71ನೇ ಸಹಕಾರಿ ಸಪ್ತಾಹ ಅಂಗವಾಗಿ ಸಹಕಾರಿಗಳಿಗೆ ಕ್ರೀಡಾಕೂಟ, ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ - ಹೊಸನಗರದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್
ಹೊಸನಗರ : ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಿಂದ 20ನೇ ತಾರೀಖಿನವರೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರಿಗಳಿಗೆ ಜಿಲ್ಲಾದ್ಯಂತ ಕ್ರೀಡಾಕೂಟ ಆಯೋಜಿಸಿದ್ದು, ಸಹಕಾರಿ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆ ನಡೆದಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ತಿಳಿಸಿದರು.
ಇಂದು ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ವಿವಿಧ ಸಹಕಾರಿ ಸಂಘಗಳ ಆಶ್ರಯದಲ್ಲಿ ಸಂಘದ ಪದಾಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಸಹಕಾರಿಗಳಿಗೆ ಸಹಕಾರಿ ಸಪ್ತಾಹ ಅಂಗವಾಗಿ ಅಳಿವಿನಂಚಿನಲ್ಲಿರುವ ವಿವಿಧ ಗ್ರಾಮೀಣ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಯುವಶಕ್ತಿ ಸಂಘಟನೆ ಹಾಗೂ ಯುವಕರಲ್ಲಿ ಸಹಕಾರ ಚಳುವಳಿ ಕುರಿತು ಅರಿವು ಮೂಡಿಸುವುದು ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದರು.
ವರ್ಷ ಪೂರ್ತಿ ವ್ಯವಹಾರಿಕ ಲೋಕದಲ್ಲಿ ಮುಳುಗುವ ಸಹಕಾರಿಗಳ ಮನೋಲ್ಲಾಸಕ್ಕಾಗಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕೇವಲ ಬಹುಮಾನಕ್ಕಾಗಿ ಸಹಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸದೆ, ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವಂತೆ ಅವರು ಸಲಹೆ ನೀಡಿದರು.
ಸಹಕಾರ ಚಳುವಳಿಯಲ್ಲಿ ಯುವಸಮೂಹ ಸಕ್ರಿಯವಾಗಿ ಭಾಗವಹಿಸಲು ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ’ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ’ ಎಂಬ ವಿಷಯ ಕುರಿತಂತೆ ನವೆಂಬರ್ 11ರಂದು ಚರ್ಚಾ ಸ್ಪರ್ಧೆಗೆ ಶಿವಮೊಗ್ಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ನ. 18ರಂದು ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ವಿಜೇತರಿಗೆ ಸನ್ಮಾನದೊಂದಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದುಮ್ಮ ವಿನಯ್ ಕುಮಾರ್, ವೀರಶೈವ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಂಜುಂಡಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವಕುಮಾರ್, ಶಿಮೂಲ್ ಕ್ಷೇತ್ರಾಧಿಕಾರಿ ನವೀನ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ