ತುರ್ತಾಗಿ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಹೊಸನಗರ ಎಬಿವಿಪಿ ಕಾರ್ಯಕರ್ತರ ಆಗ್ರಹ
ಹೊಸನಗರ : ಹಿಂದುಳಿದ ವರ್ಗಗಳ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಡಿಯಲ್ಲಿ ನೀಡುತ್ತಿರುವ ವಿದ್ಯಾರ್ಥಿವೇತನಗಳನ್ನು ರಾಜ್ಯ ಸರ್ಕಾರ ಈಗ ತಡೆಹಿಡಿದಿದ್ದು ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹೊಸನಗರ ಘಟಕದವರು ಇತ್ತೀಚೆಗೆ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲ್ಲೂಕು ಕಚೇರಿಯವರೆಗೆ ಜಾಥಾ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಸರ್ಕಾರದ ಗಮನ ಸೆಳೆಯುವಂತೆ ಕೋರಿದರು.
ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಸೂಕ್ತ ಸಮಯದಲ್ಲಿ ವಿದ್ಯಾರ್ಥಿ ವೇತನ ನೀಡದೆ ಈ ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವುದು ಖಂಡನಾರ್ಹವಾಗಿದೆ. ಕುಟುಂಬದ ಆರ್ಥಿಕ ಸಮಸ್ಯೆಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕು ಗೊಳಿಸುತ್ತಿದ್ದು, ಇದನ್ನು ಕಂಡ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದ್ದು, ಈಗ ಇದ್ದಕ್ಕಿದ್ದ ಹಾಗೆ ವಿದ್ಯಾರ್ಥಿ ವೇತನವನ್ನು ತಡೆಹಿಡಿಯುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕಂಟಕ ತಂದೊಡ್ಡಿದೆ ಎಂದು ಕಾರ್ಯಕರ್ತರು ಈ ಸಂದರ್ಭದಲ್ಲಿ ವಿವರಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹೊಸನಗರ ಘಟಕದ ನಗರ ಕಾರ್ಯದರ್ಶಿ ಕೆ. ಕೆ. ಮನೋಜ್, ಕಾರ್ಯಕರ್ತರಾದ ಸುದೀಪ್, ಅಶ್ವಲ್, ಯಶವಂತ್, ದೀಕ್ಷಾ, ಸೀಮಾ, ರಶ್ಮಿತಾ, ಚಿನ್ಮಯ್ ಅರಾಜ್, ನೂತನ್, ನಂದನ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ