SPECIAL REPORT - ಮಧ್ಯರಾತ್ರಿ ಕೊನೆಯಾದ ಕುಟುಂಬದ ಮೂವರೊಂದಿಗೆ ಬೆಳಗಿನ ಜಾವದ ತನಕ ಉಳಿದಿದ್ದನಾ ಕೇಕುಡ ಭರತ್?! ಅರಳಸುರಳಿಯ ಆ ಮನೆಯಲ್ಲಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ನಿಜವಾಗಿ ನಡೆದಿದ್ದೇನು?!
ಅರಳಸುರಳಿಯ ಕೇಕುಡ ರಾಘವೇಂದ್ರ ಅವರ ಮನೆಯಲ್ಲಿ ನಿನ್ನೆ ರಾತ್ರಿ ನಿಜಕ್ಕೂ ನಡೆದಿದ್ದೇನು? ಪ್ರಗತಿಪರ ಕೃಷಿಕರಾಗಿ ಯಶಸ್ವಿಯಾಗಿ ಪ್ರಶಸ್ತಿಯನ್ನೂ ಪಡೆದಿದ್ದ ರಾಘವೇಂದ್ರ ದಂಪತಿಗಳಿಗೆ ವಾತ - ಕಸದ ಸಮಸ್ಯೆ ಮೊದಲಿನಿಂದಲೂ ಇತ್ತು. ಮಕ್ಕಳಾದ ಶ್ರೀರಾಮ್ ಮತ್ತು ಭರತ್ ಇಬ್ಬರೂ ಕೃಷಿಯಲ್ಲೂ ಆಸಕ್ತಿ ಹೊಂದಿ, ಕಾಳುಮೆಣಸು - ಅಡಿಕೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೀಗೆ ನೆಮ್ಮದಿಯಾಗಿದ್ದ ಪುಟ್ಟ ಕುಟುಂಬದಲ್ಲಿ ನಿನ್ನೆ ರಾತ್ರಿ ಏನಾಯಿತು? ಎಲ್ಲರೂ ಒಟ್ಟಿಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇ ಹೌದಾದರೆ, ಭರತ್‌ನನ್ನು ಹೊರತುಪಡಿಸಿ ಆ ಮೂವರ ಶವ ಹಲಗೆ ಮೇಲೆ ಮಲಗಿದಂತೆ ಇದ್ದಿದ್ದು ಹೇಗೆ? ಹಾಗಿದ್ದರೆ ಆ ಮೂವರು ಮಧ್ಯರಾತ್ರಿ ಕೊನೆಯುಸಿರೆಳೆದ ನಂತರ ಮೂವರ ಶವದೊಂದಿಗೆ ಒಂಟಿಯಾಗಿಯೇ ಉಳಿದ ಭರತ್ ಬೆಳಗಿನ ತನಕ ಏನು ಯೋಚಿಸಿರಬಹುದು? ಬೆಂಕಿ ಹತ್ತಿದ್ದು ಹೇಗೆ? ಬೆಂಕಿ ಹತ್ತಿರುವ ರೂಮಿನಲ್ಲಿ ಕುಟುಂಬದ ಆಸ್ತಿಪತ್ರ, ದುಡ್ಡು, ಬಟ್ಟೆ ಸೇರಿದಂತೆ ಮನೆಯವರೆಲ್ಲರಿಗೂ ಸೇರಿದ ವಸ್ತು ಇದ್ದಿದ್ದು ಹೇಗೆ? ಈ ಎಲ್ಲಾ ಪ್ರಶ್ನೆ ಹಾಗೂ ಅನುಮಾನಗಳಿಗೂ ಉತ್ತರವಾಗಿ ನ್ಯೂಸ್ ಪೋಸ್ಟ್‌ಮಾರ್ಟಮ್‌ನ ಸಂಪಾದಕರಾದ ಗಣೇಶ ಕೆ ಅವರು ಬರೆದಿರುವ ವಿಶೇಷ ವರದಿ ಇದು.
ತೀರ್ಥಹಳ್ಳಿ: ಇಡೀ ಶಿವಮೊಗ್ಗ ಜಿಲ್ಲೆಯೇ ಬೆಚ್ಚಿ ಬೀಳುವಂತಹ ದುರಂತ ತೀರ್ಥಹಳ್ಳಿಯ ಅರಳಸುರಳಿ ಕಲ್ಲೋಣಿಯ ಕೇಕುಡ ರಾಘವೇಂದ್ರ ಅವರ ಮನೆಯಲ್ಲಿ ನಡೆದು ಹೋಗಿದೆ. ಪ್ರಗತಿಪರ ಕೃಷಿಕರಾಗಿ ಪ್ರಶಸ್ತಿಯನ್ನೂ ಗಳಿಸಿದ್ದ, ಗೋವುಗಳೆಂದರೆ ಅಪಾರ ಪ್ರೀತಿ ಹೊಂದಿದ್ದ 63 ವರ್ಷದ ರಾಘವೇಂದ್ರ ಕೇಕುಡ ಅವರ ಮನೆಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಇಂತಹದ್ದೊಂದು ದುರಂತ ನಡೆದು ಹೋಗಬಹುದು ಎನ್ನುವ ಅಂದಾಜು ಅರಳಸುರಳಿಯಲ್ಲೇ ಯಾರಿಗೂ ಇರಲಿಲ್ಲ. ಯಾಕೆಂದರೆ, ಹಿಂದಿನ ದಿನ ಅಂದರೆ ಅಕ್ಟೋಬರ್ 7ರಂದು ಸಂಜೆಯವರೆಗೂ ಊರಿನಲ್ಲಿ ಯಾರಿಗೆಲ್ಲ ರಾಘವೇಂದ್ರ ಅವರ ಮಕ್ಕಳಾದ ಶ್ರೀರಾಮ್ ಮತ್ತು ಭರತ್ ಸಿಕ್ಕಿದ್ದರೋ ಅವರೆಲ್ಲರೊಂದಿಗೂ ಇಬ್ಬರೂ ಆರಾಮಾಗಿ ಮಾತನಾಡಿದ್ದರು. ಕಳೆದ ಹತ್ತು ದಿನಗಳಿಂದ ವಿಪರೀತ ಜ್ವರ ಹಿಡಿದುಕೊಂಡು ರಾಘವೇಂದ್ರ ದಂಪತಿಗಳು ನರಳುತ್ತಿದ್ದದ್ದು ಹೌದಾದರೂ ಅದು ಬದುಕನ್ನೇ ಮುಗಿಸಿಕೊಳ್ಳುವಂತಹ ಮಟ್ಟಕ್ಕೇನೂ ಹೋಗಿರಲಿಲ್ಲ. ಹೀಗಿರುವಾಗ ಅಕ್ಟೋಬರ್ 7ರ ರಾತ್ರಿಯಿಂದ 8ರ ಬೆಳಿಗ್ಗೆ 7 ಗಂಟೆಯ ನಡುವೆ ಕುಟುಂಬದ ನಾಲ್ಕೂ ಜನರ ಬದುಕಿಗೇ ಬೆಂಕಿ ಹೊತ್ತಿಕೊಳ್ಳುವಂತಹ ಯಾವ ಸಂಗತಿ ಮನೆಯೊಳಗೆ ನಡೆಯಿತು?! ಮನೆಯೊಳಗೆ ಇದ್ದಿದ್ದು ಅವರೇ ನಾಲ್ಕೂ ಜನರಾ? ಅಥವಾ ಇವರನ್ನು ಹೊರತು ಪಡಿಸಿ ಇನ್ನ್ಯಾರಾದರೂ ಅಲ್ಲಿದ್ದರಾ? ಅವರೇನಾದರೂ ಬೆಂಕಿ ಹಚ್ಚಿದರಾ ಅಥವಾ ಮನೆಯವರೇ ಹಚ್ಚಿಕೊಂಡರಾ?!
![]() |
ಕೇಕುಡ ರಾಘವೇಂದ್ರ, ಪತ್ನಿ ನಾಗರತ್ನಾ, ಮಗ ಶ್ರೀರಾಮ್ |
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ’ನ್ಯೂಸ್ ಪೋಸ್ಟ್‌ಮಾರ್ಟಮ್’ಗೆ ಹತ್ತು ಹಲವು ಸಂಗತಿಗಳು ಊರಿನವರಿಂದಲೇ ತಿಳಿಯುತ್ತಾ ಹೋದವು. ಏನೇ ವಿಷಯ ತಿಳಿದರೂ ರಾಘವೇಂದ್ರ ಅವರ ಕುಟುಂಬದ ಬಗ್ಗೆ ಕೆದಕಲೇಬೇಕೆಂದು ಹೊರಟರೂ ಊರಿನವರಿಂದ ಇಡೀ ಕುಟುಂಬದ ಬಗ್ಗೆ ಕೆಟ್ಟ ಮಾತುಗಳು ಕೇಳಿ ಬರುವುದಿಲ್ಲ. ಅಷ್ಟರಮಟ್ಟಿಗೆ ಅರಳಸುರಳಿಯಲ್ಲಿ ತನ್ನ ಪಾಡಿಗೆ ತಾನಿದ್ದ ಕುಟುಂಬ ರಾಘವೇಂದ್ರ ಅವರದ್ದು. ಅರಳಸುರಳಿಯಿಂದ ಹೊಸನಗರಕ್ಕೆ ಹೋಗುವ ರಸ್ತೆಯ ಗಣಪತಿ ಕಟ್ಟೆಯ ಹತ್ತಿರ ಅವರ ಮನೆ ಇದೆ. ಗಣಪತಿ ಕಟ್ಟೆಯ ಹತ್ತಿರ ಅವರ ಮನೆ ಇದ್ದಿದ್ದರಿಂದಲೋ ಏನೋ ದುರಂತದ ನಂತರ ರಾಘವೇಂದ್ರ ಅವರನ್ನು ’ಅರ್ಚಕರು’ ಎನ್ನಲಾಗುತ್ತಿದೆ. ಆದರೆ ಅವರು ಅರ್ಚಕರಾಗಿದ್ದವರಲ್ಲ. ಮೂಲತಃ ಕೃಷಿಕರಾಗಿದ್ದ ರಾಘವೇಂದ್ರ ಅವರು, ಕೃಷಿಯಲ್ಲಿ ತಮ್ಮಷ್ಟಕ್ಕೆ ತಾವು ಹಲವು ಪ್ರಯೋಗಗಳನ್ನು ನಡೆಸಿದ್ದವರು. ಇವತ್ತು ಟ್ರೆಂಡ್ ಆಗುತ್ತಿರುವ ಸಾವಯವ ಕೃಷಿಯನ್ನು ಹತ್ತು ವರ್ಷಗಳ ಹಿಂದೆಯೇ ಮಾಡಿದ್ದ ಇವರು, ತಮ್ಮ ತೋಟಕ್ಕೆ ದನದ ಸೆಗಣಿ ನೀರನ್ನಷ್ಟೇ ಸಿಂಪಡಿಸಿ ಉತ್ತಮ ಬೆಳೆ ಬೆಳೆದು ’ಪ್ರಗತಿಪರ ಕೃಷಿಕ’ ಪ್ರಶಸ್ತಿಯನ್ನು ಕೂಡಾ ಪಡೆದಿದ್ದರು. ಇನ್ನು ರಾಘವೇಂದ್ರ ಅವರಿಗೆ ಹಸುಗಳೆಂದರೆ ಭಯಂಕರ ಪ್ರೀತಿ. ಹಾಲಿಗಾಗಿ ಹಸು ಸಾಕುವವರ ನಡುವೆ ಇವರು ಅದ್ಯಾವುದನ್ನೂ ನೋಡದೇ ಕೇವಲ ಗೋವುಗಳ ಮೇಲಿನ ಪ್ರೀತಿಯಿಂದ ಕೊಟ್ಟಿಗೆಯಲ್ಲಿ ಹತ್ತು ಹದಿನೈದು ಸಾಮಾನ್ಯ ಹಸುಗಳನ್ನು ಸಾಕಿದ್ದರು. ಅವುಗಳಿಗೆ ಹೊಟ್ಟೆ ತುಂಬಾ ಮೇವು ಕೊಡುತ್ತಿದ್ದರು. ಇವರ ಹಿರೀಮಗ ಶ್ರೀರಾಮ್ ಆಪ್ತರ ಹತ್ತಿರ ದನಗಳ ಬಗ್ಗೆ ಮಾತು ಬಂದಾಗ, ’ಈ ದನಗಳಿಗೆ ವರ್ಷವೊಂದಕ್ಕೆ ಒಣಹುಲ್ಲು ಕೊಡಲಿಕ್ಕೇ ಐದಾರು ಲಕ್ಷ ಬೇಕಾಗುತ್ತದೆ’ ಎಂದು ಹೇಳುತ್ತಿದ್ದನಂತೆ! ಗೋವುಗಳು ನಮಗೇನು ಕೊಡುತ್ತವೋ ಬಿಡುತ್ತವೋ ಅವುಗಳನ್ನು ಸಾಕುವುದೇ ತಮಗೊಂದು ಖುಷಿ ಎಂದುಕೊಳ್ಳುತ್ತಿದ್ದ ರಾಘವೇಂದ್ರ ಕೇಕುಡ ಅವರು ತಮ್ಮ ಮಗನ ಹತ್ತಿರ, ’ಈಗ ಬೇಡ, ನಿನಗೆ ದನಗಳನ್ನು ಕೊಡಬೇಕು ಅಂದ್ರೆ ನಾನು ಸತ್ತ ನಂತರ ನನ್ನ ಹೆಸರಿನಲ್ಲಿ ’ಗೋದಾನ’ವಾಗಿ ಕೊಡು’ ಎಂದು ಹೇಳುತ್ತಿದ್ದರಂತೆ...
ಇಂತಹ ರಾಘವೇಂದ್ರ ಮತ್ತು ನಾಗರತ್ನಾ ದಂಪತಿಗಳಿಗೆ ವಾತ ಕಸದ ಸಮಸ್ಯೆಯಿತ್ತು. ಜೊತೆಗೆ ರಾಘವೇಂದ್ರ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವೊಮ್ಮೆ ಗಾಯವಾದರೆ ಅದು ವಾಸಿಯಾಗಲು ವರ್ಷ ಹಿಡಿಯುತ್ತಿತ್ತು. ಹಾಗೆಂದು ತಮ್ಮ ಕಾಯಿಲೆ - ಸಂಕಟವನ್ನು ಯಾರೆದುರೂ ತೋರಿಸಿಕೊಳ್ಳದ ರಾಘವೇಂದ್ರ ದಂಪತಿಗಳಿಗೆ ಕಳೆದ ಹತ್ತು ದಿನಗಳಿಂದ ಜೋರು ಜ್ವರ. ಜ್ವರ ಎಷ್ಟಿತ್ತು ಎಂದರೆ ಎದ್ದೇಳಲು ಆಗದ, ಸ್ವತಃ ನೀರು ಕುಡಿಯಲಿಕ್ಕೂ ಆಗದಂತಾಗಿತ್ತು. ಆದ್ದರಿಂದ ಶ್ರೀರಾಮ್ ವೈದ್ಯರನ್ನು ಮನೆಗೇ ಕರೆಸಿ ಉಪಚರಿಸಿದ್ದ. ಇದು ಬಿಟ್ಟರೆ ದಂಪತಿಗಳಿಗೆ ಬೇರೇನೂ ಕಾಯಿಲೆಗಳಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ.
![]() |
ಭರತ್ |
ಹೀಗೆ ಎಲ್ಲಾ ರೀತಿಯಲ್ಲೂ ಒಂದಷ್ಟು ನೆಮ್ಮದಿಯಿಂದ ತನ್ನ ಪಾಡಿಗೆ ತಾನಿದ್ದ ಕುಟುಂಬಕ್ಕೆ ಮನೆಯೊಳಗೆ ಬೆಂಕಿ ಹಚ್ಚಿಕೊಂಡು ಬದುಕನ್ನು ಕೊನೆಗೊಳಿಸುವಂತಹದ್ದೇನಾಯಿತು?!
ಬದುಕುಳಿದಿರುವ ಭರತ್, ಕೆಲವು ದಿನಗಳಿಂದ ಒಂದಿಷ್ಟು ಮಾನಸಿಕವಾಗಿ ಕುಗ್ಗಿ ಹೋದಂತೆ ಕಾಣುತ್ತಿದ್ದ ಎಂದು ಅವನೊಂದಿಗೆ ಒಡನಾಡಿದವರು ಹೇಳುತ್ತಾರೆ. ’ಈ ಲೈಫ್ ಸುಮ್ಮನೆ... ಲೈಫಲ್ಲಿ ಏನೂ ಇಲ್ಲ, ಸಂಬಂಧಗಳಿಗೆ ಯಾವ ಬೆಲೆಯೂ ಇಲ್ಲ. ಜಮೀನು ಮನೆಯೆಲ್ಲ ಯಾರಿಗೆ ಬೇಕು ಹೇಳು, ಸಾಕಾಗಿ ಹೋಗಿದೆ. ನೆಮ್ಮದಿಯೇ ಇಲ್ಲ...’ ಎನ್ನುವಂತಹ ಮಾತುಗಳನ್ನು ತನ್ನ ಆಪ್ತರ ಬಳಿ ಆಡುತ್ತಿದ್ದ ಭರತ್, ನಿಧಾನವಾಗಿ ಬದುಕಿನಿಂದ ವಿಮುಖವಾಗುತ್ತಿದ್ದಂತೆ ಕಾಣುತ್ತಿತ್ತು. ಇದಕ್ಕೇನು ಕಾರಣ? ತಂದೆಯ ಕುಟುಂಬದ ಆಸ್ತಿ ಪಾಲಾಗಿತ್ತು. ರಾಘವೇಂದ್ರ ಅವರಿಗೆ ಹತ್ತತ್ತಿರ ಐದು ಎಕರೆ ಬ್ಯಾಣ, ತೋಟ, ಗದ್ದೆ ಇತ್ತು. ಗದ್ದೆಯನ್ನೆಲ್ಲ ತೋಟ ಮಾಡಿದ್ದರು. ಇನ್ನು ತಮ್ಮ ಸಹೋದರರೊಬ್ಬರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರಾಘವೇಂದ್ರ, ಅವರ ಪಾಲಿಗೆ ಬಂದಿದ್ದ ಆಸ್ತಿಯನ್ನೂ ತಾವೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ’ಅಧಿಕಾರ’ವನ್ನೂ ಹೊಂದಿದ್ದ ರಾಘವೇಂದ್ರ ಅವರು ಸಹೋದರನ ಜಮೀನು ಅಭಿವೃದ್ಧಿಗಾಗಿಯೂ ದುಡಿದಿದ್ದರಲ್ಲದೇ, ಅದಕ್ಕಾಗಿ ಕೆಲವು ಲಕ್ಷ ಸಾಲವನ್ನೂ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಆ ಸಹೋದರ ಇವರು ಅಭಿವೃದ್ಧಿ ಪಡಿಸಿದ್ದ ಜಾಗವನ್ನು ವಾಪಾಸ್ಸು ಕೇಳಿದ್ದನಂತೆ, ಈ ವಿಷಯವಾಗಿ ವಾದ ವಿವಾದಗಳಾಗಿದ್ದವಂತೆ... ಎನ್ನುವ ಗುಸುಗುಸು ಊರವರಲ್ಲಿವೆ. ಈ ವಿಚಾರವಾಗಿ ರಾಘವೇಂದ್ರ ಅವರ ಕುಟುಂಬ ಒಂದಿಷ್ಟು ಡಿಸ್ಟರ್ಬ್ ಆಗಿತ್ತು, ಸೋತಂತಾಗಿತ್ತು ಎನ್ನುತ್ತಾರೆ ಊರವರು. ಭರತ್ ಇದೇ ಕಾರಣಕ್ಕೆ ಸಂಬಂಧಿಕರು - ಜಮೀನಿನ ವಿಷಯವಾಗಿ ಬೇಸರಿಸಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದನಾ? ಹಾಗೇ ಕಾಣುತ್ತದೆ. ಇಷ್ಟಕ್ಕೇ ಮನೆಯವರೆಲ್ಲರೂ ಸಾಯುವ ನಿರ್ಧಾರ ಮಾಡಿದರಾ? ಆ ಸಾಧ್ಯತೆಗಳೂ ಇಲ್ಲ. ಯಾಕೆಂದರೆ, ರಾಘವೇಂದ್ರ ಅವರು ಮನಸ್ಸು ಮಾಡಿದ್ದರೆ ತಮ್ಮ ಆಸ್ತಿಯನ್ನು ಮಾರಿ ಇರುವ ಲಕ್ಷದ ಸಾಲವನ್ನು ತೀರಿಸಿಕೊಂಡು ನೆಮ್ಮದಿಯಾಗಿ ಇರಬಹುದಿತ್ತು. ಹೌದು, ಇವರ ಆಸ್ತಿಯನ್ನು ಆರು ಕೋಟಿ ರೂಪಾಯಿಗೆ ಖರೀದಿ ಮಾಡುವ ಬಗ್ಗೆಯೂ ಕೆಲವು ಸಮಯದ ಹಿಂದೆ ಮಾತುಗಳಾಗಿದ್ದವಂತೆ. ಅಂದಮೇಲೆ ಎಲ್ಲರೂ ಒಟ್ಟಿಗೇ ಸಾಯುವ ನಿರ್ಧಾರವನ್ನೇಕೆ ಮಾಡುತ್ತಾರೆ? ಇನ್ನು ಶ್ರೀರಾಮ್ ಅಷ್ಟು ಸುಲಭಕ್ಕೆ ಆತ್ಮಹತ್ಯೆಯಂತಹದ್ದನ್ನೆಲ್ಲ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಹತ್ತಿರದಿಂದ ಬಲ್ಲ ಎಲ್ಲರೂ ಹೇಳುತ್ತಾರೆ.
ಹಾಗಿದ್ದರೆ ಮನೆಯೊಳಗೆ ನಡೆದಿದ್ದೇನು? ಬೆಂಕಿ ಹತ್ತಿದ್ದಾ? ಅಥವಾ ಮನೆಯವರೇ ಹಚ್ಚಿಕೊಂಡಿದ್ದಾ? ಹೊರಗಿನಿಂದ ಯಾರಾದರೂ ಬಂದು ಕಡ್ಡಿ ಗೀರಿದರಾ?
ಈ ಪ್ರಶ್ನೆಗಳಿಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಯಾಕೆಂದರೆ, ಕುಟುಂಬದ ನಾಲ್ವರ ನಡುವೆ ಬದುಕಿ ಉಳಿದಿರುವ ಭರತ್ ಬದುಕುಳಿದು ಬಂದು ಊರವರ ಎದುರು ನೀಡಿರುವ ಹೇಳಿಕೆಗಳು ಸಾಕಷ್ಟು ಅನುಮಾನ ಹುಟ್ಟಿಸುತ್ತವೆ. ಇಷ್ಟಕ್ಕೂ ಕಲ್ಲೋಣಿಯ ಕೇಕುಡ ರಾಘವೇಂದ್ರ ಅವರ ಮನೆಯೊಳಗೆ ಬೆಂಕಿ ಬಿದ್ದಿದೆ ಎಂದು ತಿಳಿದಿದ್ದು ಹೇಗೆ? ಬೆಳಿಗ್ಗೆ ವಾಕಿಂಗ್ ಹೊರಟಿದ್ದ ಮಹಿಳೆಯೊಬ್ಬರಿಗೆ ರಸ್ತೆಯಿಂದ ಸ್ವಲ್ಪ ಕೆಳಭಾಗದಲ್ಲಿರುವ ರಾಘವೇಂದ್ರ ಅವರ ಮನೆಯಿಂದ ಯಾರೋ ಕೂಗುವ ಸದ್ದು ಕೇಳಿಸಿ ಹೋಗಿ ನೋಡಿದರೆ ಭರತ್ ಬೆಂಕಿ ಬಿದ್ದಿದೆ ಎಂದು ಕೂಗುತ್ತಿದ್ದದ್ದನ್ನು ನೋಡಿದವರೇ ಭಯದಿಂದ ಓಡಿ ಬಂದು ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಹೀಗೆ ಊರವರೆಲ್ಲರಿಗೂ ವಿಷಯ ತಿಳಿದು ಮನೆಯ ಹತ್ತಿರ ಹೋಗುವಾಗ ಸುಮಾರು 7-15ರ ಸಮಯ. ಆ ಸಮಯದಲ್ಲಿ ಬೆಂಕಿಯ ಉರಿ ಜೋರಾಗಿತ್ತು ಎನ್ನುತ್ತಾರೆ ಊರವರು. ಅಂದರೆ ಬೆಳಿಗ್ಗೆ ಆರರ ನಂತರವೇ ಬೆಂಕಿ ಬಿದ್ದಿದೆ! ಊರವರು ಮನೆಯ ಹತ್ತಿರ ಹೋಗುವಾಗ ಸುಟ್ಟಗಾಯಗಳೊಂದಿಗೆ ಮನೆಯ ಎದುರು ಬಾಗಿಲ ಹೊಸ್ತಿಲ ಹತ್ತಿರ ಭರತ್ ಬಂದು ಬಿದ್ದಿದ್ದಾನೆ. ಹೀಗೆ ಬಂದವನು ಊರವರನ್ನು ನೋಡುತ್ತಿದ್ದಂತೆ, ’ಎಲ್ಲ ಒಳಗಿದ್ದಾರೆ...’ ಎಂದಷ್ಟೇ ಹೇಳಿದ್ದಾನೆ. ಆಗ ಅವರೆಲ್ಲ ಭರತ್‌ನನ್ನು ಹೊರಗೆಳೆದುಕೊಂಡು ಬರುತ್ತಿದ್ದಂತೆ ತಕ್ಷಣಕ್ಕೆ ಅವನು ಊರಿನವರ ಹತ್ತಿರ ’ರಾತ್ರಿ ಅಮ್ಮ ಎದ್ದು ವಾಶ್ ರೂಮಿಗೆ ಹೋಗಿದ್ದವರು ಬಿದ್ದರು. ಬಿದ್ದ ತಕ್ಷಣ ಅವರ ಪ್ರಾಣ ಹೋಯಿತು. ಅಮ್ಮ ಸತ್ತ ವಿಷಯವನ್ನು ಅಪ್ಪನಿಗೆ ಹೇಳುತ್ತಿದ್ದಂತೆ ವಿಷಯ ಕೇಳಿದ ಅಪ್ಪನಿಗೆ ಹಾರ್ಟ್ ಫೇಲ್ ಆಯಿತು. ಅಪ್ಪ ಅಮ್ಮ ಇಬ್ಬರೂ ಒಂದೆರಡು ಕ್ಷಣದಲ್ಲಿ ಕಣ್ಣಮುಂದೇ ಸತ್ತು ಹೋಗಿದ್ದು ನೋಡಿದ ಅಣ್ಣ ಶಾಕ್ ತಡೆದುಕೊಳ್ಳಲಾಗದೆ ಹೋಗಿ ನೇಣು ಹಾಕಿಕೊಂಡ...’ ಎಂದಿದ್ದಾನೆ. ಬೆಂಕಿ ಹೇಗೆ ಹೊತ್ತಿಕೊಂಡಿತು, ಯಾರು ಹಚ್ಚಿದ್ದು ಎಂದೆಲ್ಲ ಕೇಳುವಾಗ ಅವನ ಉತ್ತರಗಳು ಗೊಜಗೊಜ ಅನ್ನಲಾರಂಭಿಸಿವೆ. ಇದರ ನಂತರವೇ ಆತ ’ನಾನ್ಯಾಕೆ ಬದುಕಿರಬೇಕು, ನನಗೆ ವಿಷ ಕೊಡ್ರೋ, ನನಗೆ ವಿಷದ ಇಂಜೆಕ್ಷನ್ ಕೊಡ್ರೋ... ನಾನು ಯಾರಿಗೋಸ್ಕರ ಬದುಕಬೇಕು?’ ಅಂತೆಲ್ಲ ಕೂಗಿಕೊಂಡಿದ್ದು, ಮನೆಯ ಹತ್ತಿರ ಇದ್ದ ಬಾವಿಗೆ ಹಾರಲು ಹೋಗಿದ್ದು! ಈ ಸ್ಥಿತಿಯಲ್ಲಿ ಕೇವಲ ಅಂಗಿ ಮತ್ತು ಒಳ ಉಡುಪಿನಲ್ಲಿದ್ದ ಭರತ್ ಮೈ ಮುಚ್ಚಿಕೊಳ್ಳಲು ಬಟ್ಟೆ ಕೊಡುವಂತೆಯೂ ಕೇಳಿದ್ದಾನೆ. ಸಾಲದ್ದಕ್ಕೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಮನೆಯೊಳಗಿರುವ ’ಇನ್‌ಹೇಲರ್’ ತಂದುಕೊಡುವಂತೆಯೂ ಭರತ್ ಊರವರ ಬಳಿ ಕೇಳಿದ್ದಾನಂತೆ! ಮುಖ, ಕೈ, ಕಾಲೆಲ್ಲ ಬೆಂಕಿಯಲ್ಲಿ ಸುಟ್ಟು ಹೋಗಿದ್ದ ಭರತ್‌ನನ್ನು ತಕ್ಷಣವೇ ತೀರ್ಥಹಳ್ಳಿಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ಡಾಕ್ಟರ್ ಇಲ್ಲಾಗುವುದಿಲ್ಲ ಎನ್ನುತ್ತಿದ್ದಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದಂತೆ ಭರತ್‌ಗೆ ಶೇಕಡಾ ಐವತ್ತರಷ್ಟು ಸುಟ್ಟ ಗಾಯಗಳಾಗಿವೆ.
ಭರತ್ ತನ್ನನ್ನು ಕಾಪಾಡಿದ ಊರಿನವರಿಗೆ ನೀಡಿದ ಹೇಳಿಕೆಯನ್ನೇ ಸತ್ಯ ಎಂದೇ ಪರಿಗಣಿಸುವುದಾದರೆ, ಮನೆಯಲ್ಲಿದ್ದ ಮೂವರೂ ಸತ್ತ ನಂತರ ಬದುಕುಳಿದಿದ್ದು ಭರತ್ ಒಬ್ಬನೇ! ಅಮ್ಮ ಮೊದಲು ಸತ್ತರು, ಅಮ್ಮ ಸತ್ತ ವಿಷಯ ಕೇಳಿದ ತಂದೆ ಸತ್ತರು. ಆನಂತರ ಅಣ್ಣನೂ ನೇಣು ಹಾಕಿಕೊಂಡ. ಇದನ್ನು ನೋಡಿ ಶಾಕ್‌ಗೊಳಗಾದ ಭರತ್ ಆನಂತರ ಏನು ಮಾಡಿದ? ಅವನೇ ಹೇಳುವಂತೆ ಈ ಎಲ್ಲವೂ ಮಧ್ಯರಾತ್ರಿಯ ಹೊತ್ತಿಗೆ ನಡೆದಿದೆ. ಅಲ್ಲಿಂದ ಬೆಳಿಗ್ಗೆಯ ತನಕ ಅಂದರೆ ಸುಮಾರು ಐದರಿಂದ ಆರು ಗಂಟೆಯ ತನಕ ಭರತ್ ಮನೆಯೊಳಗೆ ಏನು ಮಾಡಿರಬಹುದು? ಬೆಂಕಿ ಹತ್ತಿದ್ದು ಹೇಗೆ? ಎಲ್ಲಿಂದ? ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ. ಒಂದೊಮ್ಮೆ ಭರತ್ ಹೇಳುವಂತೆ ಅಪ್ಪ ಅಮ್ಮ ಸತ್ತ ನಂತರ ಅಣ್ಣ ತಮ್ಮ ಇಬ್ಬರೇ ಮನೆಯೊಳಗೆ ಉಳಿದರು. ಈ ಹಂತದಲ್ಲಿ ತಮ್ಮ ಹತ್ತಿರದ ಬಂಧುಗಳಿಗೋ, ಸ್ನೇಹಿತರಿಗೋ ಕರೆ ಮಾಡಿ ಅಪ್ಪ ಅಮ್ಮನಿಗೆ ಹೀಗಾಗಿದೆ ಎಂದು ಹೇಳಿಬಿಟ್ಟಿದ್ದರೆ ಬಹುಶಃ ಇಂತಹದ್ದೊಂದು ದುರಂತಕ್ಕೆ ಕಲ್ಲೋಣಿಯ ಕೇಕುಡ ಅವರ ಮನೆ ಸಾಕ್ಷಿಯಾಗುತ್ತಿರಲಿಲ್ಲವೇನೋ! ಅದನ್ನು ಮಾಡದೇ ಭರತ್ ಹೇಳಿರುವಂತೆ ಶ್ರೀರಾಮ್ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇಕೆ? ಊರವರು ಶ್ರೀರಾಮ್ ಹಾಗೆಲ್ಲ ಅಪ್ಪ ಅಮ್ಮ ಸತ್ತರು ಎಂದತಕ್ಷಣ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ ಎನ್ನುತ್ತಾರೆ. ಒಂದೊಮ್ಮೆ ಶ್ರೀರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಮೂವರೂ ಸತ್ತಿದ್ದನ್ನು ನೋಡಿದ ಭರತ್ ಹೊರಗಿನವರಿಗೆ ಆ ರಾತ್ರಿಯೇ ವಿಷಯ ತಿಳಿಸಬಹುದಿತ್ತಲ್ಲವಾ? ಹಾಗೆ ಮಾಡದೆ ಅವನೇಕೆ ಸುಮ್ಮನುಳಿದ? ಕೆಲ ದಿನಗಳಿಂದ ಊರಿನವರ ಹತ್ತಿರ ಹೇಳುತ್ತಿದ್ದಂತೆ, ಭರತ್ ಸಂಬಂಧಗಳ ವಿಷಯದಲ್ಲಿ ನಂಬಿಕೆ ಕಳೆದುಕೊಂಡಿದ್ದನಾ? ಆಸ್ತಿಯ ಬಗೆಗಿನ ಆಸೆಯೂ ಅವನಿಗೆ ಕಡಿಮೆಯಾಗಿತ್ತಾ? ಈ ಕಾರಣದಿಂದಲೇ ಯಾರಿಗೂ ವಿಷಯ ತಿಳಿಸದೆ ಬೆಳಗಿನ ಜಾವದ ತನಕ ಸತ್ತ ಮೂವರೊಂದಿಗೆ ಇದ್ದು, ತಾನೂ ಬೆಂಕಿ ಹಾಕಿಕೊಂಡು ಅವರೊಂದಿಗೇ ಹೊರಟು ಹೋಗುವ ನಿರ್ಧಾರ ಮಾಡಿಯೇ ಇದನ್ನೆಲ್ಲ ಮಾಡಿದನಾ? ಕೊನೆಗೆ ಬೆಂಕಿಯ ಉರಿ ತಾಳಲಾಗದೆ ಹೊರಗೆ ಬಂದು ಸಹಾಯಕ್ಕಾಗಿ ಕೂಗಿಕೊಂಡನಾ? ಭರತ್‌ನ ಹೇಳಿಕೆಯೇ ಈ ಎಲ್ಲಾ ಅನುಮಾನಗಳನ್ನು ಹುಟ್ಟಿಸುತ್ತವೆ.
ಇನ್ನೂ ವಿಚಿತ್ರವೆಂದರೆ, ಹೀಗಾಗಬೇಕು ಎಂದು ಮೊದಲೇ ನಿರ್ಧರಿಸಿಯೇ ಬೆಂಕಿ ಹಚ್ಚುವ ಕೆಲಸವಾಗಿದೆ ಎನ್ನುವುದಕ್ಕೆ ಆ ರೂಮಿನಲ್ಲಿರುವ ವಸ್ತುಗಳೇ ಸಾಕ್ಷಿ ಹೇಳುತ್ತವೆ. ಈ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಮೂರು ಶವಗಳು ಸಿಕ್ಕಿರುವ ರೂಮು ರಾಘವೇಂದ್ರ ಅವರ ಮನೆಯ ಮಲಗುವ ಕೋಣೆಯಾಗಿರಲಿಲ್ಲ ಎಂದು ಈ ಮನೆಗೆ ಹೋಗಿ ಬರುತ್ತಿದ್ದ ಊರಿನವರು ಹೇಳುತ್ತಾರೆ. ಮನೆಯೊಳಗೆ ಎಂಟ್ರಿಯಾಗುತ್ತಿದ್ದಂತೆ ಸಿಕ್ಕುವ ಹಾಲ್‌ನ ಪಕ್ಕದಲ್ಲೇ ಬೀರು ಹತ್ತಿರವಿದೆ ಆ ರೂಮು. ಆ ರೂಮಿನೊಳಗೆ ಮನೆಯ ಆಸ್ತಿಪತ್ರ, ಹಣ, ಬಟ್ಟೆ, ಮರದ ಹಲಗೆ, ಕಟ್ಟಿಗೆಯನ್ನೆಲ್ಲ ಒಟ್ಟಿ ಬೆಂಕಿ ಹಾಕಿಕೊಳ್ಳಲಾಗಿದೆ. ಮೊದಲು ಭರತ್‌ನನ್ನು ಹೊರಗೆಳೆದು ತಂದು ಮನೆಯೊಳಗೆ ಹೋದವರಿಗೆ ಮನೆಯ ಉಳಿದ ಸದಸ್ಯರು ಎಲ್ಲಿದ್ದಾರೆ ಎನ್ನುವುದೂ ತಕ್ಷಣಕ್ಕೆ ಗೊತ್ತಾಗಿಲ್ಲವಂತೆ... ಅಂದರೆ ಅವರೆಲ್ಲರೂ ಮನೆಯ ಸದಸ್ಯರು ಮಲಗುವ ಕೋಣೆಯನ್ನು ಹುಡುಕುವ ಪ್ರಯತ್ನ ಮಾಡಿ, ಆನಂತರ ಈ ರೂಮಿನಲ್ಲೇ ಬೆಂಕಿಯ ಮೂಲವಿದೆ ಎಂದು ಕಂಡುಕೊಂಡಿದ್ದಾರೆ.
ಹಾಗಿದ್ದರೆ, ಕಲ್ಲೋಣಿಯ ಆ ಮನೆಯೊಳಗೆ ನಿನ್ನೆ ಸಂಜೆಯ ತನಕ ಎಲ್ಲವೂ ಅರಾಮಾಗಿದ್ದದ್ದು, ಬೆಳಗಾಗುವ ಹೊತ್ತಿಗೆ ಇಡೀ ಕುಟುಂಬವನ್ನೇ ನಾಶ ಮಾಡಿಬಿಡುವ ಬೆಂಕಿಯಾಗಿದ್ದಾದರೂ ಹೇಗೆ? ಮೊದಲೇ ಇವೆಲ್ಲವೂ ಪ್ಲ್ಯಾನ್ ಆಗಿರಲಿಲ್ಲ ಎನ್ನುವುದು ನಿನ್ನೆ ಸಂಜೆ ಭರತ್ ಮತ್ತು ಶ್ರೀರಾಮ್‌ನನ್ನು ಭೇಟಿಯಾಗಿ ಮಾತನಾಡಿಸಿದ್ದ ಎಲ್ಲರಿಗೂ ಗೊತ್ತಿದೆ. ಅಂದರೆ ಸಂಜೆ ಪೇಟೆಯಿಂದ ಮನೆಗೆ ಹೋದ ನಂತರ ರಾತ್ರಿ ಏನೋ ನಡೆದಿದೆ. ಆ ’ಏನೋ’ ಎನ್ನುವುದು ಏನು? ಮನೆಯ ನಾಲ್ವರಲ್ಲದೇ ಹೊರಗಿನ ಯಾರಾದರೂ ರಾತ್ರಿ ಮನೆಗೆ ಬಂದಿದ್ದರಾ? ಆಸ್ತಿ, ಇರುವ ಸಾಲದ ವಿಚಾರಕ್ಕೆ, ತಂದೆಯನ್ನು ಕಾಡುತ್ತಿದ್ದ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ಜಟಾಪಟಿ ನಡೆಯಿತಾ? ಅದೇ ಈ ದುರಂತಕ್ಕೆ ಮೂಲವಾಯಿತಾ? ಅಥವಾ ಸಂಬಂಧ - ಆಸ್ತಿಯೆಲ್ಲ ’ಬೇಡ’ ಎನ್ನುವ ಮನಸ್ಥಿತಿಗೆ ಬಂದಿದ್ದ ಭರತ್ ಕೂಡಾ ತನ್ನ ಕುಟುಂಬದ ಪ್ರೀತಿಯ ಮೂವರೊಂದಿಗೇ ಬದುಕನ್ನು ಕೊನೆಗೊಳಿಸಿಕೊಳ್ಳಲು ಹೋಗಿ ಕೊನೇಕ್ಷಣದಲ್ಲಿ ಬದುಕುಳಿದುಬಿಟ್ಟನಾ? ಈ ಎಲ್ಲಾ ಪ್ರಶ್ನೆಗಳಿಗೆ ಸಿಕ್ಕುವ ಉತ್ತರ ದುರಂತದ ಹಿಂದಿನ ಸತ್ಯವನ್ನು ಅನಾವರಣಗೊಳಿಸಲಿದೆ.
ಕಾಮೆಂಟ್‌ಗಳಿಲ್ಲ