ಮಲೆನಾಡಿನ ಮುಕುಟ ಹೊಸನಗರದಲ್ಲಿ ವಸುಂಧರೆಗೆ ಸೀಮಂತದ ಸಂತಸ - ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ರೈತರು
ಹೊಸನಗರ : ಹೊಸನಗರ ತಾಲ್ಲೂಕಿನಾದ್ಯಂತ ಇಂದು ರೈತನ ಮೊಗದಲ್ಲಿ ನಗು ಮೂಡಿಸುವ ವಸುಂಧರೆಗೆ ಸೀಮಂತದ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ತಾಲ್ಲೂಕಿನ ಅನ್ನದಾತರು ಇಂದು ಹಾಲು ತುಂಬಿಕೊಂಡು ನಿಂತ ಫಸಲನ್ನು ನೀಡಿದ ಭೂರಮಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸುವ ಮೂಲಕ ತಮ್ಮ ತಮ್ಮ ಗದ್ದೆ ಹಾಗೂ ತೋಟಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಭೂಮಿ ಹುಣ್ಣಿಮೆ ರೈತರ ಬದುಕಿನ ಮಹತ್ವಪೂರ್ಣ ಹಬ್ಬವಾಗಿದ್ದು, ಹಬ್ಬದ ಒಂದು ವಾರದ ಮೊದಲೇ ಹಬ್ಬದ ವಾತಾವರಣಕ್ಕೆ ಸಜ್ಜಾಗುವ ಅನ್ನದಾತರ ಕುಟುಂಬಗಳು ಕೆಮ್ಮಣ್ಣು, ಸುಣ್ಣದ ಚಿತ್ತಾರದ ಭೂಮಣ್ಣಿ ಬುತ್ತಿಯನ್ನು ರಚಿಸಿ, ಭೂತಾಯಿಗೆ ಬಗೆ ಬಗೆ ಖಾದ್ಯಗಳನ್ನು ತಯಾರಿಸಿ, ಬಡಿಸಿ ಪೂಜಿಸುತ್ತಾರೆ.
ಭೂಮಿ ಹುಣ್ಣಿಮೆಯ ದಿನ 101 ಕುಡಿ ಸೇರಿಸಿ ಬೆರೆಕೆ ಸೊಪ್ಪಿನ ಪಲ್ಯ, ದೋಸೆ, ಅನ್ನ, ಕಬ್ಬು, ಬಳೆ, ಬಿಚ್ಚೋಲೆ, ಕೊಟ್ಟೆ ಕಡಬನ್ನು ಬೆಳಗಿನ ಜಾವವೇ ಭೂತಾಯಿಗೆ ನೈವೇದ್ಯ ರೂಪದಲ್ಲಿ ಇಟ್ಟು, ಗದ್ದೆಮನೆ ಹಾಗೂ ಅಡಿಕೆ ತೋಟದ ಸುತ್ತಮುತ್ತಲಿನ ಪ್ರದೇಶಗಳಿಗೆ ಅಚ್ಚಂಬಲಿ, ಹಾಲಂಬಲಿ ಗುಡ್ಡದ ಮೇಲಿನ ನೂರೊಂದು ಕುಡಿ ಬೇಲಿ ಮೇಲಿರೋ ಧಾರೆ ಹಿರೇಕಾಯಿ ಭೂಮಿತಾಯಿ ಬಕೀಯೋ ಬಕೀಯೋ ಉಂಡು ಹೋಗು ಎಂದು ಸುತ್ತಲು ಬೀರುವ ಪರಿಪಾಠವಿದ್ದು ಈ ದೃಶ್ಯಗಳು ಇಂದು ಮಲೆನಾಡಿನೆಲ್ಲೆಡೆ ಕಾಣಸಿಗುತ್ತದೆ.
ಕಾಮೆಂಟ್‌ಗಳಿಲ್ಲ