ಏಪ್ರಿಲ್ 7 ರಂದು ಕಾರಣಗಿರಿಯಲ್ಲಿ ಸಹಸ್ರ ಸತ್ಯನಾರಾಯಣ ಪೂಜೆ
ಹೊಸನಗರ : ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಬಳಗದ ಆಶ್ರಯದಲ್ಲಿ ಏಪ್ರಿಲ್ 7 ರ ಭಾನುವಾರ 32 ನೇ ವರ್ಷದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
ಇದರ ಅಂಗವಾಗಿ ಏಪ್ರಿಲ್ 6 ರ ಶನಿವಾರ ಬೆಳಿಗ್ಗೆ ಗಣಪತಿ ಉಪನಿಷತ್ ಹವನ, ಶತರುದ್ರಾಭಿಷೇಕ, ಸೂರ್ಯಯಜ್ಞ ಮತ್ತು ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ದಿನಾಂಕ 7 ರ ಭಾನುವಾರ ಸಹಸ್ರಾಧಿಕ ಸತ್ಯನಾರಾಯಣ ಪೂಜೆ, ಸತ್ಯನಾರಾಯಣ ವ್ರತೋದ್ಯಾಪನಾ ಹೋಮಾದಿಗಳು ನಡೆಯಲಿವೆ. ಅಂದು ನಡೆಯುವ ಸಾಮರಸ್ಯ ಸಮಾರಂಭದಲ್ಲಿ ಸುಳುಗೋಡಿನ ರಾಮಕೃಷ್ಣ ಯೋಗಪೀಠದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್ ಮಠದ್ ಮಾತನಾಡಲಿದ್ದಾರೆ. ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿಕಟ ಪೂರ್ವ ಉಪಾಧ್ಯಕ್ಷ ಶ್ರೀನಿಧಿ ಸಿಲ್ಕ್ಸ್ & ಟೆಕ್ಸ್‌ಟೈಲ್ಸ್‌ನ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಅಧ್ಯಕ್ಷತೆ ವಹಿಸಲಿದ್ದು ದೊಂಬೆಕೊಪ್ಪದ ಸಾರಾ ಸಂಸ್ಥೆ, ಹೊಸನಗರದ ನಂದಗೋಕುಲ ಗೋಸೇವಾ ಟ್ರಸ್ಟ್ ಮತ್ತು ಸೇವಾಭಾರತಿ ಗೋಶಾಲೆಯವರನ್ನು ಸನ್ಮಾನಿಸಲಾಗುವುದು. ಕಾರಣಗಿರಿ ಕಲಾದರ್ಶನದ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಸತ್ಯನಾರಾಯಣ ವ್ರತಕಥೆ ನಡೆಸಿಕೊಡಲಿದ್ದಾರೆ.
ಸಾಹಿತ್ಯ ಸಂಸ್ಕೃತಿ ಉತ್ಸವ : ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಎರಡು ದಿನಗಳ ಸಾಹಿತ್ಯ ಸಂಸ್ಕೃತಿ ಉತ್ಸವ ನಡೆಯಲಿದೆ.
ಏಪ್ರಿಲ್ 6ನೇ ಶನಿವಾರ ಮಧ್ಯಾಹ್ನ 12 ರಿಂದ ಭಜನಾ ಸಂಗಮ ಹಾಗೂ ಸಂಜೆ 5 ಗಂಟೆಯಿಂದ ಸಾಹಿತ್ಯಗೋಷ್ಠಿ ನಡೆಯಲಿದೆ. ಸಾಹಿತಿ ಶಾಂತಾರಾಂ ಪ್ರಭುಗಳ ಅಧ್ಯಕ್ಷತೆಯಲ್ಲಿ ಇತಿಹಾಸ ಸಂಶೋಧಕ ಅಂಬ್ರಯಮಠ ಉದ್ಘಾಟಿಸಲಿದ್ದಾರೆ.
ಡಾ॥ ಶಾಂತಾರಾಂ ಪ್ರಭುಗಳ ’ಶ್ರೀ ಗುರು ದ್ರೋಣಾಚಾರ್ಯ’, ಅಂಬ್ರಯಮಠರ ’ಚಾಲುಕ್ಯ ಕುಳೇಶ್ವರಿ ಅಕ್ಕಾದೇವಿ’ ಹಾಗೂ ಡಾ॥ ಶ್ರೀಪತಿ ಹಳಗುಂದರ ’ಶಾಂತಿವನ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಡಾ॥ ಕೆ. ಎನ್. ಗುರುದತ್ತ, ಗಣೇಶಮೂರ್ತಿ, ಹಾಗೂ ಶ್ರೀಮತಿ ನಾಗರತ್ನ ಕೃತಿ ಪರಿಚಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ ಡಾ॥ ಶ್ರೀಪತಿ ಹಳಗುಂದ ಹಾಗೂ ಪುಟ್ಟೇಗೌಡರನ್ನು ಸನ್ಮಾನಿಸಲಾಗುವುದು.
ಸಂಜೆ 7 ರಿಂದ ಕಲಾಭಾರತಿ ತಂಡದಿಂದ ಭರತನಾಟ್ಯ ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದಿನಾಂಕ 7 ರಂದು ಮಧ್ಯಾಹ್ನ ಸುವರ್ಧಿನಿ ನೃತ್ಯಶಾಲೆ ಮಾರುತಿಪುರ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಗ್ರಾಮಭಾರತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಉಪಸ್ಥಿತರಿರುತ್ತಾರೆ.
ಕಾಮೆಂಟ್‌ಗಳಿಲ್ಲ