Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೋಡೂರು ಅಮ್ಮನಘಟ್ಟ ಜಾತ್ರೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಹರತಾಳು ಹಾಲಪ್ಪ

ಕೋಡೂರು : ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಅಮ್ಮನಘಟ್ಟದಲ್ಲಿ ನಡೆಯುತ್ತಿರುವ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರೆಗೆ ಇಂದು ಆಗಮಿಸಿದ ಮಾಜಿ ಶಾಸಕ ಹರತಾಳು ಹಾಲಪ್ಪನವರು ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ದೇವಿಯ ಸಮ್ಮುಖದಲ್ಲಿ ಗೌರವ ಸ್ವೀಕರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹರತಾಳು ಹಾಲಪ್ಪನವರು, ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಮ್ಮನಘಟ್ಟದ ದೇಗುಲವನ್ನು ಶಿಲಾಮಯ ದೇಗುಲವನ್ನಾಗಿಸಲು ಸರ್ಕಾರದಿಂದ 1.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಶಿಲಾಮಯ ದೇಗುಲದ ಕೆಲಸ ನನ್ನ ಅವಧಿಯಲ್ಲೇ ಪೂರ್ಣವಾಗಬೇಕಿತ್ತು. ಆದರೆ ರಾಜಕೀಯದಲ್ಲಾದ ವ್ಯತ್ಯಾಸದಿಂದಾಗಿ ಅನುದಾನ ಬಿಡುಗಡೆಯಾಗಿಲ್ಲ. ಅದು ಅಲ್ಲೇ ಇದ್ದು, ವಿಧಾನಸೌಧದ ಒಂದೊಂದು ಕಂಬವನ್ನು ಸುತ್ತಿ ತರುವುದು ಈಗಿನ ಶಾಸಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನ ಮತ್ತು ಚಂದ್ರಗುತ್ತಿಯ ದೇವಸ್ಥಾನದ ಮಾದರಿಯಲ್ಲೇ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿ, ಜಿಲ್ಲೆಯ ಮಾದರಿ ಯಾತ್ರಾ ಸ್ಥಳವನ್ನಾಗಿಸುವುದು ನನ್ನ ಮಹದಾಸೆಯಾಗಿತ್ತು ಎಂದು ಹೇಳಿದರು. 

ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲೋಡ್ ಶೆಡ್ಡಿಂಗ್ ಅನಿವಾರ್ಯ. ಅದರ ಬಗ್ಗೆ ಸಚಿವರು ಮಾತನಾಡಿದ್ದಾರೆ ಹಾಗೂ ನಮ್ಮ ಪಕ್ಷದ ಮುಖಂಡರು ಕೂಡಾ ಮಾತನಾಡಿದ್ದಾರೆ ಎಂದರು.

ಹೊಸನಗರ ತಾಲ್ಲೂಕಿನ ಪಕ್ಷದ ಆಂತರಿಕ ಬಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ಸೋಲು ನನಗೆ ಹೊಸತಲ್ಲ. ಈ ಹಿಂದೆಯೂ ನಾನು ಸೋತಿದ್ದೆ. ಸೋಲಿನ ಕಾರಣಗಳು ಡೆಲ್ಲಿಯಿಂದ ನಮ್ಮ ಕಟ್ಟ ಕಡೆಯ ಬೂತ್ ಮಟ್ಟದವರೆಗೂ ಚರ್ಚೆಯಾಗುತ್ತಲೇ ಇರುತ್ತವೆ. ಆ ಚರ್ಚೆ ಅರೋಗ್ಯಕರವಾಗಿರಲಿ ಎಂದು ಸಲಹೆ ನೀಡಿ, ಧಾರ್ಮಿಕ ಕೇಂದ್ರದಲ್ಲಿ ರಾಜಕೀಯದ ಪ್ರಶ್ನೆಗಳು ಬೇಡ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಮಾಜಿ ಶಾಸಕರಾದ ಬಿ ಸ್ವಾಮಿರಾವ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಆಲುವಳ್ಳಿ ವೀರೇಶ್, ಎಪಿಎಂಸಿ ಮಾಜಿ ನಿರ್ದೇಶಕರಾದ ಕಲ್ಯಾಣಪ್ಪ ಗೌಡ, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಪಕ್ಷದ ಹಿರಿಯ - ಕಿರಿಯ ಮುಖಂಡರು ಜೊತೆಗಿದ್ದರು.

VIDEO - ಕೋಡೂರು ಅಮ್ಮನಘಟ್ಟ ಜಾತ್ರೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಹರತಾಳು ಹಾಲಪ್ಪ

ಕಾಮೆಂಟ್‌ಗಳಿಲ್ಲ