Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಮುಳುವಾದ ಭಾರೀ ಮಳೆ! ಮಳೆಗೆ ಮನೆ ಕಳೆದುಕೊಂಡವರ ಕಷ್ಟ ಕೇಳುವವರ‍್ಯಾರು?!

ಹೊಸನಗರ : ತಾಲ್ಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಕುಸಿತ ಸೇರಿದಂತೆ ಹತ್ತು ಹಲವು ಅವಘಡಗಳು ಸಂಭವಿಸಿವೆ.

ಮಾರುತೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸೇಕೊಪ್ಪ- ನಿಂಬೇಸರ ಪ್ರಾಥಮಿಕ ಶಾಲೆಗೆ ಹೋಗುವ ಸಂಪರ್ಕ ರಸ್ತೆಗೆ ಮಳೆಯಿಂದ ಹಾನಿಯಾದ ಬಗ್ಗೆ ವರದಿಯಾಗಿದೆ. ರಭಸವಾಗಿ ಸುರಿಯುತ್ತಿರುವ ಮಳೆ ಹುಂಚ ಗ್ರಾ.ಪಂ. ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಸಿ ಹರೀಶ್ ಬಿನ್ ಮಂಜಪ್ಪ ಅವರ ಮನೆಗೆ ಹಾನಿ ಮಾಡಿದೆ.

ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಿಕೊಪ್ಪ ಗ್ರಾಮದ ಮುಖ್ಯರಸ್ತೆ ಹಾಳಾಗಿದ್ದು, ಧರೆ ಕುಸಿದು ಅಪಾಯದ ಸ್ಥಿತಿ ತಲುಪಿದೆ. 

ಹುಳಿಗದ್ದೆ ಗ್ರಾಮದ ಕಾಲುವೆ ನೀರು ಯೋಗೇಂದ್ರಪ್ಪ ಅವರ ಖಾತೆ ಜಮೀನನ್ನು ಆಪೋಶನ ಪಡೆದಿದೆ. ಕರಿಮನೆ ಗ್ರಾಮದ ಗಣೇಶ್ ಬಿನ್ ನಾಗಪ್ಪ ಅವರ ವಾಸದ ಮನೆಯೇ ಕುಸಿದು ಬಿದ್ದಿದೆ.

ರಾಮಚಂದ್ರಪುರದ ದಾನಮ್ಮ ಕೋಂ ಚೆನ್ನಪ್ಪ, ಪುಟ್ಟಮ್ಮ ಕೋಂ ನಾಗರಾಜ ಹಾಗೂ ಕಲ್ಲೂರು ಗ್ರಾಮದ ಧನಂಜಯ ಅವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ. 

ಕೆರೆಹಳ್ಳಿ ಹೋಬಳಿಯ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀಲಗೋಡು ಗ್ರಾಮದ ಎನ್. ಆರ್. ರಾಜು ಬಿನ್ ಮಾಸ್ತಪ್ಪ ಅವರ ಮನೆಗೆ ಮಳೆ ಹಾನಿಯನ್ನುಂಟು ಮಾಡಿದೆ.

ರಾಣೆಬೆನ್ನೂರು - ಬೈಂದೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ NH-766c ರಲ್ಲಿ ಮಾರುತೀಪುರ ಸಮೀಪ ರಸ್ತೆಯ ದಂಡೆ ಕುಸಿಯುವ ಭೀತಿ ಎದುರಾಗಿದ್ದರೆ, ಮಾಸ್ತಿಕಟ್ಟೆ ಸಮೀಪದ ಹುಲಿಕಲ್ ಘಾಟಿಯಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ರಸ್ತೆಗೆ ಉರುಳಿದ್ದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

ಇನ್ನು ರಿಪ್ಪನ್‌ಪೇಟೆಯ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸರೂರು ಗ್ರಾಮದ ದಿನೇಶ್ ಬಿನ್ ಬಸವರಾಜ್  ಹಾಗೂ ಶಶಿಕಲಾ ಕೋಂ ಬಸವರಾಜ ಎನ್ನುವವರ ವಾಸದ ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ.







ಹೀಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಹಶೀಲ್ದಾರ್ ರಶ್ಮಿ ಹಾಲೇಶ್, ಶಾಸಕರ ಆಪ್ತ ಸಹಾಯಕರಾದ ಸಣ್ಣಕ್ಕಿ ಮಂಜುನಾಥ ಸೇರಿದಂತೆ ಗ್ರಾಮ ಪಂಚಾಯಿತಿಗಳ ಪಿಡಿಓ, ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ