ಮೂಲೆಗದ್ದೆ ಮಠ ಬಸ್ ನಿಲ್ದಾಣದ ಸಮೀಪ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ - ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿ
ಹೊಸನಗರ : ತಾಲ್ಲೂಕಿನಲ್ಲಿ ಹಾದು ಹೋಗುವ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ (NH-766C)ಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಮಂಗಳವಾರ ತಡರಾತ್ರಿ ಸುರಿದ ಭೀಕರ ಮಳೆಯಿಂದಾಗಿ ಮಾರುತೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಮೂಲೆಗದ್ದೆ ಮಠ ಬಸ್ ನಿಲ್ದಾಣದ ಸಮೀಪ ಬೃಹದಾಕಾರದ ಮರ ಬುಡಸಹಿತ ರಸ್ತೆಗುರುಳಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಡಳಿತ, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳೀಯರು ಸಹಕಾರ ನೀಡಿದ್ದರಿಂದಾಗಿ ತೆರವು ಕಾರ್ಯ ತ್ವರಿತವಾಗಿ ಸಾಗಿದ ಪರಿಣಾಮ ಕೆಲವೇ ಗಂಟೆಗಳಲ್ಲಿ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಯಿತು.
ರಸ್ತೆ ಅಗಲೀಕರಣದ ಪರಿಣಾಮವಾಗಿ ಕೆಲವು ಮರಗಳ ಬೇರು ಕತ್ತರಿಸಿರುವುದು, ಬುಡ ಬಿಡಿಸಿ ಸಡಿಲವಾಗುವಂತೆ ಮಾಡಿರುವ ಪರಿಣಾಮದಿಂದ ಈ ಮರ ಉರುಳಿ ಬಿದ್ದಿದೆ ಎನ್ನುವ ಸ್ಥಳೀಯರು, ಹೊಸನಗರದಿಂದ ಸಾಗರ ತನಕವೂ ರಸ್ತೆಯ ಪಕ್ಕದಲ್ಲಿರುವ ಬೃಹತ್ ಮರಗಳ ಸ್ಥಿತಿಯೂ ಇದೇ ಆಗಿದ್ದು, ಮಳೆ ಹೀಗೇ ಸುರಿದರೆ ಯಾವುದೇ ಕ್ಷಣದಲ್ಲಿ ಇನ್ನಷ್ಟು ಮರಗಳು ಧರೆಗುರುಳಬಹುದು ಎನ್ನುತ್ತಾರೆ.
ಒಟ್ಟಿನಲ್ಲಿ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಸಾಗಿರುವ ಹೊಸನಗರ ಪಟ್ಟಣ ಸಮೀಪದ ಕಲ್ಲುಹಳ್ಳ ಸೇತುವೆ ತಡೆಗೋಡೆ ನಿನ್ನೆ ಬೆಳಿಗ್ಗೆ ಕುಸಿದಿದ್ದರೆ, ರಾತ್ರಿ ಮೂಲೆಗದ್ದೆ ಮಠದ ಬಸ್ ನಿಲ್ದಾಣದ ಸಮೀಪ ಮರ ಧರೆಗುರುಳಿರುವುದು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಅಡ್ಡ ಪರಿಣಾಮ ಈಗಲೇ ಹೊಸನಗರ ತಾಲ್ಲೂಕಿನ ಮೇಲೆ ಆಗಲಾರಂಭಿಸಿದ್ದು, ಜನರಲ್ಲಿ ಇನ್ನೇನು ಅನಾಹುತ ಕಾದಿದೆಯೋ ಎನ್ನುವ ಆತಂಕ ಮನೆ ಮಾಡಿದೆ.
ಕಾಮೆಂಟ್‌ಗಳಿಲ್ಲ