Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ ಕಡಸೂರು ನಾಗರಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕವನ ಎಸ್‌.ಕೆ

ರಿಪ್ಪನ್‌ಪೇಟೆ : ರಾಜ್ಯ ಶಿಕ್ಷಣ ಇಲಾಖೆಯು ’ರಾಷ್ಟ್ರೀಯ ಆವಿಷ್ಕಾರ ಅಭಿಯಾನ’ ಕಾರ್ಯಕ್ರಮದಡಿಯಲ್ಲಿ ಶಾಲಾ ಹಂತದಿಂದ ರಾಜ್ಯಮಟ್ಟದವರೆಗೂ ನಡೆಸುವ ರಸಪ್ರಶ್ನೆ ಕಾರ್ಯಕ್ರಮದ ಕಿರಿಯರ ವಿಭಾಗದಲ್ಲಿ ಕಡಸೂರು ನಾಗರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕವನ ಎಸ್‌.ಕೆ, ಇತ್ತೀಚೆಗೆ ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ 4ನೇ ಸ್ಥಾನದೊಂದಿಗೆ ಸಮಾಧಾನಕರ ಬಹುಮಾನ ಪಡೆದು ಹೊಸನಗರ ತಾಲ್ಲೂಕಿಗೆ ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಗೇ ಕೀರ್ತಿ ತಂದಿದ್ದಾಳೆ.

ಬೆಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ಕವನ, ದೂರದರ್ಶನ ಚಂದನ ವಾಹಿನಿಯಲ್ಲಿ ಕೆಲದಿನಗಳ ಹಿಂದೆ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಪ್ರತಿಭೆ ಎಂತಹದ್ದು ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಕವನ ಸ್ಪರ್ಧಿಸಿದ್ದ ಈ ರಸಪ್ರಶ್ನೆ ಕಾರ್ಯಕ್ರಮವು ದೂರದರ್ಶನ ಚಂದನ ವಾಹಿನಿಯಲ್ಲಿ ಈ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಸಾರವಾಗಲಿದೆ.

’ರಾಷ್ಟ್ರೀಯ ಆವಿಷ್ಕಾರ ಅಭಿಯಾನ’ ಕಾರ್ಯಕ್ರಮದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕವನ ತಾಲ್ಲೂಕು ಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಮುಖಾಮುಖಿಯಲ್ಲೂ ಪ್ರಥಮ ಸ್ಥಾನ ಗಳಿಸಿ ಬೆಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುವ ಮೂಲಕವೇ ತಾಲ್ಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿನಿಯಾಗಿದ್ದಳು. ಈಗ ತುಂಬು ಆತ್ಮವಿಶ್ವಾಸ, ಸತತ ಅಧ್ಯಯನ  ಮತ್ತು ಗುರುಗಳ ಸೂಕ್ತ ಮಾರ್ಗದರ್ಶನದೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನವನ್ನು ತನ್ನದಾಗಿಸಿಕೊಂಡ ಕವನ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ಸ್ಫೂರ್ತಿಯಾಗಿದ್ದಾಳೆ.

ತಾಲ್ಲೂಕಿನ ಪುಟ್ಟ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕವನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದವರೆಗೂ ಸ್ಪರ್ಧಿಸಿದ್ದು ಕಡಸೂರು ನಾಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎನ್ನುವುದನ್ನು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದ ಪೋಷಕರ ಮುಖಕ್ಕೆ ಹೊಡೆದಂತೆ ತಿಳಿಸಿದೆ.

ಕವನ ತಾಲ್ಲೂಕು ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ 3,000 ರೂಪಾಯಿ, ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿ 5,000 ರೂಪಾಯಿ ಹಾಗೂ ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ 5,000 ರೂಪಾಯಿ ನಗದನ್ನು ಬಹುಮಾನವಾಗಿ ಗಳಿಸುವುದರೊಂದಿಗೆ, ಈವರೆಗೆ ಒಟ್ಟು ಬಹುಮಾನ ಮೊತ್ತವಾಗಿ 13,000 ರೂಪಾಯಿಗಳನ್ನು ಗೆಲ್ಲುವ ಮೂಲಕ ತನ್ನ ಓದಿಗೆ ಬೇಕಾದಷ್ಟು ಹಣವನ್ನೂ ಗಳಿಸಿ, ಪೋಷಕರ ಹೊರೆಯನ್ನೂ ಕಡಿಮೆ ಮಾಡಿದ್ದಾಳೆ.

ಕವನಳ ಈ ಸಾಧನೆಗೆ ಹುಂಚ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹೊಸನಗರ ತಾಲ್ಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿಗಳ ಸಂಘ, ಪೋಷಕರು, ಅಡುಗೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ