Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅರಳಸುರಳಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ - ಬೆಳಿಗ್ಗೆ 5 ಗಂಟೆ ಸುಮಾರಿಗೆ ನಡೆದ ದುರಂತ!

ತೀರ್ಥಹಳ್ಳಿ : ಇಲ್ಲಿನ ಅರಳಸುರಳಿ ಗ್ರಾಮದ ಮನೆಯೊಂದರಲ್ಲಿ ಬೆಂಕಿಗೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃತ್ತಿಯಲ್ಲಿ ಕೃಷಿಕರಾಗಿದ್ದ ರಾಘವೇಂದ್ರ ಕೆಕೋಡ್ (63), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (32) ಸಜೀವವಾಗಿ ಬೆಂಕಿಗೆ ಬಲಿಯಾಗಿದ್ದರೆ, ಇನ್ನೋರ್ವ ಪುತ್ರ ಭರತ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ.


ಹೊಸನಗರ ರಸ್ತೆಯಲ್ಲಿರುವ ಅರಳಸುರಳಿ ಬಳಿಯಲ್ಲಿ ಸಿಗುವ ಕಲ್ಲೋಣಿ ಗಣಪತಿ ಕಟ್ಟೆ ರೈಸ್​ ಮಿಲ್​  ಹತ್ತಿರದ ಮನೆಯಲ್ಲಿ ಈ ದುರಂತ ನಡೆದಿದೆ. ಈ ಘಟನೆಯ ಬಗ್ಗೆ ಹಲವು ಅನುಮಾನಗಳು ಮೂಡಿದ್ದು ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಮೇಲ್ನೋಟಕ್ಕೆ ಮನೆಯ ಒಳಗಿನ ಕೋಣೆಯೊಳಗೆ ಕುಟುಂಬದ ಸದಸ್ಯರೇ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಅನುಮಾನ ಮೂಡುತ್ತಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ.

ಕುಟುಂಬದ ಹಿರಿಯರಾದ ರಾಘವೇಂದ್ರ ಕೆಕೋಡ್ ಅವರು ಕೃಷಿಕರಾಗಿದ್ದರು. ಇಂದು ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿಯ ಸೇವಾ ಕಾರ್ಯಕರ್ತರ ಸಮಯೋಚಿತ ಕಾರ್ಯಾಚರಣೆಯಿಂದ ಒಬ್ಬರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. 


ವಿಷಯ ತಿಳಿದ ತಕ್ಷಣ  ಅಗ್ನಿಶಾಮಕ ದಳ ಮತ್ತು ತೀರ್ಥಹಳ್ಳಿ ಪೊಲೀಸ್ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದರು.

ಘಟನೆಯ ಜಾಗದಲ್ಲಿ ನೂರಾರು ಮಂದಿ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್‌ ಸೇರಿ ಅನೇಕರು ಭೇಟಿ ನೀಡಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್ ಅವರು ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.

 

ಕಾಮೆಂಟ್‌ಗಳಿಲ್ಲ