ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು - ಕಾರಣಗಿರಿಯಲ್ಲಿ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ ಡಾ. ಕೆ.ಎನ್. ಗುರುದತ್ತ
ಹೊಸನಗರ : ಸಾಹಿತ್ಯವು ಸರ್ವರ ಹಿತವನ್ನು ಬಯಸುತ್ತದೆ. ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು. ಸಾಹಿತ್ಯವು ಭಾಷೆಯನ್ನು ಹೊಂದಿಕೊಂಡಂತಹ ಒಂದು ಕಲೆ. ಸಾಹಿತ್ಯವು ಮನಸ್ಸಿಗೆ ಮುದವನ್ನು ನೀಡುವ ಒಂದು ಅಮೂಲ್ಯ ಸಾಧನವಾಗಿದೆ ಎಂದು ಶಿವಮೊಗ್ಗದ ಅರಿವಳಿಕೆ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎನ್. ಗುರುದತ್ತ ಹೇಳಿದರು.
ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿ, ಡಾ.ಶಾಂತಾರಾಂ ಪ್ರಭುಗಳ ’ಶ್ರೀ ಗುರುದ್ರೋಣಾಚರ್ಯ’ ಪುಸ್ತಕದ ಕೃತಿ ಪರಿಚಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಇತಿಹಾಸ ಸಂಶೋಧಕ ಅಂಬ್ರಯ್ಯಮಠ ಕಾರ್ಯಕ್ರಮ ಉದ್ಘಾಟಿಸಿ, ಅಪಾರ ಸಾಹಿತ್ಯ ಸಂಪತ್ತು ಹೊಂದಿರುವ ದೇಶ ನಮ್ಮದು. ನಮ್ಮ ದೇಶದ ಭವ್ಯಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಪರಿಚಯ ನಮಗೆ ಸಾಹಿತ್ಯದಿಂದಾಗುತ್ತದೆ. ಸಾಹಿತ್ಯವು ಓದುಗರ ಮನಸ್ಸಿಗೆ ಹಿತವನ್ನುಂಟು ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತರಾಂ ಪ್ರಭು ಮಾತನಾಡಿ, ಸಾಹಿತ್ಯವು ಸಾಮಾಜಿಕವಾಗಿ ಹಿತವನ್ನು ಕಾಪಾಡುತ್ತದೆ. ಅನಾದಿಕಾಲದಿಂದಲೂ ಸಾಹಿತ್ಯ ತನ್ನದೇ ಆದ ವಿಶೇಷತೆ ಹೊಂದಿದೆ. ಮನುಜಕುಲವನ್ನು ಸಾಹಿತ್ಯವೂ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಶಾಂತಾರಂ ಪ್ರಭುಗಳ ’ಶ್ರೀ ಗುರುದ್ರೋಣಾಚಾರ್ಯ’, ಶ್ರೀ ಅಂಬ್ರಯ್ಯಮಠರ ’ಚಾಲುಕ್ಯ ಕುಳೇಶ್ವರಿ ಅಕ್ಕಾದೇವಿ’, ಡಾ.ಕೆ.ಶ್ರೀಪತಿ ಹಳಗುಂದ ಇವರ ’ಶಾಂತಿವನ’ ಪುಸ್ತಕಗಳ ಲೋಕಾರ್ಪಣೆ ನಡೆಯಿತು. ಕೃತಿ ಪರಿಚಯವನ್ನು ಸಾಹಿತಿ ಶ್ರೀ ಗಣೇಶ ಮೂರ್ತಿ, ಲೇಖಕಿ ಶ್ರೀಮತಿ ನಾಗರತ್ನ ನಿಲ್ಸಕಲ್ ಇವರು ನಡೆಸಿಕೊಟ್ಟರು.
ಯಕ್ಷಗಾನ ಕಲಾವಿದರಾದ ಶ್ರೀ ಪುಟ್ಟೆಗೌಡರು, ಬಿಳ್ಳೋಡಿ ಮತ್ತು ಸಾಹಿತಿಗಳಾದ ಡಾ.ಕೆ. ಶ್ರೀಪತಿ ಹಳಗುಂದ ಇವರನ್ನು ಸನ್ಮಾನಿಸಲಾಯಿತು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ.ಎಸ್. ನಳಿನಚಂದ್ರ, ಹನಿಯರವಿ, ಗಣಪತಿ ಭಟ್ ಕವಲಕ್ಕಿ, ಹನಿಯ ಗುರುಮೂರ್ತಿ ಮತ್ತಿತರಿದ್ದರು. ಅಶ್ವಿನಿ ಪಂಡಿತ್ ನಿರೂಪಿಸಿ, ಆರತಿ ಮಹೇಶ್ ಸ್ವಾಗತಿಸಿ, ಗಾಯತ್ರಿ ಅರುಣ ವಂದಿಸಿದರು.
ಬೆಳಿಗ್ಗೆಯಿಂದ ಸುಮಾರು 22 ತಂಡಗಳಿಂದ ಭಜನಾ ಸಂಗಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಸಂಜೆ ಕಲಾಭಾರತಿ ನೃತ್ಯಶಾಲೆ ಕಾರಣಗಿರಿ ಇವರಿಂದ ಭರತನಾಟ್ಯ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾಮೆಂಟ್‌ಗಳಿಲ್ಲ