Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ರಿಪ್ಪನ್‌ಪೇಟೆಯಲ್ಲಿ ಅರ್ಥಪೂರ್ಣ ಕಾರ್ಮಿಕ ದಿನಾಚರಣೆ

ರಿಪ್ಪನ್‌‌ಪೇಟೆ : ಕಾರ್ಮಿಕ ದಿನಾಚರಣೆ ಎಂದರೆ ವೇದಿಕೆ, ಮೈಕು, ಭಾಷಣ ಅಲ್ಲ. ಕಷ್ಟದಲ್ಲಿರುವ ತಮ್ಮದೇ ಬಳಗದ ಕಾರ್ಮಿಕರ ಬದುಕಿಗೆ ನೆರವಾಗುವುದು, ನೆರಳಾಗುವುದು ಎನ್ನುವುದನ್ನು ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟವೂ ಕಷ್ಟದಲ್ಲಿರುವ ತಮ್ಮ ಸಂಘಟನೆಯ ಕಾರ್ಮಿಕರೊಬ್ಬರ ಕುಟುಂಬಕ್ಕೆ ನೆರವಾಗುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಮಂಗಳವಾರ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಿತು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕರಗುಚ್ಚಿ ಮತ್ತು ರಿಪ್ಪನ್‌ಪೇಟೆ ಠಾಣೆ ಪಿಎಸ್ಐ ಪ್ರವೀಣ್ ಎಸ್ ಪಿ ಅವರ ಸಮ್ಮುಖದಲ್ಲಿ ಸಂಘಟನೆಯ ಕಾರ್ಮಿಕರೊಬ್ಬರ ಮಗಳ ಚಿಕಿತ್ಸೆಗೆ ಸಂಗ್ರಹಿಸಿದ ಹಣವನ್ನು ನೀಡುವುದರೊಂದಿಗೆ, ವಲಸೆ ಕಾರ್ಮಿಕರಿಗೆ ಹಣ್ಣು ಹಂಪಲು ಹಾಗೂ ಸಿಹಿ ವಿತರಿಸುವ ಮೂಲಕ ಇಲ್ಲಿನ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟವು ಕಾರ್ಮಿಕ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿತು.

ಸಂಘಟನೆಯ ಕಾರ್ಮಿಕರೊಬ್ಬರ ಮಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳ ಅವಶ್ಯಕತೆ ಇರುವುದು ಸಂಘಟನೆಯ ಸದಸ್ಯರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಮಿಕ ಸಂಘಟನೆಯವರು ತಮ್ಮ ಕೈಲಾದ ಧನಸಹಾಯವನ್ನು ಮಾಡುವುದರ ಜೊತೆಗೆ ಸಾರ್ವಜನಿಕವಾಗಿ ಹಾಗೂ ವರ್ತಕ ಬಂಧುಗಳಿಂದ ಹಣ ಸಂಗ್ರಹ ಮಾಡಿ, ಆ ಮಗುವಿನ ತಂದೆಯಾದ ಸತೀಶ್ ಅವರಿಗೆ ನೀಡಿದರು. ಇದರೊಂದಿಗೆ ರಸ್ತೆಯ ಪಕ್ಕದಲ್ಲಿ ಕುಲುಮೆ ವೃತ್ತಿಯನ್ನು ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಹಣ್ಣು ಹಂಪಲು ಹಾಗೂ ಸಿಹಿ ವಿತರಣೆಯನ್ನು ಕೂಡಾ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಹೊಸನಗರ ಗ್ರಾಮಾಂತರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್, ಆಡಂಬರದ ಹಾರ ತುರಾಯಿಗಳನ್ನು ತಂದು ಹಾಗೂ ತಮ್ಮದೇ ಕುಟುಂಬದವರಿಗೆ ಸನ್ಮಾನಿಸುವುದು ಕಾರ್ಮಿಕ ದಿನಾಚರಣೆಯಾಗುವುದಿಲ್ಲ. ಕಷ್ಟದಲ್ಲಿ ಇರುವಂತಹ ಕಾರ್ಮಿಕ ಬಂಧುಗಳಿಗೆ ಆರ್ಥಿಕವಾಗಿ ನೆರವು ನೀಡಿ, ಮಾನಸಿಕವಾಗಿ ಧೈರ್ಯವನ್ನು ತುಂಬಿ ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎನ್ನುವ ಭರವಸೆಯನ್ನು ನೀಡುವುದೇ ನಿಜವಾದ ಕಾರ್ಮಿಕ ದಿನಾಚರಣೆ. ಆಗ ಈ ದಿನಕ್ಕೊಂದು ಅರ್ಥ ಬರುತ್ತದೆ ಎಂದರು, 

ಒಕ್ಕೂಟದ ಗೌರವಾಧ್ಯಕ್ಷರಾದ ಪ್ರಭಾಕರಾಚಾರ್ಯ ಮಾತನಾಡಿ, ನಿಜವಾದ ಕಟ್ಟಡ ಕಾರ್ಮಿಕರು ಮಾತ್ರ ಕಾರ್ಮಿಕರ ಕಾರ್ಡುಗಳನ್ನು ಮಾಡಿಸಿಕೊಳ್ಳಿ, ಕಟ್ಟಡ ಕೆಲಸಗಳನ್ನು ಮಾಡದೆ ಇರುವಂತಹ ವ್ಯಕ್ತಿಗಳು ಕಾರ್ಮಿಕರ ಕಾರ್ಡುಗಳನ್ನು ಮಾಡಿಸಿಕೊಂಡು ನಿಜವಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ತುತ್ತನ್ನು ಕಸಿಯಬೇಡಿ ಎಂದು ಮನವಿ ನೀಡಿದರು,

CLICK ಮಾಡಿ - 'ನಗರದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಏಳು ದಿನಗಳ ಮಕ್ಕಳ ಶಿಬಿರ - ವಿದ್ಯೆಯ ಜೊತೆ ಪ್ರಾಪಂಚಿಕ ಜ್ಞಾನವೂ ಮುಖ್ಯ : ಕಾತ್ಯಾಯಿನಿ ಕುಂಜಿಬೆಟ್ಟು'

ಹುಂಚ ಹೋಬಳಿ ಅಧ್ಯಕ್ಷರಾದ ಶಂಕರಾಚಾರ್ಯ ಕೆ ಮಾತನಾಡಿ, ಪುಟಾಣಿ ಮಗುವಿನ ಚಿಕಿತ್ಸೆಗೆ ಧನ ಸಹಾಯ ಮಾಡಿದಂತಹ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರಲ್ಲದೇ, ನಮ್ಮಲ್ಲಿರುವ ಮಾನವೀಯ ಗುಣಗಳನ್ನು ಜೀವಂತವಾಗಿರಿಸಿಕೊಳ್ಳಲು ಇಂತಹ ಕ್ಷಣಗಳು ನಮ್ಮದಾಗಬೇಕು ಎಂದು ಹೇಳಿದರು.

ಅರ್ಥಪೂರ್ಣ ಕಾರ್ಮಿಕ ದಿನಾಚರಣೆಯ ಈ ಕ್ಷಣದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಂಜಯ್ ಕುಮಾರ್ ಕೆ, ಕಾರ್ಯಾಧ್ಯಕ್ಷರಾದ ಸುಂದರ್ ಬಾಬು, ಬಟ್ಟೆಮಲ್ಲಪ್ಪ ಘಟಕದ ಅಧ್ಯಕ್ಷರಾದ ಕೃಷ್ಣಪ್ಪ ಆರ್, ಹೊಸನಗರ ಗ್ರಾಮಾಂತರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ರಿಪ್ಪನ್‌‌ಪೇಟೆ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ