ಶಾಸಕ ಸಿ.ಟಿ.ರವಿ ಹೇಳಿಕೆಗೆ ಹೊಸನಗರ ಬ್ಲಾಕ್ ಕಾಂಗ್ರೆಸ್ ವ್ಯಾಪಕ ಖಂಡನೆ - ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾರಿಶಕ್ತಿಯ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಹೊಸನಗರ : ಇತ್ತೀಚಿನ ಬೆಳಗಾವಿ ವಿಧಾನಪರಿಷತ್ತಿನ ಚಳಿಗಾಲ ಅಧಿವೇಶನದ ವೇಳೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ - ಅಸಂವಿಧಾನಿಕ ಪದ ಪ್ರಯೋಗ ಮಾಡುವ ಮೂಲಕ ಅವಹೇಳನ ಮಾಡಿರುವ ಬಿಜೆಪಿ ಮಾಜಿ ಸಚಿವ, ವಿಧಾನ ಪರಿಷತ್ತಿನ ಹಾಲಿ ಸದಸ್ಯ ಸಿ.ಟಿ. ರವಿ ಅವರ ರಾಜಕೀಯ ನಡೆಯನ್ನು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಪ್ರಕೃತಿಯಲ್ಲಿ ಮಾತೆಯನ್ನು ಕಂಡು ಪೂಜಿಸುವ ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ತಿಲಾಂಜಲಿ ನೀಡುವ ಹೇಳಿಕೆ ನೀಡಿರುವ ಶಾಸಕ ಸಿ.ಟಿ. ರವಿ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ನಾರಿಶಕ್ತಿಯ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಆಗ್ರಹಿಸಿದರು.
ಕಳೆದ ಲೋಕಸಭಾ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ವಿಧಾನ ಪರಿಷತ್ತಿನ ಕಲಾಪದ ವೇಳೆ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ನೀಡಿದ ಹೇಳಿಕೆ ಖಂಡಿಸಿ ಇಲ್ಲಿನ ತಾಲ್ಲೂಕು ಕಛೇರಿ ಎದುರು ಇಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಲೋಕಸಭೆ ಕಲಾಪದ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ, ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಂತೆ ಆಡಿದ ಮಾತುಗಳು ಷಾ ಅವರ ವ್ಯಕ್ತಿತ್ವಕ್ಕೆ ಶೋಭೆ ತರದು. ವಿಶ್ವಕ್ಕೆ ಮಾದರಿ ನಮ್ಮ ಪ್ರಶ್ನಾತೀತ ಸಂವಿಧಾನ. ಅದನ್ನು ರಚಿಸುವಲ್ಲಿ ಡಾ. ಅಂಬೇಡ್ಕರ್ ಮುಖ್ಯ ರೂವಾರಿ. ಅಂತಹ ಮೇರು ವ್ಯಕ್ತಿಯನ್ನು ಕಡೆಗಣಿಸಿ ಮಾತನಾಡುವುದು ತರವಲ್ಲ ಎಂದ ಚಂದ್ರಮೌಳಿ ಅವರು, ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಅಂಬೇಡ್ಕರ್ ಅವರ ಜಾತ್ಯಾತೀತ ನಿಲುವು ಕಾರಣ ಎಂದರು.
ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವಿಧಾನ ಪರಿಷತ್ತು ಎಂದರೆ ಪ್ರಜ್ಞಾವಂತರ ವೇದಿಕೆ, ಚಿಂತಕರ ಚಾವಡಿ ಎನ್ನುವ ಅಭಿಪ್ರಾಯ ಜನರಲ್ಲಿದೆ. ಇಂತಹ ಪರಿಷತ್ತಿನ ಗೌರವಯುತ ಶಾಸಕ ಸಿ.ಟಿ.ರವಿ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಆಡಿದ ಮಾತುಗಳು ಹೆಣ್ಣುಕುಲಕ್ಕೆ ಮಾಡಿದ ಘೋರ ಅಪಮಾನ. ನಮ್ಮ ದೇಶದಲ್ಲಿ ಇತಿಹಾಸ ಕಾಲದಿಂದಲೂ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ, ಸ್ಥಾನಮಾನದೊಂದಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ನಮ್ಮ ದೇಶವನ್ನು ಭಾರತಾಂಬೆ ಎಂದು, ನಾವು ನಿಂತ ಭೂಮಿಯನ್ನು ಭೂತಾಯಿ ಎಂದು, ಇಲ್ಲಿನ ಹರಿಯುವ ನದಿತೊರೆಗಳಿಗೆ ಹೆಣ್ಣಿನ ಹೆಸರು ನಾಮಕರಣ ಮಾಡಿ ಭಕ್ತಿಭಾವ ಹೊಂದಿರುವುದು ನಮ್ಮೆಲ್ಲರ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಸಾಕ್ಷೀಕರಿಸಿದೆ. ಇಂತಹ ಪವಿತ್ರ ನಾಡಿನಲ್ಲಿ ಹುಟ್ಟಿರುವ ಬಿಜೆಪಿ ಶಾಸಕ ಸಿ.ಟಿ. ರವಿ, ಹೆಬ್ಬಾಳ್ಕರ್ ಕುರಿತು ಆಡಳಿತ ಅವಾಚ್ಯ ಶಬ್ದಗಳು, ಸಿ.ಟಿ.ರವಿ ಅವರ ಹುಟ್ಟನ್ನೇ ಪ್ರಶ್ನಿಸುವಂತಿದೆ. ಅವರೇನು ತಾಯಿ ಇಲ್ಲದೆಯೇ ಜನ್ಮತಾಳಿದ ಮನುಷ್ಯನಾ?! ಎನ್ನುವ ಯಕ್ಷ ಪ್ರಶ್ನೆ ನಾಡಿನ ಪ್ರಜ್ಞಾವಂತರನ್ನು ಕಾಡುತ್ತಿದೆ. ತುಂಬು ಕುಟುಂಬದಲ್ಲಿ, ಅದರಲ್ಲೂ ಹೆಣ್ಣುಮಕ್ಕಳ ನಡುವೆ ಜನಿಸಿರುವ ಶಾಸಕ ಸಿ.ಟಿ. ರವಿ, ಈ ಕೂಡಲೇ ರಾಜ್ಯದ ಹೆಣ್ಣುಮಕ್ಕಳ ಮುಂದೆ ಕ್ಷಮೆಯಾಚಿಸಬೇಕು. ಅವರ ಇಂತಹ ಹೀನ ನಡವಳಿಕೆಗೆ ಮಹಿಳಾಮಣಿಗಳ ಧಿಕ್ಕಾರವಿದೆ ಎಂದರು.
ಪ್ರತಿಭಟನೆಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಹಿಂದುಳಿದ ವರ್ಗಗಳ ತಾಲ್ಲೂಕು ಅಧ್ಯಕ್ಷ ಮಂಜಪ್ಪ ಸೇರಿದಂತೆ ಹಲವರು ಮಾತನಾಡಿದರು.
ಈ ವೇಳೆ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ. ಸದಾಶಿವ, ಟೌನ್ ಘಟಕದ ಅಧ್ಯಕ್ಷ ಗುರುರಾಜ್ ಕೆ.ಎಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯೆ ಶಾಹಿನಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಸದಸ್ಯೆ ಹರತಾಳು ಸಾಕಮ್ಮ, ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ ಶೇಟ್, ಬೃಂದಾವನ ಪ್ರವೀಣ್, ಮೈನಾವತಿ, ಮಂಜುಳ, ನೋರಾ ಮೆಟೆಲ್ಡಾ ಸಿಕ್ವೇರಾ, ಗುಲಾಬಿ ಮರಿಯಪ್ಪ, ಬಜಾಜ್ ಜಯರಾಜ್, ಎಂ.ಪಿ. ಸುರೇಶ್, ಜಯನಗರ ಗುರು, ಪೂರ್ಣಿಮಾ ಮೂರ್ತಿರಾವ್, ನೇತ್ರಾವತಿ ಭಟ್, ಹೊಳೆಯಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ