ಹೊಸನಗರ ತಾಲ್ಲೂಕಿನ ಅರಣ್ಯ ಭೂಮಿ ಅಕ್ರಮ ಒತ್ತುವರಿದಾರರಿಗೆ ತಿಂಗಳೊಳಗೆ ಬಿಗ್ ಶಾಕ್! ಅರಣ್ಯ ಸಚಿವರು ಕೊಟ್ಟ ಖಡಕ್ ಸೂಚನೆ ಏನಿದೆ ಗೊತ್ತಾ?!
ಹೊಸನಗರ : ಶಿರೂರು ಗುಡ್ಡ ಕುಸಿತ, ಕೇರಳದ ವಯನಾಡ್‌ನ ಪ್ರವಾಹ ಮತ್ತು ಭೂಕುಸಿತದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿಯೂ ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಹೋಂಸ್ಟೇ, ರೆಸಾರ್ಟ್, ತೋಟ ಮತ್ತು ಲೇಔಟ್‌ಗಳನ್ನು ನಿರ್ಮಿಸುತ್ತಿರುವವರ ವಿರುದ್ಧ ತತ್‌ಕ್ಷಣದ ಕ್ರಮ ಕೈಗೊಳ್ಳಲು ಮುಂದಾಗಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು ಇಂದು ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ಬರೆದಿರುವ ಟಿಪ್ಪಣಿಯಲ್ಲಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮ ಘಟ್ಟದ ಗಿರಿಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಹೋಂಸ್ಟೇ, ರೆಸಾರ್ಟ್, ಬಡಾವಣೆ ಮತ್ತು ತೋಟಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಸ್ವಾಭಾವಿಕ, ಪ್ರಕೃತಿದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಹಾಕಿ, ಕಾಫಿ ತೋಟ, ಮನೆ, ಹೋಂಸ್ಟೇ ಮತ್ತು ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಹಿಡಿದಿಡುವ ಬೃಹತ್ ಮರಗಳ ಕಡಿತಲೆ ಹಾಗೂ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಶಿರೂರು, ಕೇರಳದಲ್ಲಿ ಸಂಭವಿಸಿದಂತಹ ಭೂಕುಸಿತಗಳು ಸಂಭವಿಸುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಸಚಿವರು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
VIDEO - ಮಳೆಗೆ ಮೈದುಂಬಿದ ಜೋಗ ಜಲಪಾತದ ರುದ್ರರಮಣೀಯ ನೋಟ
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಿನಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿರುವುದು ಕೂಡಾ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದಿರುವ ಸಚಿವರು, ಒಂದು ತಿಂಗಳೊಳಗೆ ಈ ಅಕ್ರಮ ಒತ್ತುವರಿ ಹಾಗೂ ಅಕ್ರಮ ನಿರ್ಮಾಣದ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಮುಖ್ಯವಾಗಿ 2015ರಿಂದ ಈಚೆಗೆ ಆಗಿರುವ ಎಲ್ಲಾ ಬಗೆಯ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸಲು ಸಚಿವರು ಸ್ಪಷ್ಟವಾದ ಸೂಚನೆ ನೀಡಿದ್ದಾರೆ. ಮತ್ತು ಈ ಅಕ್ರಮ ಒತ್ತುವರಿ ತೆರವುಗೊಳಿಸಬೇಕಾದ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಕೂಡಾ ಸೇರಿಕೊಂಡಿದೆ.
ಸಹಜವಾಗಿಯೇ ಇದರ ಪರಿಣಾಮ ಹೊಸನಗರ ತಾಲ್ಲೂಕಿನ ಮೇಲೂ ಆಗಲಿದೆ. ಯಾಕೆಂದರೆ, ತಾಲ್ಲೂಕಿನ ಹಲವು ಕಡೆ ಇಂತಹ ಅರಣ್ಯ ಒತ್ತುವರಿ ಹಾಗೂ ಅಕ್ರಮ ನಿರ್ಮಾಣ ನಡೆಯುತ್ತಲೇ ಇದೆ. ಇನ್ನು ಮರಗಳ ಕಡಿತಲೆಗಂತೂ ಕೊನೆಯೇ ಇಲ್ಲವಾಗಿದೆ. ಒಂದಿಂಚಿಗೆ ಅನುಮತಿ ಪಡೆದುಕೊಂಡು ಎಕರೆಗಟ್ಟಲೆ ಅರಣ್ಯ ಕಡಿದು, ಕ್ವಾರಿ ಮಾಡಿ ಬಂಡೆ ಕದಿಯುವವರಿಗೂ ತಾಲ್ಲೂಕಿನಲ್ಲಿ ಬರವಿಲ್ಲ. ಅರಣ್ಯ ಸಚಿವರ ಈ ಸೂಚನೆ ಖಡಕ್ಕಾಗಿಯೇ ಮುಂದುವರಿದಿದ್ದೇ ಹೌದಾದರೆ ತಾಲ್ಲೂಕಿನ ಹಲವು ಕಡೆ ಅರಣ್ಯ ಒತ್ತುವರಿ ಮಾಡಿಕೊಂಡವರಿಗೆ ಸಧ್ಯದಲ್ಲೇ ಬಿಗ್ ಶಾಕ್ ಎದುರಾಗಲಿದೆ.
ಕಾಮೆಂಟ್‌ಗಳಿಲ್ಲ