ನಗರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಮರವೇರಿ ಪ್ರತಿಭಟಿಸಿದ ಪಂಚಾಯ್ತಿ ಸದಸ್ಯ ಕರುಣಾಕರ ಶೆಟ್ಟಿ
ಹೊಸನಗರ : ತಾಲ್ಲೂಕಿನ ನಗರ ಹೋಬಳಿಯ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲದೇ ಇರುವುದು ಸೇರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಕರುಣಾಕರ ಶೆಟ್ಟಿ ಆಸ್ಪತ್ರೆ ಆವರಣದಲ್ಲಿದ್ದ ಮರವೇರಿ ಪ್ರತಿಭಟಿಸಿದರು.
ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಕೊರತೆ ಸೇರಿದಂತೆ ನಾಲ್ಕು ದಿನಗಳಿಂದ ವೈದ್ಯಾಧಿಕಾರಿಗಳು ಇಲ್ಲದೇ ಸಾಕಷ್ಟು ಸಮಸ್ಯೆ ಉಂಟಾಗಿದೆ. ನಿನ್ನೆ ನಗರ ಸಮೀಪದ ನರ್ತಿಗೆ ಎಂಬಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೊರಟಿದ್ದ ವಾಹನ ಅಪಘಾತವಾಗಿ ಗಾಯಾಳುಗಳನ್ನು ನಗರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದಕ್ಕೂ ಕೂಡಾ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಇಂದು ಪ್ರತಿಭಟನೆ ನಡೆಸುವುದಾಗಿ ಕರುಣಾಕರ ಶೆಟ್ಟಿಯವರು ನಿನ್ನೆಯೇ ಹೇಳಿದ್ದರು. ಅದರಂತೆ ಇಂದು ಬೆಳಿಗ್ಗೆ ಆಸ್ಪತ್ರೆ ಆವರಣಕ್ಕೆ ಬಂದ ಕರುಣಾಕರ ಶೆಟ್ಟಿ ಮರವೇರುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
CLICK ಮಾಡಿ - ರಾಜ್ಯ ಮಟ್ಟದ ಪ್ರದರ್ಶನ-ಸ್ಪರ್ಧೆಗೆ ಆಯ್ಕೆಯಾದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು
ಕರುಣಾಕರ ಶೆಟ್ಟಿ ಪ್ರತಿಭಟಿಸುತ್ತಿರುವಾಗಲೇ ಸ್ಥಳೀಯ ಬಿಜೆಪಿ ಮುಖಂಡರು ಕೂಡಾ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸರ್ಕಾರ ಗಮನ ಹರಿಸದೆ ಇರುವುದು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಬಿಜೆಪಿ ಸರ್ಕಾರವಿದ್ದಾಗ ನಗರ ಹೋಬಳಿಯಲ್ಲಿ ದಿನದ ಇಪ್ಪತ್ತ್ನಾಲ್ಕು ಗಂಟೆಯೂ ಇರುವಂತೆ ಆಸ್ಪತ್ರೆಗೆ ಮೂವರು ವೈದ್ಯರನ್ನು ನೇಮಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಉಂಟಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಹಾಗೂ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ನಗರ ನಿತಿನ್, ಅರುಣ್, ಮಧುಕರ್ ಶೆಟ್ಟಿ, ಸುರೇಶ ಭಾಗಿಯಾಗಿದ್ದರು.
ಕಾಮೆಂಟ್‌ಗಳಿಲ್ಲ