ಅಂಗನವಾಡಿ ಕಾರ್ಯಕರ್ತೆಯರಿಂದ ಡಿಸೆಂಬರ್ 12ಕ್ಕೆ ಬೆಳಗಾವಿ ಚಲೋ ಹೋರಾಟ - ಹೊಸನಗರ ತಾಲ್ಲೂಕು ಸಮಿತಿ ಬೆಂಬಲ
ಹೊಸನಗರ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಿಸಬೇಕು, ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು, ಕನಿಷ್ಠ ವೇತನದ ಅನುಸೂಚಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಸೇರ್ಪಡೆಗೊಳಿಸುವುದು ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು, ಇದೇ ಡಿಸೆಂಬರ್ 12 ರಂದು ಬೆಳಗಾವಿ ಚಲೋ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಶನ್ ನಿರ್ದರಿಸಿದ ಹಿನ್ನೆಲೆಯಲ್ಲಿ, ಹೊಸನಗರ ತಾಲ್ಲೂಕು ಸಮಿತಿಯವರು ಸೋಮವಾರ ಪಟ್ಟಣದ ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಈ ಕುರಿತು ಮನವಿ ಸಲ್ಲಿಸಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಂಗನವಾಡಿ, ಬಿಸಿ ಊಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದಾಗಿ ಘೋಷಿಸಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದೂವರೆ ವರ್ಷವಾದರೂ ನಮ್ಮ ಬೇಡಿಕೆ ಈವರೆಗೂ ಈಡೇರಿಲ್ಲ. ಆದ್ದರಿಂದ ಈ ಅಧಿವೇಶನದಲ್ಲಿ ಕಾರ್ಯಕರ್ತರಿಗೆ 15 ಸಾವಿರ ರೂಪಾಯಿ ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ಗೌರವವನ್ನು ನಿಗದಿಪಡಿಸುವಂತೆ ಮನವಿಯಲ್ಲಿ ಆಗ್ರಹ ಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ, ಕರ್ತವ್ಯಕ್ಕೆ ಸೇರಿ ನಿವೃತ್ತರಾಗುವ ಎಲ್ಲರಿಗೂ ಗ್ರಾಚ್ಯುಟಿ ನೀಡಬೇಕು ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನಾಗರೀಕ ಸೇವೆಗೆ ಸಮನಾಗಿ ಪರಿಗಣಿಸಿ, ಕನಿಷ್ಠ ವೇತನಕ್ಕಿಂತ ಕಡಿಮೆ ಇಲ್ಲದಂತೆ ವೇತನ ನಿಗದಿ ಮಾಡಬೇಕೆಂದು ಇತ್ತೀಚೆಗೆ ಗುಜರಾತ್ ಹೈಕೋರ್ಟು ತೀರ್ಪು ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರು ತಿಂಗಳಲ್ಲಿ ನಿಯಮ ರೂಪಿಸಿ ಜಾರಿಗೊಳಿಸಬೇಕೆಂದು ಸೂಚಿಸಿದೆ. ಈ ಆದೇಶವನ್ನು ಅನುಷ್ಠಾನಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಇತರ ಔದ್ಯಮಿಕ ರಂಗದಲ್ಲಿರುವಂತೆ ಕನಿಷ್ಠ ವೇತನದ ಶೆಡ್ಯೂಲ್ ವ್ಯಾಪ್ತಿಗೊಳಪಡಿಸಬೇಕೆಂದು ತಾಲ್ಲೂಕು ಸಮಿತಿಯವರು ಆಗ್ರಹಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಾಲ್ಲೂಕು ಸಂಘದ ಅಧ್ಯಕ್ಷೆ ಶಶಿಕಲಾ, ಪ್ರಧಾನ ಕಾರ್ಯದರ್ಶಿ ಲೀಲಾವತಿ, ಕಾರ್ಯದರ್ಶಿ ಎನ್.ಎಸ್. ಗೀತಾ, ಖಜಾಂಚಿ ಉಮಾ, ರಾಜ್ಯ ಸಂಚಾಲಕ ಎನ್. ರವೀಂದ್ರ ಸಾಗರ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ