ತಾಲ್ಲೂಕು ಕ್ರೀಡಾಕ್ಷೇತ್ರದಲ್ಲಿ ಹೊಸ ಮಿಂಚು ಹರಿಸಿದ ಮಲೆನಾಡು ಪ್ರೌಢಶಾಲೆಯ ಅರ್ಚನಾ | 3000 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿ ವಿದ್ಯಾರ್ಥಿನಿ
ಹೊಸನಗರ : ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 17 ವರ್ಷ ವಯಸ್ಸಿನೊಳಗಿನವರ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಇಲ್ಲಿನ ಮಲೆನಾಡು ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅರ್ಚನಾ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಅರ್ಚನಾ ಈ ದೂರವನ್ನು 11 ನಿಮಿಷ 4 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈಕೆ ಕೇವಲ ಮೂರು ಅಡಿ 11 ಇಂಚು ಎತ್ತರವಿದ್ದು ಸಾಧನೆಗೆ ಎತ್ತರ ಅಡ್ಡಿಯಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ.
ತಾಲ್ಲೂಕಿನ ನಗರ ಹೋಬಳಿ ಸಂಪೆಕಟ್ಟೆ ಬಳಿಯ ಕೊಡಸೆ ಹೆಬ್ಬುರಳಿಯ ತೀರಾ ಬಡ ಕುಟುಂಬದ ಕೃಷಿಕ ಕೃಷ್ಣ ಹಾಗೂ ಕಲಾವತಿ ದಂಪತಿಗಳ ಪುತ್ರಿಯಾಗಿರುವ ಅರ್ಚನಾ, ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಕುಬ್ಜತೆ ಸಾಧನೆಗೆ ಅಡ್ಡಿಯಲ್ಲ ಎನ್ನುವುದನ್ನು ಸಾಧಿಸಿ ತೋರಿಸುವ ಜೊತೆ ಜೊತೆಗೇ, ತಾಲ್ಲೂಕಿನ ಕ್ರೀಡಾಕ್ಷೇತ್ರಕ್ಕೂ ಹೊಸ ಗರಿ ಮೂಡಿಸಿದ್ದಾಳೆ.
ಶಾಸಕ ಬೇಳೂರು ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಮಲೆನಾಡು ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ದೈಹಿಕ ಶಿಕ್ಷಕರು, ತರಬೇತುದಾರರು, ವಿದ್ಯಾರ್ಥಿ ವೃಂದದವರು ಅರ್ಚನಾಳ ಸಾಧನೆಯನ್ನು ಕೊಂಡಾಡಿ, ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಹೊಂದುವಂತೆ ಹಾರೈಸಿದ್ದಾರೆ.
ಕಾಮೆಂಟ್‌ಗಳಿಲ್ಲ