Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹುಂಚದ ಹಳೇ ನವೋದಯ ವಿದ್ಯಾರ್ಥಿಗಳಿಂದ ಉಚಿತ ತರಬೇತಿ - ಹೊಸನಗರ ತಾಲ್ಲೂಕಿನ 3 ಮಕ್ಕಳು ನವೋದಯ ಶಾಲೆಗೆ ಆಯ್ಕೆ

ಹೊಸನಗರ : ಹಳೆ ನವೋದಯ ವಿದ್ಯಾರ್ಥಿಗಳ ಮತ್ತು ಹುಂಚ ಯುವ ಬಳಗದ ಸಂಸ್ಥೆ ನೀಡಿದ ನವೋದಯ ಪರೀಕ್ಷೆಯ ಉಚಿತ ತರಬೇತಿಯಲ್ಲಿ ಪಾಲ್ಗೊಂಡಿದ್ದ ಹೊಸನಗರ ತಾಲ್ಲೂಕಿನ ಮೂವರು ವಿದ್ಯಾರ್ಥಿಗಳು ಈ ಬಾರಿ ನವೋದಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಜಿಲ್ಲೆಯ ಗಾಜನೂರಿನ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 

ಉಚಿತ ಶಿಬಿರದ ವಿದ್ಯಾರ್ಥಿಗಳಾದ ಖುಷಿ ಕುಂದವಿ, ಮಾನ್ಯ ಎನ್, ಗಹನ ಹೆಚ್ ಯು, 6ನೇ ತರಗತಿಯ ಪ್ರವೇಶಕ್ಕೆ ಈ ಬಾರಿ ನವೋದಯ ಪರೀಕ್ಷೆಯನ್ನು ಬರೆದಿದ್ದು, ಮೂವರು ವಿದ್ಯಾರ್ಥಿಗಳ ಆಯ್ಕೆ ಶಿಬಿರದ ಆಯೋಜಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಹಾಗೂ ಭರವಸೆಯನ್ನು ಮೂಡಿಸಿದೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ಹುಂಚ ಗ್ರಾಮ ವ್ಯಾಪ್ತಿಯ ಮಕ್ಕಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರೀಕ್ಷೆಗೆ ಅಣಿಗೊಳಿಸುವ ಕೆಲಸವನ್ನು ಹಳೆ ನವೋದಯ ವಿದ್ಯಾರ್ಥಿಗಳ ಮತ್ತು ಹುಂಚ ಯುವ ಬಳಗದ ಸಂಸ್ಥೆ ಮಾಡುತ್ತಾ ಬಂದಿದೆ. ಬಳಗದ ಈ ಶಿಬಿರದಲ್ಲಿ ಪರೀಕ್ಷೆಗೆ ದಾಖಲಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 4-5 ತಿಂಗಳು ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಾಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗುತ್ತದೆ. ಪ್ರಸಕ್ತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಈ ಶಿಬಿರದಿಂದ 6ನೇ ತರಗತಿ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯಲ್ಲಿ ಮೂರು ಮಕ್ಕಳು ಅರ್ಹತೆಯನ್ನು ಪಡೆದಿರುವುದು ಈ ಬಳಗದ ವಿಶೇಷ ಸಾಧನೆಯಾಗಿದೆ.

ಈ ಶಿಬಿರದ ಸಂಸ್ಥಾಪಕರಾದ, ಹಳೆ ನವೋದಯ ವಿದ್ಯಾರ್ಥಿ ಪ್ರಕಾಶ್ ಜೋಯ್ಸ್ ಅವರು, ಶಿಬಿರದ ಮಕ್ಕಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎನ್ನುವುದು ನಮ್ಮ ಉಚಿತ ನವೋದಯ ತರಬೇತಿ ಶಿಬಿರದ ಮೂಲ ಉದ್ದೇಶವಾಗಿದೆ ಎಂದು ಹೇಳಿ, ಈ ಯಶಸ್ಸಿಗೆ ಕಾರಣಕರ್ತರಾದ ಶಿಬಿರದ ಶಿಕ್ಷಕ ವೃಂದಕ್ಕೆ, ಸಂಚಾಲಕರಿಗೆ ಮತ್ತು ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಿಂದ ಒಟ್ಟು 7 ಮಕ್ಕಳು ನವೋದಯ ಮತ್ತು 27 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಖುಷಿ ವಿಚಾರವೇನೆಂದರೆ, ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು ಕೇಂದ್ರ ಮತ್ತು ರಾಜ್ಯ ಸರಕಾರಗಳ 97.4 ಲಕ್ಷ ರೂಪಾಯಿ ಮೊತ್ತದ ಶೈಕ್ಷಣಿಕ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ. ನವೋದಯ ಮತ್ತು ಮೊರಾರ್ಜಿ ಶಾಲೆಯ ಪರೀಕ್ಷೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ - ಪ್ರಕಾಶ್ ಜೋಯ್ಸ್ - 9980463013


ಕಾಮೆಂಟ್‌ಗಳಿಲ್ಲ