Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶಿವಮೊಗ್ಗ ಜಿಲ್ಲೆಯ ಪದವೀಧರರು ಪದವೀಧರರ ಕ್ಷೇತ್ರ ಮತದಾರರ ಪಟ್ಟಿಗೆ ಹೀಗೆ ಹೆಸರು ಸೇರ್ಪಡೆಗೊಳಿಸಿ...

ಶಿವಮೊಗ್ಗ: ನೀವು ಪದವೀಧರರಾಗಿದ್ದು ಈಗಾಗಲೇ ಪದವೀಧರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಲ್ಲವಾದರೆ, ಪದವೀಧರರಾಗಿದ್ದೂ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಈವರೆಗೂ ಮತ ಚಲಾವಣೆ ಮಾಡಿಲ್ಲವೆಂದರೆ, ಈಗ ಮತಪಟ್ಟಿಗೆ ನಿಮ್ಮ ಹೆಸರು ಸೇರ್ಪಡೆಗೊಳಿಸಲು ಭಾರತ ಚುನಾವಣಾ ಆಯೋಗ ಅವಕಾಶ ನೀಡಿದೆ. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಲು ಇವತ್ತಿನಿಂದ ಅಂದರೆ ಅಕ್ಟೋಬರ್‌ 1ನೇ ತಾರೀಖಿನಿಂದ ಅವಕಾಶ ನೀಡಲಾಗಿದೆ.

ಅರ್ಹತಾ ದಿನಾಂಕ 01.11.2023 ಕ್ಕೆ ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ದಪಡಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಭಾರತ ಚುನಾವಣಾ ಆಯೋಗವು ದಿನಾಂಕ 09.08.2023ರ ಪತ್ರದನ್ವಯ ಕರ್ನಾಟಕ ನೈರುತ್ಯ ಪದವೀಧರರ ಮತಕ್ಷೇತ್ರದ ಅಂದರೆ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕೂಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ (ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳು)ಯ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿರುವುದರಿಂದ, ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 18 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆಂದು ನಿರ್ದೇಶನ ನೀಡಿದೆ.

ನೈರುತ್ಯ ಪದವೀಧರರ ಮತ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಈ ಕೆಳಗಿನಂತ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿ ನಮೂನೆ 18 ರಲ್ಲಿ ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ 06.11.2023. 

ಕರಡು ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಮತ್ತು ದಿನ 23.11.2023. ಹಕ್ಕು ಮತ್ತು ಆಕ್ಷೇಪಣೆಗಾಗಿ ನಿಗದಿಪಡಿಸಿರುವ ಅವಧಿ 23.11.2023 ರಿಂದ 09.12.2023. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಮತ್ತು ದಿನ 30.12.2023.

ಕರ್ನಾಟಕ ನೈರುತ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಲು ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಿ.

1. ಅರ್ಹತಾ ದಿನಾಂಕ: 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. 

2. ದಿನಾಂಕ: 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ (ಭಾವ ಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಪದವಿಯ ಅಂಕಪಟ್ಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂದೃಢೀಕರಿಸಿ, ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ದಿನಾಂಕ 06.11.2023 ಒಳಗಾಗಿ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರ್ ಕಾರ್ಯಾಲಯದಲ್ಲಿ) ಸಲ್ಲಿಸಬಹುದು.

3. ಸೇವೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ, ಇಲಾಖಾ ಮುಖ್ಯಸ್ಥರು ತಮ್ಮ ಆಧೀನದಲ್ಲಿ ಬರುವ ಸರ್ಕಾರಿ ನೌಕರರ ಸೇವಾ ದಾಖಲೆಗಳನ್ನು ಪರಿಶೀಲಿಸಿ, ಆಯೋಗವು ನಿಗದಿಪಡಿಸಿರುವ 3ನೇ ಅನುಸೂಚಿತ ನಮೂನೆಯಲ್ಲಿ ದೃಢೀಕರಣ ಪತ್ರವನ್ನು ನೀಡಿ, ತಮ್ಮ ಕಚೇರಿಯ ಎಲ್ಲಾ ಅರ್ಹ ಸಿಬ್ಬಂದಿಗಳ ಅರ್ಜಿಗಳನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ದಿನಾಂಕ 05.11. 2023ರ ಒಳಗಾಗಿ ನೀಡಬಹುದು.

4. ವಕೀಲರು, ವೈದ್ಯರು, ಚಾರ್ಟೆಡ್ ಅಕೌಂಟೆಂಟ್‌ಗಳು ಹಾಗೂ ನೋಂದಾಯಿತ ಇಂಜಿನಿಯರ್ ಸಂಘದ ಸದಸ್ಯರು ದೃಢೀಕರಿಸಿದ ಪಟ್ಟಿಯೊಡನೆ ಅರ್ಜಿಯನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಬಹುದು. 

5. ಪ್ರಮಾಣ ಪತ್ರದೊಡನೆ ಕ್ಲೇಮುದಾರನು ತಾನು ಓದಿದ ಕಾಲೇಜಿನ ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ವಿಶ್ವ್ವವಿದ್ಯಾಲಯದ ರಿಜಿಸ್ಟ್ರಾರ‍್ರುಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು.

6. ಫಾರಂ-18ನ್ನು ಈಗಾಗಲೇ ಎಲ್ಲಾ ಗೊತ್ತುಪಡಿಸಿದ ಅಧಿಕಾರಿಗಳಿಗೆ ಒದಗಿಸಲಾಗಿದೆ. ಫಾರಂ-18 ನ ಅರ್ಹ ಮತದಾರರು ಉಚಿತವಾಗಿ ಸಂಬಂಧಪಟ್ಟ ಕಚೇರಿಯಿಂದ ಪಡೆಯಬಹುದಾಗಿದೆ.

7. ಅರ್ಹ ಪದವೀಧರರು, ಸಂಬಂಧಪಟ್ಟ ಅಧಿಕಾರಿಗಳಿಗೆ ಚುನಾವಣಾ ಗುರುತಿನ ಚೀಟಿಯ ಎಪಿಕ್ ನಂಬರ‍್ರಿಗೆ ಮಾಹಿತಿಯನ್ನು ಒದಗಿಸತಕ್ಕದ್ದು.

8. ಅರ್ಹ ಪದವೀಧರರು ಮೂಲ ಪದವಿ ಪ್ರಮಾಣ ಪತ್ರ ಮತ್ತು ಅದರ ಪ್ರತಿಯನ್ನು ಸ್ವಯಂ ದೃಢೀಕರಿಸಿಕೊಂಡು, ಗೊತ್ತುಪಡಿಸಿದ ಅಧಿಕಾರಿಯ ಮುಂದೆ ಖುದ್ದು ಹಾಜರಾಗಿ ಅವರಿಂದ ದೃಢೀಕರಿಸಿಕೊಂಡು ಅವರಲ್ಲಿಯೇ ಅರ್ಜಿಯನ್ನು ಕಡ್ಡಾಯವಾಗಿ ನೀಡಬೇಕು.

9. ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಿದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುತ್ತಾರೆ. ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.

10. ಬಲ್ಕ್ ಅಂದರೆ ಗುಚ್ಛಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

11. ಆಯೋಗವು ಮುಂಬರುವ ದಿನಗಳಲ್ಲಿ ಸದರಿ ನಮೂನ 18 ರ ಅರ್ಜಿಗಳನ್ನು ಇಆರ್‌ಎಂಎಸ್‌ನಲ್ಲಿ ಅಳವಡಿಸಲು ಉದ್ದೇಶಿಸಿದೆ.

12. ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳುವ ಕುರಿತು ಹಾಗೂ ಚುನಾವಣಾ ಪೂರ್ವ ತಯಾರಿ ಮಾಡಿಕೊಳ್ಳುವಂತೆ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಈ ಕಾರ್ಯಾಲಯದಿಂದ ನಿರ್ದೇಶನ ನೀಡಲಾಗಿದೆ.

ಕರ್ನಾಟಕ ನೈರುತ್ಯ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರ್ ಕಾರ್ಯಾಲಯದಲ್ಲಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸತಕ್ಕದ್ದು ಎಂದು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತದಾರರ ನೋಂದಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ