ದಾರೆ. ಅಂದರೆ ಶಾಸಕರ ಎಚ್ಚರಿಕೆಗೂ ಬಗ್ಗದ ಸರ್ಕಾರಿ ಅಧಿಕಾರಿಗಳು ಹೊಸನಗರದ ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಇದ್ದಾರೆ ಎಂದಾಯಿತು. ಒಂದೆಡೆ ಶಾಸಕ ಬೇಳೂರು ಎಚ್ಚರಿಕೆಗೂ ಕ್ಯಾರೇ ಅನ್ನದ ಇಲ್ಲಿನ ಸರ್ಕಾರಿ ನೌಕರರಿಗೆ, ತಹಶೀಲ್ದಾರ್ ಹುದ್ದೆಯೂ ಖಾಲಿಯಾಗಿರುವುದು ತೂಕಡಿಸುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಒಟ್ಟಿನಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೊಸನಗರಕ್ಕೆ ಆಗಮಿಸುವ ಜನಸಾಮಾನ್ಯರು ಯಾರ ಬಳಿ ತಮ್ಮ ಗೋಳು ಹೇಳಿಕೊಳ್ಳುವುದೆಂದು ತಿಳಿಯದೇ ಒದ್ದಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣವೇ ಈ ಹುದ್ದೆಗಳನ್ನು ಭರ್ತಿ ಮಾಡಿ, ಹೊಸನಗರದ ಸರ್ಕಾರಿ ಕಚೇರಿಗಳ ಕೆಲಸಕ್ಕೆ ವೇಗ ನೀಡುವುದರೊಂದಿಗೆ, ಹೊಸನಗರದ ಅಭಿವೃದ್ಧಿಗೂ ಹೊಸ ಹುರುಪು ತುಂಬಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ