Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಆಶಾ ಕಾರ್ಯಕರ್ತರ ಸಮಸ್ಯೆಗಳನ್ನು ತುರ್ತಾಗಿ ಪರಿಗಣಿಸಿ ಪರಿಹರಿಸುವಂತೆ ಹೊಸನಗರ ಆಶಾ ಕಾರ್ಯಕರ್ತೆಯರ ಆಗ್ರಹ

ಹೊಸನಗರ : ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದಿರುವ ಕಾರಣದಿಂದ ಆಶಾ ಕಾರ್ಯಕರ್ತರ ಜೀವನಮಟ್ಟ ಅಧೋಗತಿಗೆ ಇಳಿದಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯಕರ್ತರ  ಸಮಸ್ಯೆಗಳಿಗೆ ತತ್‌‌ಕ್ಷಣ ಸ್ಪಂದಿಸಬೇಕೆಂದು ಹೊಸನಗರ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘ ಆಗ್ರಹ ಪಡಿಸಿದೆ.

ಹೊಸನಗರ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರು, ಈ ದಿನಗಳಲ್ಲಿ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಪ್ರತಿದಿನವೂ ಗಗನಕ್ಕೇರುತ್ತಿದೆ. ಸರ್ಕಾರ ನೀಡುತ್ತಿರುವ ವೇತನ ಜೀವನೋಪಾಯಕ್ಕೆ ಸಾಲುತ್ತಿಲ್ಲ. ಈ ಸಮಸ್ಯೆಗಳು ದೀರ್ಘಕಾಲಿನವಾಗಿದ್ದು ಇದರಿಂದ ಆಶಾ ಕಾರ್ಯಕರ್ತೆಯರ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ ಎಂದು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಆಶಾ ಕಾರ್ಯಕರ್ತರ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಸಾಮೂಹಿಕ ವಜಾಗೊಳಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಕೋರಿ ಇನ್ಸೆಂಟಿವ್‌‌ನ್ನು ಪಾಯಿಂಟ್ ಗಳಿಂದ ಮುಕ್ತಗೊಳಿಸಬೇಕು ಮತ್ತು ಮೊತ್ತವನ್ನು 11,000ಕ್ಕೆ ನಿಗದಿಪಡಿಸಿರಿ. ಇಲ್ಲದಿದ್ದರೆ ದೆಹಲಿ ಸರ್ಕಾರ ಘೋಷಿಸಿದ ಕುಶಲ ಕರ್ಮಿಗಳಿಗೆ ನಿಗದಿಪಡಿಸಿದ ಕನಿಷ್ಠ ವೇತನದ ಪ್ರಕಾರ ಮಾಸಿಕ ವೇತನವನ್ನು ನಿಗದಿಪಡಿಸಬೇಕು.

ಆಶಾ ಕಾರ್ಯಕರ್ತರುಗಳಿಗೆ ರಜೆ, ಭವಿಷ್ಯನಿಧಿ, ವಿದ್ಯಾರ್ಥಿ ವೇತನ, ಪಿಂಚಣಿ, ಆರೋಗ್ಯ ಸೌಲಭ್ಯ, ಜೀವವಿಮೆ ಹಾಗೂ ಹೆರಿಗೆ ಪ್ರಯೋಜನಗಳಂತಹ ಎಲ್ಲಾ ರೀತಿಯ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸಬೇಕು. ಕೆಲಸದಿಂದ ನಿವೃತ್ತರಾಗುವ ವೇಳೆ ಕನಿಷ್ಠ ಐದು ಲಕ್ಷ ರೂಪಾಯಿ ನೀಡಬೇಕು. ಪ್ರೋತ್ಸಾಹ ಧನವನ್ನು ನಿಗದಿ ಪಡಿಸದೆ ಕಾರ್ಯಕರ್ತರುಗಳಿಗೆ ಯಾವುದೇ ಕೆಲಸವನ್ನು ನೀಡಬಾರದು ಹಾಗೂ ಯಾವುದೇ ಒತ್ತಡವನ್ನು ತರಬಾರದು. ಆ ಕೆಲಸಗಳಿಗೆ ತಾರ್ಕಿಕ ಮತ್ತು ಸೂಕ್ತವಾದ ಪ್ರೋತ್ಸಾಹ ಧನವನ್ನು ಘೋಷಿಸಬೇಕು. ಆಶಾ ಕಾರ್ಯಕರ್ತರು ಸಹ ಆರೋಗ್ಯ ಕಾರ್ಯಕರ್ತರಂತೆ ರೋಗಿಗಳ ಆರೈಕೆ ಭತ್ಯೆಯಡಿಯಲ್ಲಿ ಒಳಗೊಳ್ಳಬೇಕು ಹಾಗೂ ಕಾರ್ಯಕರ್ತರುಗಳಿಗೆ ಆರೋಗ್ಯ ಇಲಾಖೆಯ ಗ್ರೂಪ್ ಸಿ ನೌಕರರ ಸ್ಥಾನಮಾನ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ನಾಗರತ್ನ, ಪದಾಧಿಕಾರಿಗಳಾದ ಸವಿತಾ, ಸುಮಾ, ಶಾಂತ, ರೇಷ್ಮಾ, ಮೈಮುನಾಬಿ, ರೇಣುಕಾ, ಶೋಭಾ, ಸವಿತಾ, ಜಯಶ್ರೀ, ಪ್ರಾಪ್ತಿ ಪ್ರಸನ್ನ, ಶಾರದಾ ಮೊದಲಾದವರಿದ್ದರು.


ಕಾಮೆಂಟ್‌ಗಳಿಲ್ಲ