Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅಕ್ಟೋಬರ್‌ 3ರಿಂದ ಕೋಡೂರು ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭ

ಕೋಡೂರು : ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಪುರಾಣ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ಅಕ್ಟೋಬರ್ 3ರಂದು ಚಾಲನೆ ನೀಡಲಾಗುತ್ತದೆ. ಈಗಾಗಲೇ ಸೆಪ್ಟೆಂಬರ್ 28ರ ಗುರುವಾರ ಹಳೇ ಅಮ್ಮನ ಘಟ್ಟದ ದೇವಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜಾಕೈಂಕರ್ಯ ನಡೆದಿದ್ದು, 29ರಂದು ಕಂಕಣ ಕಟ್ಟಲಾಗಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ದೇಗುಲದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಅಕ್ಟೋಬರ್ 13ರವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜಾತ್ರೆ ನಡೆಯಲಿದೆ. ನವರಾತ್ರಿಯಲ್ಲಿ ಅಕ್ಟೋಬರ್ 10 ರಿಂದ ಅಕ್ಟೋಬರ್13ರ ವರೆಗೆ ವಿಶೇಷ ಪೂಜಾಕಾರ್ಯಗಳನ್ನು ಏರ್ಪಡಿಸಲಾಗಿದೆ. ಆಗಮಿಸುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಭಕ್ತಾದಿಗಳಿಗೆ ಹರಕೆ, ಹೊರಕಾಣಿಕೆ ಸಲ್ಲಿಸಲು, ಹೂವಿನ ಅಲಂಕಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಕಾರಣಕ್ಕೆ ತಾತ್ಕಾಲಿಕ ಮೂಲಸೌಕರ್ಯದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ತಾವು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಳಿಕ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಈಗಾಗಲೇ 30 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ 5 ಕೋಟಿ. ರೂ ಅನುದಾನದ ಅಗತ್ಯವಿದೆ. ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಹತ್ತಾರು ಜಾತಿ ಸಮಾಜದವರು ತಮ್ಮ ಮನೆದೇವರಂತೆ ಆರಾಧಿಸಿ, ಕಾಣಿಕೆ ಸಲ್ಲಿಸುತ್ತಾರೆ. ಕಿರಿದಾದ ಜಾಗದಿಂದ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಲು ವಿಶಾಲವಾದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದೇವೆ. ದೇವಸ್ಥಾನ ಸಮಿತಿ ನಿರ್ಮಾಣದ ಉದ್ದೇಶಕ್ಕಾಗಿ ಹಿಂದಿನ ಸರಕಾರ 1.50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ಬಂದ ಹಿನ್ನೆಲೆಯಲ್ಲಿ ಅನುದಾನದ ಹಣ ಬಿಡುಗಡೆಗೆ ತಡೆ ಹಿಡಿಯಲಾಯಿತು. ಈ ತನಕ ಚಿಕ್ಕಾಸು ಸಹಾ ಬಿಡುಗಡೆಯಾಗಿಲ್ಲ. ಸರಕಾರ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ವಿಜೇಂದ್ರರಾವ್, ಭಾಸ್ಕರ ಜೋಯ್ಸ್, ಧರ್ಮಪ್ಪ, ಹರೀಶ್ ಗೌಡ, ಪುಟ್ಟಪ್ಪ, ಸಂತೋಷ್ ನೀರೇರಿ, ಸುಧೀರ್, ಶ್ರೀನಿವಾಸ್, ರತ್ನಮ್ಮ, ಸರೋಜ ಮತ್ತಿತರರು ಇದ್ದರು.

ಅಕ್ಟೋಬರ್ 3ರ ಮಂಗಳವಾರ, 6ರ ಶುಕ್ರವಾರ, 10ರ ಮಂಗಳವಾರ ಹಾಗೂ 13ರ ಶುಕ್ರವಾರ ಶ್ರೀ ಜೇನುಕಲ್ಲಮ್ಮ ದೇವಿಯ ವಿಶೇಷ ಜಾತ್ರೆ ನಡೆಯಲಿದೆ.

VIDEO : ಕೋಡೂರು ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಅ. 3ಕ್ಕೆ ಚಾಲನೆ


ಕಾಮೆಂಟ್‌ಗಳಿಲ್ಲ