ಏಕಾಏಕಿ ಅಕ್ರಮ ಒತ್ತುವರಿ ತೆರವು ವಿರೋಧಿಸಿ ಸರ್ಕಾರದ ವಿರುದ್ಧ ಹೊಸನಗರ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ
ಹೊಸನಗರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಜನ ವಿರೋಧಿ ನಿಲುವುಗಳನ್ನು ತೆಗೆದುಕೊಂಡಾಗ ಅದನ್ನು ವಿರೋಧಿಸುವ, ಪ್ರಶ್ನಿಸುವ ಹಕ್ಕು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ಹೇಳಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಇತ್ತೀಚೆಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಅಕ್ರಮ ಒತ್ತುವರಿ ಸಾಗುವಳಿ ರೈತರ ಭೂಮಿಯ ಏಕಾಏಕಿ ತೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವವನ್ನು ಖಂಡಿಸಿ, ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಭೂಮಿ ಹಕ್ಕು ವೇದಿಕೆ, ಪ್ರಜಾಪ್ರಭುತ್ವ ಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಭೂ ಸಂತ್ರಸ್ತರ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
CLICK ಮಾಡಿ - ರೂ 49,24,344 ಲಾಭದಲ್ಲಿ ಹೊಸನಗರದ ಕೊಡಚಾದ್ರಿ ಅಡಿಕೆ ಸೌಹಾರ್ದಾ ಸಹಕಾರಿ ಸಂಘ
ಮಲೆನಾಡು ಭಾಗದಲ್ಲಿ ಸರ್ಕಾರ ನಿರ್ಮಿಸಿದ ಹಲವು ಅಣೆಕಟ್ಟುಗಳಿಂದ ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಯಿತು. ಅಂದು ಆ ಭಾಗದ ಕೃಷಿಕರು ಇಂದಿಗೂ ಭೂರಹಿತರಾಗಿದ್ದಾರೆ. ಕೆಲವೇ ಮಂದಿಗೆ ಹಕ್ಕುಪತ್ರ ಸಿಕ್ಕಿದೆ. ಮುಳುಗಡೆಯಿಂದಾಗಿ ತಮ್ಮ ಪೂರ್ವಿಕರು ಬಾಳಿ ಬದುಕಿದ ಮನೆ ಮಠ, ಕೃಷಿ ಜಮೀನನ್ನು ತೊರೆದು ಬೇರೆಡೆಗೆ ಸಾಗಿ ಹೊಸ ಬದುಕು ಕಟ್ಟಿಕೊಂಡು ದಿನದೂಡುತ್ತಿದ್ದಾರೆ. ಅಂತಹ ರೈತಾಪಿಗಳ ಮೇಲೆ ಸರ್ಕಾರ ಈಗ ಒತ್ತುವರಿ ತೆರವಿನ ತೂಗುಗತ್ತಿಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವುದು ಅಕ್ಷಮ್ಯ. ಈ ಹಿನ್ನೆಲೆಯಲ್ಲಿ ಭೂ ಸಾಗುವಳಿದಾರರು ಒಟ್ಟಾಗಿ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಸಂಘಟನೆಯಿದ ಮಾತ್ರವೇ ಸರ್ಕಾರದ ನಿಲುವನ್ನು ಹತ್ತಿಕ್ಕಲು ಸಾಧ್ಯವೆಂದರು.
ಹೋರಾಟ ಸಮಿತಿಯ ಅಧ್ಯಕ್ಷ ಗಣೇಶ್ ಬೆಳ್ಳಿ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮದಲ್ಲಿನ ಅರಣ್ಯ ಹಕ್ಕು ಸಮಿತಿ ಪದಾಧಿಕಾರಿಗಳಿಗೆ ಶಕ್ತಿ ತುಂಬುವ ಸಲುವಾಗಿ ಹೋರಾಟಕ್ಕೆ ಆಹ್ವಾನ ನೀಡಲಾಗಿದೆ. ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ವ್ಯಾಪಕ ಮಾಹಿತಿ ಕೊರತೆಯ ಹಿನ್ನೆಲೆಯೇ ಈ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಈ ತಪ್ಪುಗಳನ್ನು ಸರಿಪಡಿಸುವ ಕಾರ್ಯ ಇಲಾಖೆ ಸಿಬ್ಬಂದಿಯಿಂದ ಆಗಬೇಕಿದೆ. 3 ಎಕರೆಗಿಂತ ಕಡಿಮೆ ಕೃಷಿ ಒತ್ತುವರಿ ತೆರವು ಮಾಡುತ್ತೇವೆ ಎಂಬ ಸರ್ಕಾರದ ಆದೇಶವು, ರೈತರನ್ನು ಇಬ್ಭಾಗ ಮಾಡುವ ನಿಲುವಾಗಿದ್ದು ಇದನ್ನು ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಜನಸಂಗ್ರಾಮ್ ಪರಿಷತ್ ಎಂಬ ನಕಲಿ ಪರಿಸರವಾದಿ ಸಂಘಟನೆ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೊದಲು ರೈತರೆಲ್ಲ ಒಗ್ಗೂಡಿ ನ್ಯಾಯಾಲಯದ ಕದ ತಟ್ಟಬೇಕಿದೆ ಎಂದು ಪ್ರತಿಭಟನೆಕಾರರನ್ನು ಹುರಿದುಂಬಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ತಿ.ನಾ. ಶ್ರೀನಿವಾಸ, ಬಂಡಿ ರಾಮಚಂದ್ರ, ಬಿ.ಜಿ. ನಾಗರಾಜ್, ರವೀಂದ್ರ ಮಾಸ್ತಿಕಟ್ಟೆ, ರೇವಣಪ್ಪಗೌಡ, ಶ್ರೀಕಾಂತ್ ಐತಾಳ್, ಸುರೇಶ್ ಸ್ವಾಮಿರಾವ್, ಬಾಷಸಾಬ್, ಕುಮಾರ್ ಸೊನಲೆ, ಸುಶೃತ, ಕರಿಮನೆ ರಾಮಣ್ಣ, ದಿನೇಶ್ ಗೌಡ ಸೇರಿದಂತೆ ತಾಲ್ಲೂಕಿನ ಎಲ್ಲಾ ಅರಣ್ಯ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಸಹಿತ ನೂರಾರು ಸಂತ್ರಸ್ತರು ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ