ಕರ್ತವ್ಯದಲ್ಲಿ ನಿರ್ಲಕ್ಷ್ಯಆರೋಪ : ಎಂ.ಗುಡ್ಡೇಕೊಪ್ಪ ಪಿಡಿಓ ರವಿ ವರ್ಗಾವಣೆಗೆ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಗ್ರಾಮಸ್ಥರ ಒಕ್ಕೊರಲಿನ ಆಗ್ರಹ
ಹೊಸನಗರ: ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಎಸ್. ರವಿ ಕಾಲಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡದೇ, ಪ್ರತಿ ನಿತ್ಯ ಕಚೇರಿಗೆ ಗ್ರಾಮಸ್ಥರು ಅಲೆದಾಡುವಂತೆ ಮಾಡುವ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿರುವ ಪಂಚಾಯಿತಿ ಸದಸ್ಯರು, ಈ ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಕರ್ತವ್ಯ ನಿರ್ಲಕ್ಷ್ಯ ಕುರಿತು ಪಂಚಾಯಿತಿಯ ಚುನಾಯಿತ ಸದಸ್ಯರು ಪ್ರಶ್ನಿಸಿದಲ್ಲಿ ಸಮಂಜಸ ಉತ್ತರ ನೀಡದೆ, ಹಾರಿಕೆ ಉತ್ತರ ನೀಡುತ್ತ ಬೇಜವಾಬ್ದಾರಿ ತೋರುತ್ತ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎನ್ನುವ ಗಂಭೀರ ಆರೋಪ ಮಾಡಿರುವ ಸದಸ್ಯರು, ಈ ಕೂಡಲೇ ಪಿಡಿಓ ರವಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಇದೇ ಜನವರಿ 7ರಂದು ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರ ಸಹಿತ ಆಡಳಿತ ಸಮಿತಿ ಧರಣಿಗೆ ಮುಂದಾಗಲಿದೆ ಎಂದು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ತಾಲ್ಲೂಕು ಪಂಚಾಯಿತಿ ಕಚೇರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
CLICK ಮಾಡಿ - ನಾಳೆ ಹೊಸನಗರದಲ್ಲಿ ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ
ಅಲ್ಲದೆ, ಪಿಡಿಓ ರವಿ, ಗ್ರಾಮ ಪಂಚಾಯಿತಿ ಸದಸ್ಯರನ್ನು ಹಗುರವಾಗಿ ಕಾಣುತ್ತಿದ್ದಾರೆ. ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಅಗೌರವ ತೋರುತ್ತಿದ್ದಾರೆ. ಕಳೆದ 2024ರ ನವೆಂಬರ್ 29ರ ಸಾಮಾನ್ಯ ಸಭೆಯ ನಿರ್ಣಯವನ್ನು ಅಜೆಂಡಾ ರೀತಿ ದಾಖಲಿಸಿಲ್ಲ. ಅಧ್ಯಕ್ಷ ಹಾಗೂ ಸದಸ್ಯರ ಗಮನಕ್ಕೆ ಬಾರದಂತೆ ಸಾರ್ವಜನಿಕರ ಅರ್ಜಿಗಳಿಗೆ ಸಭಾ ನಿರ್ಣಯದಂತೆ ದಾಖಲಿಸದೆ, ಮೂಲ ನಿರ್ಣಯವನ್ನು ತಿರುಚಿ ಜನ ವಿರೋಧಿ ನಿರ್ಣಯ ದಾಖಲಿಸಿರುವುದು ಖಂಡನಾರ್ಹ ಎಂದಿದ್ದಾರೆ.
ಈ-ಸ್ವತ್ತು ಹಾಗೂ ರಶೀದಿ ಪುಸ್ತಕ ಕ್ರಮವಾಗಿ ನಿರ್ವಹಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಇಓ ಅವರಿಗೆ ಕಳೆದ ಡಿಸೆಂಬರ್ 12ರಂದು ಖುದ್ದು ಹಾಜರಾಗಿ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಪಿಡಿಓ ರವಿ ಅವರನ್ನು ಅಮಾನತುಗೊಳಿಸಿ ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ