ಹೊಸನಗರ ಪಟ್ಟಣ ಪಂಚಾಯಿತಿ ಮಳಿಗೆ ಬಾಡಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಯಾರ‍್ಯಾರು?! ಇಷ್ಟು ದಿನಗಳ ಕಾಲ ಬಾಡಿಗೆ ವಸೂಲಿ ಮಾಡದೇ ಸಂಬಳ ಪಡೆದುಕೊಂಡ ಅಧಿಕಾರಿಗಳಿಗೆ ಯಾವ ಶಿಕ್ಷೆ?!
ಹೊಸನಗರ : ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆ ಬಾಡಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ತಾಲ್ಲೂಕಿನ ’ದೊಡ್ಡ ವ್ಯಕ್ತಿ’ಗಳೆನ್ನೆಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ!
ಹೌದು, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಒಟ್ಟು ಸುಮಾರು 30 ಮಳಿಗೆಗಳನ್ನು ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ನಿರಂತರವಾಗಿ ಟೆಂಡರ್ ಮೂಲಕ ಬಾಡಿಗೆ ನೀಡಲಾಗುತ್ತಿದ್ದು, ಇದೇ ಜುಲೈ 26ನೇ ತಾರೀಖು ನಡೆದ ಸಾಮಾನ್ಯ ಸಭೆಯಲ್ಲಿ ಇಂತಹ ಮಳಿಗೆಗಳಿಂದ ವಸೂಲಾಗಬೇಕಿದ್ದ ಬಾಕಿ ಬಾಡಿಗೆ ಕಂಡು ಸದಸ್ಯರೇ ಸುಸ್ತಾಗಿ ಹೋಗಿದ್ದಾರೆ! ಸಭೆಯಲ್ಲಿ ವರದಿ ವಾಚಿಸುತ್ತಿದ್ದಂತೆ 2024ರ ಜೂನ್ ಅಂತ್ಯಕ್ಕೆ ಒಟ್ಟಾರೆ ಸುಮಾರು 40 ಲಕ್ಷ 32 ಸಾವಿರದ 476 ರೂ ಬಾಡಿಗೆ ಬಾಕಿ ಉಳಿಕೆ ಕಂಡು ಇಡೀ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳೆಲ್ಲರೂ ಹೌಹಾರಿದ್ದಾರೆ.
ಪಟ್ಟಣ ಪಂಚಾಯಿತಿ ಮಳಿಗೆ ಬಾಡಿಗೆ ಪಡೆದುಕೊಂಡವರಿಗೆ ಹೊಸನಗರ ಪಟ್ಟಣದ ಮಟ್ಟಿಗೆ ನಡೆಸುತ್ತಿರುವ ವ್ಯಾಪಾರ ಚೆನ್ನಾಗಿಯೇ ಇದೆ. ಆದಾಯವೂ ಉತ್ತಮವಾಗಿದೆ. ಹಾಗಿದ್ದೂ ಬಾಡಿಗೆ ಕೊಡಲು ಅದ್ಯಾಕೆ ಹಿಂದೇಟು ಎನ್ನುವುದು ಮಾತ್ರ ತಿಳಿಯುತ್ತಿಲ್ಲ. ಇದಕ್ಕೆ ಸರಿಯಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿಯೂ ತೀರಾ ಒತ್ತಾಯಿಸಿ ಬಾಡಿಗೆ ವಸೂಲಿಗೆ ಹೋಗುವುದೂ ಇಲ್ಲ. ಹೀಗೆ ಮಳಿಗೆ ಬಾಡಿಗೆ ಸಕಾಲದಲ್ಲಿ ಪಾವತಿ ಮಾಡದೆ ಇದ್ದ ಕೆಲವರಿಗೆ ಕೊರೋನಾ ಎಂಬ ಹೆಮ್ಮಾರಿ ಬಂದಿದ್ದೇ ಬಂದಿದ್ದು ತೂಕಡಿಸುವವನಿಗೆ ಹಾಸಿಗೆ ಹಾಕಿ ಕೊಟ್ಟಂತಾಗಿತ್ತು. ಕೊರೋನಾ ನೆಪವೊಡ್ಡಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಮಳಿಗೆದಾರರೊಂದಿಷ್ಟು ಜನರು ಒಟ್ಟಾಗಿ ಅವತ್ತಿನ ಶಾಸಕರ ಮೂಲಕ ಜಿಲ್ಲಾಡಳಿತದ ಬಳಿ ಬಾಡಿಗೆ ವಿನಾಯಿತಿಗೆ ಮೊರೆ ಹೋಗಿದ್ದ ಘಟನೆ ಸಹ ಆಗ ಸದ್ದು ಮಾಡಿತ್ತು. ಆದರೆ, ಜಿಲ್ಲಾಡಳಿತ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಬಾಡಿಗೆ ವಿನಾಯಿತಿ ಕೊಡಿಸುವ ಭರವಸೆ ನೀಡಿದ್ದ ಅಂದಿನ ಜನಪ್ರತಿನಿಧಿ ಚುನಾವಣೆಯಲ್ಲಿ ಸೋತಿದ್ದು ಈಗ ಇತಿಹಾಸ...
ಕಳೆದ ನಾಲ್ಕು ವರ್ಷಗಳಿಂದ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಈ ಎಲ್ಲಾ ವಿಷಯ ಗೊತ್ತಿದ್ದರೂ ಮರೆಯಲ್ಲೇ ಬೆಣ್ಣೆ ತಿನ್ನುವ ಕಾರ್ಯದಲ್ಲೇ ಮುಳುಗಿ ಹೋಗಿತ್ತು. ನಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾಡಿಗೆ ಬಾಕಿ ವಸೂಲಿ ಸಂಗತಿ ತೆರೆಮರೆಗೆ ಸರಿದಿತ್ತು. ಈಗ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗುವ ಮೂಲಕ ಮತ್ತೆ ಬಾಡಿಗೆ ಬಾಕಿ ವಸೂಲಿ ವಿಷಯ ಮುನ್ನೆಲೆಗೆ ಬಂದಿದೆ. ನಾಲ್ಕು ಮಳಿಗೆಗಳ ಅವಧಿ ಈಗಾಗಲೇ ಪೂರ್ಣಗೊಂಡು ಮಳಿಗೆಗೆ ಬೀಗ ಜಡಿಯಲಾಗಿದ್ದರೂ, ಉಳಿದ ಮಳಿಗೆಗಳ ಬಾಡಿಗೆ ಅವಧಿಯು ಇನ್ನೇನು ಕೆಲವೇ ತಿಂಗಳುಗಳ ಅಂತರದಲ್ಲಿ ನಿಯಮಾನುಸಾರ ಕೊನೆಗೊಳ್ಳುವ ಕಾರಣ, ಪಂಚಾಯಿತಿ ಆಡಳಿತ ಬಾಡಿಗೆ ಬಾಕಿ ವಸೂಲಿಗೆ ಈಗ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿದೆ.
VIDEO - ವಯನಾಡ್ ಭೂಕುಸಿತದ ದುರಂತ ನೆನಪಿಸುವಂತಿದೆ ನಗರ ಹೋಬಳಿ ಕುಂದಗಲ್ಲಿನ ರಸ್ತೆ ಬಿರುಕು - ಧರೆ ಕುಸಿತ!!
ಬೀದಿ ದೀಪ ನಿರ್ವಹಣೆ, ಬ್ಲೀಚಿಂಗ್ ಪೌಡರ್ ಖರೀದಿ, ಡೆಂಗ್ಯೂ ರೋಗ ತಡೆಗೆ ಫಾಗಿಂಗ್ ಕಾರ್ಯಕ್ಕೆ ಅನುದಾನ ಇಲ್ಲ ಎಂಬ ಕುಂಟು ನೆಪ ಒಡ್ಡುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಕೃತಕ ನಾಟಕ ಸೃಷ್ಟಿಕರ್ತರ ತಂಡವು, ಲಕ್ಷಾಂತರ ಬಾಡಿಗೆ ಬಾಕಿ ವಸೂಲಿಗೆ ಯಾಕೆ ಸೂಕ್ತ ಕ್ರಮಕ್ಕೆ ಈವರೆಗೂ ಮುಂದಾಗಲಿಲ್ಲ ಎಂಬ ಯಕ್ಷಪ್ರಶ್ನೆ ಇಲ್ಲಿನ ನಾಗರೀಕರದ್ದು. ಅದರಲ್ಲೂ ಕೆಲವು ಮಳಿಗೆಗಳ ಟೆಂಡರ್ ಪಡೆದವರೇ ಒಬ್ಬರಾದರೆ ಒಳ ಒಪ್ಪಂದದ ಮೂಲಕ ಅಲ್ಲಿ ವ್ಯಾಪಾರ ನಡೆಸುತ್ತಿರುವವರೇ ಬೇರೆಯವರು! ನಿಯಮದ ಪ್ರಕಾರ ಹೀಗೆ ಉಪ ಬಾಡಿಗೆ ಕೊಡುವಂತಿಲ್ಲ. ಆದರೂ ಈ ವಿಷಯ ಇನ್ನೂ ಪಟ್ಟಣ ಪಂಚಾಯಿತಿಯವರ ಗಮನಕ್ಕೆ ಬಂದಿಲ್ಲವೇ? ಅಥವಾ ಬಂದಿದ್ದರೂ ’ಮಾಮೂಲಿ’ ಜೇಬಿಗಿಳಿಸಿಕೊಂಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ನಟಿಸುತ್ತಿದ್ದಾರಾ? ಎನ್ನುವುದು ಜನರ ಪ್ರಶ್ನೆ.
ಇನ್ನು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಟ್ಟ ಮಳಿಗೆಗಳು ಸಾಮಾನ್ಯ ವರ್ಗದವರ ಪಾಲಾಗಿರುವುದು ಹೇಗೆ? ಪ್ರತಿಷ್ಠಿತರೇ ಮಳಿಗೆ ಟೆಂಡರ್ ಬಾಡಿಗೆ ಹಿಡಿದು ಬೇರೆಯವರಿಗೆ ದುಬಾರಿ ಬೆಲೆ ಬಾಡಿಗೆ ನೀಡಿ, ಬಾಡಿಗೆದಾರರಿಂದ ನಿರಂತರವಾಗಿ ಬಾಡಿಗೆ ಪಡೆದರೂ ಸಹ ಪಂಚಾಯತಿ ಖಾತೆಯಲ್ಲಿ ಬಾಡಿಗೆ ಹಣ ಬಾಕಿ ಉಳಿದಿರುವುದಾದರೂ ಹೇಗೆ?! ಒಳ ರಾಜಕಾರಣ, ಅಧಿಕಾರಿಗಳ ಲಂಚಗುಳಿತನವೇ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿ ಕುಂಠಿತಕ್ಕೆ ಕಾರಣ ಎಂಬುದನ್ನು ಈ ಮಳಿಗೆ ಬಾಡಿಗೆ ವಸೂಲಿಯ ವೈಫಲ್ಯವೇ ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಿದೆ.
ಕೂಡಲೇ ಜಿಲ್ಲಾಡಳಿತ ಮಳಿಗೆ ಬಾಡಿಗೆ ವಸೂಲಿ ಕಾರ್ಯಕ್ಕೆ ಯಾವ ಸೂಚನೆ ನೀಡಲಿದೆ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಈ ಕುರಿತು ಗಮನ ಹರಿಸುವರೇ ಎಂದು ಕಾಯುವ ಸರದಿ ಈಗ ನಾಗರೀಕರದ್ದು.
ಪಟ್ಟಣ ಪಂಚಾಯಿತಿಯಲ್ಲಿ ’ನ್ಯೂಸ್ ಪೋಸ್ಟ್‌ಮಾರ್ಟಮ್’ಗೆ ಸಿಕ್ಕ ದಾಖಲೆಗಳ ಪ್ರಕಾರ ಮಳಿಗೆ ಬಾಡಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಈ ಕೆಳಕಂಡಂತಿದೆ.
ಪೋಸ್ಟ್ ಆಫೀಸ್ ಮುಂಭಾಗದ ಮಳಿಗೆಗಳು
1) ಶೇಖರಪ್ಪ ಬಿನ್ ಕೊರಗಪ್ಪ - ರೂ 2,35,000
2) ಎಂ.ಎನ್.ಸುಧಾಕರ - ರೂ 3,15,000
3) ದೇವಿ - ರೂ 2,87,000
4) ಟಿ.ಡಿ.ಚನ್ನಬಸಪ್ಪ - ರೂ.1,10,000
5) ವಾದಿರಾಜ್ ಭಟ್ - ರೂ. 1,41,093
6) ಗಣೇಶ್ ಬಿನ್ ಮಂಜುನಾಥ - ರೂ. 53,068
7) ಮಂಜುನಾಥ ಬಿನ್ ಮಹಾಬಲ - ರೂ. 73,068
8) ಮಂಜುನಾಥ ಬಿನ್ ಮಹಾಬಲ - ರೂ. 1,20,148
ಹಳೇ ಕೋರ್ಟ್ ಸರ್ಕಲ್ ಮುಂಭಾಗದ ಮಳಿಗೆಗಳು
1) ಪುಟ್ಟಸ್ವಾಮಿ - ರೂ. 1,60,829
2) ನಾಗಪ್ಪ ಬಿನ್ ಕೊಲ್ಲಪ್ಪಗೌಡ - ರೂ. 1,07,413
ಎಸ್ ಬಿ ಐ ಮುಂಭಾಗದ ಮಳಿಗೆಗಳು
1) ಎಸ್.ಪಿ.ನವೀನ್ ಕುಮಾರ್ - ರೂ. 11,093
2) ಪ್ರಭಾಕರ್ - ರೂ. 15,241
3) ಶಂಕರ ನಾಯ್ಕ - ರೂ. 1,70,538
4) ಸುಶೀಲಾ ಕೋಂ ಶಿವಪ್ಪ - ರೂ. 1,80,833
ಬಸ್ ನಿಲ್ದಾಣದ ಮಳಿಗೆಗಳು
1) ಸದಾನಂದ - ರೂ. 1,60,335
2) ನಾಗರಾಜ ಎಸ್. - ರೂ. 2,23,188
3) ಕೆ.ಬಿ.ಮಂಜುನಾಥ - ರೂ. 2,30,268
4) ಅನೀಶ್ ದೇವ್ - ರೂ. 3,80,937
5) ಪ್ರದೀಪ್.ಜಿ.- ರೂ. 1,30,597
6) ನಿರ್ವಾಹಕ ನಿರ್ದೇಶಕ, ಹಾಲು ಒಕ್ಕೂಟ - ರೂ. 42,212
7) ಕೀರ್ತನ್ ಕುಮಾರ್ - ರೂ. 1,07,755
8) ಮಹೇಶ್ ಡಿ ಬಿನ್ ದೇವಪ್ಪ - ರೂ. 5,40,836
ಮೀನು ಮಾರುಕಟ್ಟೆ ಮಳಿಗೆ
1) ಕೆ.ಎಂ.ಯಾಸಿನ್ - ರೂ. 1,82,782
ಈ ಎಲ್ಲಾ ಮಳಿಗೆದಾರರಿಗೆ ಬಾಡಿಗೆ ಬಾಕಿ ಹಣ ಸಂದಾಯ ಮಾಡುವಂತೆ ಪಂಚಾಯಿತಿ ವತಿಯಿಂದ ಈಗಾಗಲೇ ಅಂತಿಮ ನೋಟಿಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಸುರೇಶ್ ಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ