SPECIAL REPORT - ನಗರದ 'ಮಲೆನಾಡು ಜೆರಾಕ್ಸ್' ಸೆಂಟರ‍್ರಿನಲ್ಲಿ ನಕಲಿ ಆಧಾರ್ ಕಾರ್ಡ್ ದಂಧೆ! ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ನಡೆದ ದಾಳಿಗೆ ಬೆಚ್ಚಿಬಿದ್ದ ನಗರ ಹೋಬಳಿಯ ಜನ!
ಇನ್ನೊಂದು ನಕಲಿ ಸರ್ಕಾರಿ ದಾಖಲೆ ಜಾಲ ಹೊಸನಗರ ತಾಲ್ಲೂಕಿನಲ್ಲಿ ಪತ್ತೆಯಾಗಿದೆ.
ಹೌದು, ಸೆಪ್ಟೆಂಬರ್ ತಿಂಗಳಿನಲ್ಲಿ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೇಕೊಪ್ಪದಲ್ಲಿ ನಕಲಿ ಹಕ್ಕುಪತ್ರ ಜಾಲವೊಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಈಗ ನಗರದ ಮಲೆನಾಡು ಜೆರಾಕ್ಸ್ ಸೆಂಟರ‍್ರಿನಲ್ಲಿ ಆಕ್ಟಿವ್ ಆಗಿದ್ದ ಆಧಾರ್ ಕಾರ್ಡ್ ಜೊತೆಗೆ ವೋಟರ್ ಐಡಿ ಇತ್ಯಾದಿ ಸೇರಿದಂತೆ ಸರ್ಕಾರದ ವಿವಿಧ ದಾಖಲೆಗಳನ್ನು ನಕಲು ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದ್ದು, ನಗರ ಸುತ್ತಮುತ್ತಲಿನ ಜನರು ತಮ್ಮ ಆಧಾರ್ ಕಾರ್ಡ್ ಒರಿಜಿನಲ್ಲೋ, ನಕಲಿಯೋ ಎಂದು ಅನುಮಾನಕ್ಕೆ ಬೀಳುವಂತಾಗಿದೆ.
ಬೇರೆ ಏನೇ ಇರಲಿ, ಹೀಗೆ ಕೆಲವೇ ತಿಂಗಳುಗಳ ಅಂತರದಲ್ಲಿ ಸರ್ಕಾರಿ ದಾಖಲೆಗಳನ್ನು ಬೇಕಾಬಿಟ್ಟಿ ನಕಲು ಮಾಡುತ್ತಿದ್ದ ಖದೀಮರಿಗೆ ಚಳಿ ಬಿಡಿಸಿದ ತಹಶೀಲ್ದಾರ್ ರಶ್ಮಿ ಅವರನ್ನು ಅಭಿನಂದಿಸಲೇಬೇಕು.
ಜೆರಾಕ್ಸ್ ಅಂಗಡಿ ಹೆಸರಿನಲ್ಲಿ ನಕಲಿ ದಾಖಲೆಗಳ ದಂಧೆ: ಹೊಸನಗರ ತಾಲ್ಲೂಕಿನ ನಗರ ಹೋಬಳಿ ಕೇಂದ್ರವಾದ ನಗರದ ಗ್ರಾಮ ಪಂಚಾಯ್ತಿ ಕಚೇರಿ ಎದುರಿನಲ್ಲಿ ಇರುವ ಬೇಬಿ ಬಿನ್ ರಾಮಚಂದ್ರಯ್ಯ ಇವರಿಗೆ ಸೇರಿದ ಕಟ್ಟಡದಲ್ಲಿ ನಡೆಯುತ್ತಿದ್ದ ’ಮಲೆನಾಡು ಜೆರಾಕ್ಸ್’ ಸೆಂಟರ‍್ರು ಕೇವಲ ಜೆರಾಕ್ಸ್ ಸೆಂಟರ್ ಮಾತ್ರ ಆಗಿರಲಿಲ್ಲ. ಇಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗುತ್ತಿತ್ತು. ಅಧಿಕೃತ ದಾಖಲೆ ಹಾಗೂ ಲಾಗಿನ್ ಅನುಮತಿ ಪಡೆದು ಮಾಡಬೇಕಾದ ಈ ಕೆಲಸವನ್ನು ಮಲೆನಾಡು ಜೆರಾಕ್ಸ್ ಸೆಂಟರ‍್ರಿನಲ್ಲಿ ಅಕ್ರಮವಾಗಿ ಮಾಡಲಾಗುತ್ತಿತ್ತು. ಇದರೊಂದಿಗೆ ವೋಟರ್ ಐಡಿ, ರೇಶನ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ ಸೇರಿದಂತೆ ಹತ್ತು ಹಲವು ಸರ್ಕಾರಿ ದಾಖಲೆಗಳ ನಕಲು ಸೃಷ್ಟಿಯಾಗುತ್ತಿತ್ತು. ನಿಧಾನವಾಗಿ ಈ ಬಗ್ಗೆ ನಗರದೆಲ್ಲೆಡೆ ಗುಸುಗುಸು ಪ್ರಾರಂಭವಾಗಿ, ಕೊನೆಗೆ ಈ ಬಗ್ಗೆ ಸಾರ್ವಜನಿಕರಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು.
ಈ ದೂರನ್ನು ಅಪರೂಪಕ್ಕೆಂಬಂತೆ ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯವರು ಹೊಸನಗರ ತಹಶೀಲ್ದಾರ್ ಕಚೇರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ (No:MAG(5)/MISC.8/2024-25/506231, ದಿನಾಂಕ -14/11/2024) ತಿಳಿಸಿದ್ದಾರೆ. ಇದರಂತೆ ತಹಶೀಲ್ದಾರ್ ರಶ್ಮಿ ನವೆಂಬರ್ 19ರಂದು ನಗರ ಹೋಬಳಿ ಆರ್‌ಐ ಸುರೇಶ್ ಆರ್.ಪಿ, ವಿಎ ಸುನೀಲ್ ದೇವಾಡಿಗ, ಸಿದ್ಧಪ್ಪ ಚೂರೇರಾ, ಲೋಹಿತ್ ಮತ್ತು ನಾಡ ಕಚೇರಿಯ ಆಪರೇಟರ್ ರಾಘವೇಂದ್ರ ಕಿಣಿ ಎನ್ನುವವರ ಜೊತೆ ಮಧ್ಯಾಹ್ನ 4.15ರ ಸುಮಾರಿಗೆ ಮಲೆನಾಡು ಜೆರಾಕ್ಸ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಯುವ ಸಂದರ್ಭದಲ್ಲಿ ಈ ಜೆರಾಕ್ಸ್ ಅಂಗಡಿಯ ಓನರ್ ನಗರ ಮೂಡುಗೊಪ್ಪದ ಇಸ್ಮಾಯಿಲ್ ಅಲ್ಲಿರಲಿಲ್ಲ. ಕೇವಲ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗಿಯರು ಮಾತ್ರ ಇದ್ದರು. ತಕ್ಷಣವೇ ಈ ಹುಡುಗಿಯರು ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಸೇರಿದಂತೆ ಇಡೀ ಅಂಗಡಿಯನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡ ತಹಶೀಲ್ದಾರ್ ಮತ್ತು ಸಿಬ್ಬಂದಿ ಕಂಪ್ಯೂಟರ‍್ರಿನಲ್ಲಿದ್ದ ಮಾಹಿತಿ ಮತ್ತು ಅಲ್ಲಿದ್ದ ದಾಖಲೆಗಳನ್ನು ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ!
ಕೇವಲ ನಕಲಿ ಆಧಾರ್ ಕಾರ್ಡ್ ಮಾತ್ರವಲ್ಲ... : ಯಾಕೆಂದರೆ, ಅಲ್ಲಿ ಕೇವಲ ನಕಲಿ ಆಧಾರ್ ಕಾರ್ಡ್ ಆಗುತ್ತಿರಲಿಲ್ಲ. ವೋಟರ್ ಐಡಿ ಕಾರ್ಡ್, ಪಾನ್ ಕಾರ್ಡ್, ರೇಶನ್ ಕಾರ್ಡ್‌ಗಳನ್ನು ಕೂಡಾ ಅನಧಿಕೃತವಾಗಿ ಲಾಗಿನ್ ಆಗಿ ತಿದ್ದುಪಡಿ ಮಾಡುತ್ತಿದ್ದದ್ದೇ ಅಲ್ಲದೇ, ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಸರ್ಕಾರಕ್ಕೆ ಸೇರಿದ ಹತ್ತು ಹಲವು ದಾಖಲೆಗಳನ್ನು ಇಲ್ಲಿ ಅಕ್ರಮವಾಗಿ ರೆಡಿ ಮಾಡಿಕೊಡಲಾಗುತ್ತಿತ್ತು. ಒಂದು ಮೂಲದ ಪ್ರಕಾರ ಇಸ್ಮಾಯಿಲ್ ಕೇಂದ್ರ ಸರ್ಕಾರದ ಆಧಾರ್ ವೆಬ್‌ಸೈಟನ್ನೇ ಹ್ಯಾಕ್ ಮಾಡಿ ಆಧಾರ್ ಕಾರ್ಡ್‌ಗಳ ತಿದ್ದುಪಡಿ ಮಾಡುತ್ತಿದ್ದ ಎನ್ನುವ ಅನುಮಾನವೂ ಹುಟ್ಟಿಕೊಂಡಿದೆ. ಈ ಮಟ್ಟದಲ್ಲಿ ಅಂದರೆ ಆಧಾರ್ ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡುವುದು ಇಸ್ಮಾಯಿಲ್ ಒಬ್ಬ ಕೆಲಸವಾಗಿರಲಿಕ್ಕಿಲ್ಲ. ಅಂದರೆ ಇವನೊಂದಿಗೆ ಒಂದು ವ್ಯವಸ್ಥಿತ ಜಾಲವೇ ಈ ಕೆಲಸ ಮಾಡುತ್ತಿದ್ದು, ಇನ್ನೂ ತಾಲ್ಲೂಕಿನ ಎಲ್ಲೆಲ್ಲಿ ಇಂತಹ ಅಕ್ರಮಗಳಿವೆಯೋ ಎನ್ನುವ ಅನುಮಾನವೂ ಈಗ ಹುಟ್ಟಲಾರಂಭಿಸಿದೆ.
ಜೆರಾಕ್ಸ್ ಅಂಗಡಿಯ ಮೇಲೆ ದಾಳಿ ಮಾಡುತ್ತಿದ್ದಂತೆ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು ಅಲ್ಲಿದ್ದ ಹುಡುಗಿಯರ ಬಳಿ ಇಸ್ಮಾಯಿಲ್‌ನ ನಂಬರ‍್ರು ಪಡೆದುಕೊಂಡು ಅವನ ಮೊಬೈಲ್ ನಂಬರ‍್ರಿಗೆ ಕಾಲ್ ಮಾಡಿದ್ದಾರೆ. ಆದರೆ ದಾಳಿಯ ಬಗ್ಗೆ ಅದು ಯಾರಿಂದ ತಿಳಿದುಕೊಂಡಿದ್ದನೋ ಇಸ್ಮಾಯಿಲ್ ಕಾಲ್ ರಿಸೀವ್ ಮಾಡಿಲ್ಲ. ಆನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರ ಮೊಬೈಲಿನಿಂದ ಕಾಲ್ ಮಾಡಿಸಿದ್ದಾರೆ. ಆಗಲೂ ಇಸ್ಮಾಯಿಲ್ ಕಾಲ್ ರಿಸೀವ್ ಮಾಡದೆ ಗುಪ್ಪಗೆ ಅಡಗಿಕೊಂಡಿದ್ದಾನೆ. ಈ ನಡುವೆ ಸರ್ಕಾರದ ಈ ದಾಖಲೆಗಳನ್ನೆಲ್ಲ ತಿದ್ದುಪಡಿ ಮಾಡಲಿಕ್ಕೆ ಅಧಿಕೃತವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಪಡೆದುಕೊಂಡಿರುವ ಅನುಮತಿ ಪತ್ರ ಇತ್ಯಾದಿ ಕೇಳಿದರೆ ಅದು ಕೂಡಾ ಜೆರಾಕ್ಸ್ ಅಂಗಡಿಯಲ್ಲಿ ಕಾಣಿಸಿಲ್ಲ. ಅಲ್ಲಿಗೆ ಇದು ಅಕ್ರಮ ನಕಲಿ ದಾಖಲೆಗಳ ಜಾಲ ಎಂದು ದೃಢವಾಗುತ್ತಿದ್ದಂತೆ ತಹಶೀಲ್ದಾರ್ ಮತ್ತು ಸಿಬ್ಬಂದಿ ಕಂಪ್ಯೂಟರ್, ಪ್ರಿಂಟರ್, ಬಯೋಮೆಟ್ರಿಕ್ ಸಾಧನ, ಲ್ಯಾಮಿನೇಶನ್ ಮಾಡುವ ಯಂತ್ರ, ಕಾರ್ಡ್ ಕಟ್ಟರ್, ಸ್ಟೆಪ್ಲರ್ ಮೆಶಿನ್ ಸೇರಿದಂತೆ ಅಕ್ರಮಕ್ಕೆ ಬಳಸುತ್ತಿದ್ದ ಸಾಮಾಗ್ರಿಗಳನ್ನೆಲ್ಲ ವಶಕ್ಕೆ ತೆಗೆದುಕೊಂಡು, ಇಸ್ಮಾಯಿಲ್ ಮಾಲೀಕತ್ವದ ಮಲೆನಾಡು ಜೆರಾಕ್ಸ್ ಅಂಗಡಿಗೆ ಬೀಗಮುದ್ರೆ ಜಡಿದಿದ್ದಾರೆ.
ನಗರ ಠಾಣೆಯಲ್ಲಿ FIR ದಾಖಲು: ಆನಂತರ ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಅಂದೇ ತಹಶೀಲ್ದಾರ್ ರಶ್ಮಿ ದೂರು ನೀಡಿದ್ದು, ಈ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65,66 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 336(2), 337 ರಡಿಯಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದೆ.
ಕೆಲವೇ ತಿಂಗಳುಗಳ ಹಿಂದೆ ಎಲ್.ಗುಡ್ಡೇಕೊಪ್ಪದ ರಾಜೇಂದ್ರ ಎಂಬಾತ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದಿದ್ದ. ಈಗ ನಗರದ ಮಲೆನಾಡು ಜೆರಾಕ್ಸ್ ಸೆಂಟರ‍್ರಿನ ಇಸ್ಮಾಯಿಲ್‌ನ ಸರದಿ. ಈ ಇಸ್ಮಾಯಿಲ್ ಒಬ್ಬನೇ ಈ ನಕಲಿ ದಾಖಲೆಗಳ ಜಾಲದ ಹಿಂದೆ ಇಲ್ಲ, ಇನ್ನೂ ಕೆಲವು ಪ್ರಭಾವಿಗಳು ಇದರ ಹಿಂದೆ ಇದ್ದಾರೆ ಎನ್ನುವ ಮಾತುಗಳನ್ನು ನಗರದ ಜನರು ಆಡುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ಕೆಲವು ಸರ್ಕಾರಿ ಕಚೇರಿಗಳು ಈ ನಕಲಿ ಜಾಲಕ್ಕೆ ಬೆಂಬಲವಾಗಿ ನಿಂತಿದ್ದವು ಎನ್ನಲಾಗುತ್ತಿದೆ. ಈತನಿಗೆ ಸರ್ಕಾರದಿಂದ ಯಾವುದೇ ಅಧಿಕೃತ ಅನುಮತಿ ಇಲ್ಲದೇ ಹೋದರೂ, ಇಲ್ಲಿನ ಸರ್ಕಾರಿ ಕಚೇರಿಗಳ ಕೆಲವು ಸಿಬ್ಬಂದಿಗಳು ಆಧಾರ್ ಕಾರ್ಡ್ ತಿದ್ದುಪಡಿ ಸೇರಿದಂತೆ ಯಾವುದೇ ಸರ್ಕಾರಿ ದಾಖಲೆ ತಿದ್ದುಪಡಿಯಾಗಬೇಕು, ಹೊಸ ದಾಖಲೆ ಬೇಕು ಎಂದರೆ ಇದೇ ಜೆರಾಕ್ಸ್ ಸೆಂಟರ‍್ರಿಗೆ ಕಳಿಸುತ್ತಿದ್ದರು ಎನ್ನುವ ಆರೋಪವೂ ಕೂಡಾ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಯಾಗಿ ಈ ನಕಲಿ ಜಾಲದವರು ಸರ್ಕಾರಿ ಕಚೇರಿಗಳಿಗೂ, ಕೆಲವು ಪ್ರಭಾವಿಗಳಿಗೂ ಶೇರ್ ಕೊಡುತ್ತಿದ್ದರು ಎನ್ನುವ ಗುಸುಗುಸು ಕೂಡಾ ಇದೆ. ಹೀಗೆ ಶೇರ್ ಪಡೆದುಕೊಂಡ ಕೆಲವರು ತಹಶೀಲ್ದಾರ್ ದಾಳಿಯನ್ನು ತಡೆಯುವ ಹುನ್ನಾರ ಕೂಡಾ ನಡೆಸಿದ್ದರಾದರೂ ಅದು ಸಕ್ಸಸ್ ಆಗದೆ ತಹಶೀಲ್ದಾರ್ ರಶ್ಮಿ ದಾಳಿ ನಡೆಸಿ ಇನ್ನೊಂದು ನಕಲಿ ಸರ್ಕಾರಿ ದಾಖಲೆ ಜಾಲದ ಹೆಡೆಮುರಿ ಕಟ್ಟಿದ್ದಾರೆ.
ಸತತ 4 ಗಂಟೆಗಳ ಕಾಲ ನಡೆದ ದಾಳಿ: ಈ ದಾಳಿ ಅದೆಷ್ಟು ದೀರ್ಘವಾಗಿತ್ತೆಂದರೆ, ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಜೆರಾಕ್ಸ್ ಅಂಗಡಿ ಹೊಕ್ಕ ತಹಶೀಲ್ದಾರ್ ಮತ್ತು ಸಿಬ್ಬಂದಿ ಹೊರ ಬರುವಾಗ ಎಫ್‌ಐಆರ್‌ನಲ್ಲಿ ನಮೂದಾಗಿರುವ ಸಮಯದ ಪ್ರಕಾರ ರಾತ್ರಿ 8.30 ಆಗಿದೆ. ಅಂದರೆ ಅದೆಷ್ಟು ನಕಲಿ ದಾಖಲೆಗಳು ಸಿಕ್ಕಿರಬಹುದು, ಊಹಿಸಿ. ಈ ಜೆರಾಕ್ಸ್ ಅಂಗಡಿಯ ಇಸ್ಮಾಯಿಲ್ ಮತ್ತು ಅವನೊಂದಿಗೆ ಈ ಅಕ್ರಮದಲ್ಲಿ ಭಾಗಿಯಾದ ಜಾಲದ ಇತರರು ಹಳ್ಳಿಯ ಜನರಿಂದ ಅವರ ಬಳಿ ಇರುವ ಹಲವು ಸರ್ಕಾರಿ ದಾಖಲೆಗಳ ಒರಿಜಿನಲ್ ಪ್ರತಿಯನ್ನು ಕೂಡಾ ತಿದ್ದುಪಡಿಗೆ ಬೇಕು ಮತ್ತು ಅದು ನಮ್ಮ ಬಳಿಯೇ ಇರಬೇಕು ಎಂದು ಹೇಳಿ ಅಂಗಡಿಯಲ್ಲೇ ಇಟ್ಟುಕೊಂಡಿದ್ದರು ಎಂದು ನಗರದ ಗ್ರಾಮಸ್ಥರು ಈಗ ಬಾಯಿ ಬಿಡುತ್ತಿದ್ದಾರೆ. ಯಾರ‍್ಯಾರದ್ದೋ ಇಂತಹ ಒರಿಜಿನಲ್ ದಾಖಲೆಗಳನ್ನು ಇಟ್ಟುಕೊಂಡು ಮಲೆನಾಡು ಜೆರಾಕ್ಸಿನಲ್ಲಿ ಇನ್ನ್ಯಾವ ಸ್ಕ್ಯಾಮ್ ಮಾಡಲಾಗುತ್ತಿತ್ತೋ?! ಎನ್ನುವ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ಇನ್ನು ಕೆಲವರು ಹೇಳುವಂತೆ, ಉತ್ತರ ಭಾರತದಿಂದ ನಗರ ಹಾಗೂ ಸುತ್ತಮುತ್ತ ಕೆಲಸಕ್ಕೆಂದು ಬಂದವರಿಗೂ ಸ್ಥಳೀಯ ನಿವಾಸಿಗಳು ಎನ್ನುವಂತೆ ಕೆಲವು ದಾಖಲೆಗಳನ್ನು ಈ ಮಲೆನಾಡು ಜೆರಾಕ್ಸ್ ಸೆಂಟರ‍್ರಿನಲ್ಲಿ ಮಾಡಿಕೊಡಲಾಗುತ್ತಿತ್ತಂತೆ. ನಕಲಿ ಆಧಾರ್ ಕಾರ್ಡ್‌ನ್ನೇ ಸೃಷ್ಟಿಸುತ್ತಿದ್ದಾರೆ ಎಂದರೆ ಇನ್ನು ಇವರು ಸರ್ಕಾರದ ಯಾವ ದಾಖಲೆಗಳನ್ನು ಬೇಕಾದರೂ ಸೃಷ್ಟಿಸಬಲ್ಲರು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ಮಾಧ್ಯಮಗಳಲ್ಲೂ ಹೆಚ್ಚು ಸುದ್ದಿಯಾಗದ ದಾಳಿ: ಹೊಸನಗರ ತಾಲ್ಲೂಕಿನಲ್ಲೇ ಬೃಹತ್ ಅನ್ನಬಹುದಾದ ಅದರಲ್ಲೂ ಆಧಾರ್ ಕಾರ್ಡ್‌ನ್ನೇ ನಕಲು ಮಾಡುವಂತಹ ಜಾಲವೊಂದರ ಮೇಲೆ ದಾಳಿ ನಡೆದು, ಎಫ್‌ಐಆರ್ ದಾಖಲಾದರೂ ಈ ಬಗ್ಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಅಂತಹ ದೊಡ್ಡ ಸುದ್ದಿಯಾಗದೇ ಇರುವುದು ಸೋಜಿಗದ ಸಂಗತಿ. ಆಧಾರ್ ಕಾರ್ಡ್‌ನ್ನೇ ನಕಲು ಮಾಡುತ್ತಾರೆಂದರೆ ಇವರು ಸರ್ಕಾರದ ಯಾವ ದಾಖಲೆಯನ್ನು ಬೇಕಾದರೂ ನಕಲು ಮಾಡಬಲ್ಲ ಖದೀಮರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೀಗಿರುವಾಗ ಈ ದಾಳಿ ಬಗ್ಗೆ ಹೆಚ್ಚು ಸುದ್ದಿಯಾಗದಂತೆ ನೋಡಿಕೊಂಡಿದ್ದರ ಹಿಂದೆ ನಗರದ ಕೆಲವು ಪ್ರಭಾವಿಗಳು ಕೆಲಸ ಮಾಡಿದ್ದಾರೆ ಎನ್ನುವ ಅಸಮಾಧಾನವನ್ನು ನಗರದ ಕೆಲವರು ವ್ಯಕ್ತಪಡಿಸುತ್ತಾರೆ. ಅಂದರೆ ನಾಳೆಯೇನಾದರೂ ಮತ್ತೆ ಮಲೆನಾಡು ಜೆರಾಕ್ಸ್ ಅಥವಾ ಇಸ್ಮಾಯಿಲ್ ಬೇರೆ ಹೆಸರಿನಲ್ಲಿ ಅಂಗಡಿ ತೆರೆದರೂ ಜನರಿಗೆ ಈತ ನಕಲಿ ದಾಖಲೆ ಮಾಡಿಕೊಡುವವನು ಎನ್ನುವ ಅರಿವಿಲ್ಲದೇ ಇವನ ಬಳಿ ದಾಖಲೆ ಮಾಡಿಸಿಕೊಳ್ಳಲು ಹೋಗುತ್ತಾರೆ. ಈ ಮೂಲಕ ಈತನ ನಕಲಿ ದಾಖಲೆ ದಂಧೆಗೂ ಏನೂ ತೊಂದರೆಯಾಗುವುದಿಲ್ಲ ಮತ್ತು ಇಲ್ಲಿ ಕೆಲವರಿಗೆ ಸಿಗುತ್ತಿದ್ದ ಶೇರ್ ಕೂಡಾ ಸರಿಯಾಗಿಯೇ ಸಿಗಲಾರಂಭಿಸುತ್ತದೆ ಎನ್ನುವ ಹುನ್ನಾರವೇ ಸಣ್ಣದಾಗಿ ಒಂದಿಷ್ಟು ಸುದ್ದಿಯಾಗುವಂತೆ ಮಾಡಿದೆ ಮತ್ತು ಈ ದಾಳಿ ಬಗ್ಗೆ ನಗರ ಸುತ್ತಮುತ್ತಲಿನ ಜನರಿಗೆ ತಿಳಿಯದಂತೆ ಜಾಲವೊಂದು ವ್ಯವಸ್ಥಿತವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ರಿಪ್ಪನ್‌ಪೇಟೆಯಲ್ಲಿ ದಾಳಿ ಯಾವ್ಯಾಗ?: ಒಟ್ಟಿನಲ್ಲಿ ಹೊಸನಗರ ತಾಲ್ಲೂಕಿನಲ್ಲೇ ದೊಡ್ಡಮಟ್ಟದ ನಕಲಿ ಸರ್ಕಾರಿ ದಾಖಲೆಗಳ ಜಾಲವೊಂದು ನಗರದ ಕೆಲವು ಪ್ರಭಾವಿಗಳ ನೆರಳಿನಲ್ಲೇ ಇಷ್ಟು ವರ್ಷಗಳ ಕಾಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಈಗ ತಹಶೀಲ್ದಾರ್ ರಶ್ಮಿ ಅವರ ದಾಳಿಯಿಂದಾಗಿ ಸಧ್ಯ ಸ್ಥಗಿತಗೊಂಡಂತಾಗಿದೆ. ನಕಲಿ ಸರ್ಕಾರಿ ದಾಖಲೆಗಳ ಜಾಲದ ಬೆನ್ನು ಬಿದ್ದಿರುವ ತಹಶೀಲ್ದಾರ್ ರಶ್ಮಿ ಅವರು ಈ ನಡುವೆ ರಿಪ್ಪನ್‌ಪೇಟೆಯತ್ತಲೂ ಒಮ್ಮೆ ಹೋಗಬೇಕಿದೆ. ಯಾಕೆಂದರೆ ಟೈಪಿಂಗ್ ಸೆಂಟರ್ ಹೆಸರಿನಲ್ಲಿ ಅಪ್ಪ ಮಗ ಜೋಡಿ ಅನಾದಿ ಕಾಲದಿಂದಲೂ ಹಕ್ಕುಪತ್ರ ಸೇರಿದಂತೆ ಸರ್ಕಾರದ ಹತ್ತು ಹಲವು ದಾಖಲೆಗಳನ್ನು ನಕಲಿ ಮಾಡುತ್ತಲೇ ಬಂದಿದ್ದು, ಇವರ ಹೆಡೆಮುರಿ ಕಟ್ಟಿದರೆ ಹೊಸನಗರ ತಾಲ್ಲೂಕಿನ ನಕಲಿ ದಾಖಲೆಗಳ ದಂಧೆಗೆ ದೊಡ್ಡ ಬ್ರೇಕ್ ಬಿದ್ದಂತಾಗುತ್ತದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ರಶ್ಮಿ ಅವರು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎನ್ನುವುದು ರಿಪ್ಪನ್‌ಪೇಟೆ ಗ್ರಾಮಸ್ಥರ ಮನವಿಯಾಗಿದೆ.
ಕಾಮೆಂಟ್‌ಗಳಿಲ್ಲ