ಸೊನಲೆ ಶ್ರೀರಾಮೇಶ್ವರ ದೇವಸ್ಥಾನದ 17ನೇ ವರ್ಷದ ವರ್ಧ್ಯಂತ್ಯೋತ್ಸವ - ಡಾ. ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ
ಹೊಸನಗರ : ಪ್ರಾಣಿಗಳು ಹಸಿವಾದಾಗ ಮೇಯುತ್ತವೆ, ಆದರೆ ಮನುಷ್ಯ ಹಸಿವಾದಾಗ ತಿನ್ನಲು ಕೇಳುತ್ತಾನೆ. ಇದೆ ಮನುಷ್ಯನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸ. ಆದ್ದರಿಂದ ಮಾನವ ಜನ್ಮ ಶ್ರೇಷ್ಠ ಜನ್ಮ ಎಂದು ಅನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಡಾ.ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಇಲ್ಲಿಗೆ ಸಮೀಪದ ಸೊನಲೆ ಶ್ರೀರಾಮೇಶ್ವರ ದೇವಸ್ಥಾನದ 17 ನೇ ವರ್ಷದ ವರ್ಧ್ಯಂತ್ಯೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಕಲ 84 ಲಕ್ಷ ಕೋಟಿ ಜೀವರಾಶಿಗಳಲ್ಲಿ ಸರ್ವಶ್ರೇಷ್ಠವಾಗಿರುವ ಮನುಷ್ಯ ಜನ್ಮ ದೊಡ್ಡದಾಗಿದೆ. ಊರಿಗೊಂದು ದೇವಸ್ಥಾನ, ಶಾಲೆ ಮತ್ತು ಆಡಳಿತ ವ್ಯವಸ್ಥೆಯಿದ್ದರೆ ಮಾತ್ರ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯಿಂದಿರಲು ಸಾಧ್ಯವೆಂದು ಹೇಳಿದರು. ಸೊನಲೆಯಂತಹ ಕುಗ್ರಾಮದಲ್ಲಿನ ರಾಮೇಶ್ವರ ದೇವಸ್ಥಾನಕ್ಕೆ ಸಾಕಷ್ಟು ವಿಶಾಲವಾಗ ಜಾಗವನ್ನು ಕಾಯ್ದಿರಿಸಿಕೊಂಡಿರುವುದರೊಂದಿಗೆ ಸ್ವಚ್ಚವಾಗಿಟ್ಟಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನ ಮತ್ತು ಮಠ, ಮಂದಿರ, ಶಾಲೆಯ ಜಾಗವನ್ನು ಆಕ್ರಮಿಸುವವರೇ ಹೆಚ್ಚಾಗಿರುವ ಕಾಲದಲ್ಲಿ ಇಷ್ಟು ಪ್ರಶಾಂತವಾದ ಸ್ಥಳದಲ್ಲಿ ಇಷ್ಟು ಜಾಗವನ್ನು ಮೀಸಲಿಟ್ಟಿರುವುದಕ್ಕೆ ದೇವರು ಧರ್ಮದಲ್ಲಿ ನಂಬಿಕೆ ಇಟ್ಟಿರುವುದೇ ಕಾರಣವೆಂದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರವನ್ನು ಕಲಿಸಿ, ಸುಸಂಸ್ಕೃತರನ್ನಾಗಿಸುವಂತೆ ಕರೆ ನೀಡಿದರು.
ರಾಮೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಜಿ, ಗುತ್ತಲಕಲ್ಮಠದ ಮ.ನಿ.ಪ್ರ. ಪ್ರಭುಮಹಾಸ್ವಾಮಿಜಿ ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪಗೌಡರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದವರಿಂದ ಭಜನಾ ಕಾರ್ಯಕ್ರಮ ಜರುಗಿತು. ಶ್ಯಾಮಲ ಪ್ರಾರ್ಥಿಸಿದರು. ಗಂಗಾಧರಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ