ಸಂಸ್ಕೃತ ಸಾಹಿತ್ಯ, ಗ್ರಂಥ, ಮಂತ್ರಗಳಲ್ಲಿ ವೈದ್ಯಕೀಯ ಅಂಶ ಅಡಕವಾಗಿದೆ - ಹೊಸನಗರದಲ್ಲಿ ಡಾ. ಸುರೇಶ್ ರಾವ್
ಹೊಸನಗರ: ಸಂಸ್ಕೃತ ವಿಶ್ವದ ಅತ್ಯಂತ ಶ್ರೇಷ್ಠ ಭಾಷೆಯಾಗಿದೆ. ಸಂಸ್ಕೃತ ಸಾಹಿತ್ಯ, ಗ್ರಂಥ, ಮಂತ್ರಗಳಲ್ಲಿ ಸಾಕಷ್ಟು ವೈದ್ಯಕೀಯ ಅಂಶಗಳು ಅಡಕವಾಗಿವೆ ಎಂದು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಆಡಳಿತ ನಿರ್ದೇಶಕ ಡಾ. ಸುರೇಶ್ ರಾವ್ ತಿಳಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಪಟ್ಟಣದ ಗುರೂಜಿ ಶಾಲೆಯಲ್ಲಿ ಮಂಗಳವಾರ ಶ್ರೀ ವೀರಾಂಜನೆಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆ (ರಿ), ವಿದ್ಯಾಭಾರತಿ ಶಿಕ್ಷಣ ಸಂಸ್ಥೆ (ರಿ), ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಹಾಗೂ ಸಂಸ್ಕೃತ ಭಾರತಿ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ
ಸಂಸ್ಕೃತ ಕಲಿಕೆ ತರಗತಿಗಳು ಮತ್ತು ಕ್ಯಾನ್ಸರ್ ರೋಗ ತಡೆಗಟ್ಟಲು ಸ್ವಯಂಸೇವಕರ ತಂಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
CLICK ಮಾಡಿ - ಹೊಸನಗರದಲ್ಲಿ ಗ್ಯಾರಂಟಿ ಅನುಷ್ಠಾನ ಕಚೇರಿ ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ಇನ್ನೂ ಲಕ್ಷಾಂತರ ಸಂಸ್ಕೃತ ತಾಡಪ್ರತಿಗಳ ಸಂಶೋಧನೆ ನಡೆಯಬೇಕಾಗಿದೆ. ಇದಕ್ಕಾಗಿ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನೆ ವ್ಯಾಪಕವಾಗಿ ಆಗಬೇಕಾಗಿದೆ. ಸಂಸ್ಕೃತವನ್ನು ಕೇವಲ ಅಂಕ ಗಳಿಕೆಗಾಗಿ ಅಧ್ಯಯನ ಮಾಡದೆ ಜ್ಞಾನಾರ್ಜನೆಯ ದೃಷ್ಟಿಯಿಂದ ಅಧ್ಯಯನ ಮಾಡಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಕ್ಕಳು ಬಾಲ್ಯದಿಂದಲೇ ಸಂಸ್ಕೃತ ಅಧ್ಯಯನಕ್ಕೆ ಮುಂದಾದಲ್ಲಿ ಅವರ ಬುದ್ಧಿಮತ್ತೆ ಚುರುಕಾಗುತ್ತದೆ ಎಂಬ ಅಂಶ ಈಗಾಗಲೇ ಹಲವಾರು ಸಂಶೋಧನೆಗಳಿಂದ ದೃಢ ಪಟ್ಟಿದೆ. ಈ ಶಾಲೆಯ ಆಡಳಿತ ಮಂಡಳಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಸಂಸ್ಕೃತ ಭಾರತಿ ಸಹಯೋಗದಲ್ಲಿ ಸಂಸ್ಕೃತ ಭಾಷಾ ಕಲಿಕೆ ಶಿಕ್ಷಣವನ್ನು ಆರಂಭಿಸಿದ್ದು, ಇದಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ನಮ್ಮ ಆಸ್ಪತ್ರೆಯ ವತಿಯಿಂದ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ದೇಶದಲ್ಲಿ ಹೆಚ್ಚು ವ್ಯಾಪಿಸಿರುವ ಕ್ಯಾನ್ಸರ್ ಎಂಬ ಮಾರಕ ರೋಗದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹೊಸನಗರ ತಾಲೂಕಿನಲ್ಲಿ ಸ್ವಯಂಸೇವಕರ ತಂಡ ರಚನೆಗೊಂಡಿದ್ದು ಇದು ಸಮಾಜಕ್ಕೆ ಮಾದರಿಯಾಗಿದೆ ಎಂದರು. ಅಗತ್ಯ ಇದ್ದಲ್ಲಿ ವೈದ್ಯಕೀಯ ತಂಡ ಕಳುಹಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು.
ಶಾಲೆಯ ಕಾರ್ಯದರ್ಶಿ ಪಿ. ಶಾಂತಮೂರ್ತಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತ ಕಲಿಸುವ ಯೋಜನೆಗೆ ಆರ್ಥಿಕ ಸಹಾಯ ನೀಡುವ ಎಮ್.ಐ.ಓ. ಸಂಸ್ಥೆಯ ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯ ಅಧ್ಯಕ್ಷ ಸುದೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಕೃತ ಭಾರತಿ ಕಾರ್ಯಕರ್ತ ಅ.ನಾ. ವಿಜಯೇಂದ್ರ ರಾವ್, ಶಾಲೆಯ ಉಪಾಧ್ಯಕ್ಷ ಸದಾಶಿವ ಶ್ರೇಷ್ಠಿ, ನಿರ್ದೇಶಕರಾದ ನಾಗೇಶ್, ಸಂತೋಷ ಕಾಮತ್ ಉಪಸ್ಥಿತರಿದ್ದರು.
ಕು. ಪ್ರಚೇತಾ ಹಾಗೂ ಶ್ರಾವ್ಯ ಪ್ರಾರ್ಥಿಸಿ, ಶಿಕ್ಷಕಿ ಸುಮಲತಾ ಸ್ವಾಗತಿಸಿದರು. ಶೃತಿ ನಿರೂಪಿಸಿ, ಕುಸುಮಶ್ರೀ ವಂದಿಸಿದರು.
ಕಾಮೆಂಟ್‌ಗಳಿಲ್ಲ