Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಂಬುಜದ ಜಗನ್ಮಾತೆ ಪದ್ಮಾವತಿ ದೇವಿಯ ವೈಭವದ ಮಹಾರಥೋತ್ಸವ

ರಿಪ್ಪನ್‌ಪೇಟೆ : ಜೈನರ ದಕ್ಷಿಣ ಕಾಶಿಯೆಂದೇ ಖ್ಯಾತಿ ಪಡೆದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಹಾಮಾತೆ ಪದ್ಮಾವತಿ ದೇವಿಯ ವೈಭವದ ಮಹಾರಥೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು.

ಇಂದು 1.05 ಗಂಟೆಗೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನು ಭಕ್ತರ ಮುಗಿಲು ಮುಟ್ಟುವ ಜಯಘೋಷದೊಂದಿಗೆ ರಥವನ್ನೇರಿಸಲಾಯಿತು. ಜೈ ಪಾರ್ಶ್ವನಾಥ ಸ್ವಾಮಿ, ಜಯ ಶ್ರೀ ಪದ್ಮಾವತಿ ದೇವಿ ಎಂಬ ಭಕ್ತವೃಂದದ ಜಯಘೋಷ, ಚೆಂಡೆ, ಡೋಲು, ನಾನಾ ಘಂಟಾನಾದಗಳ ನಡುವೆ ರಥಯಾತ್ರೆಗೆ ಹೊಂಬುಜ ಜೈನಮಠದ ಜಗದ್ಗುರು ಡಾ. ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರು ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡಿ ದೇವಿಯಲ್ಲಿ ಸುಖಶಾಂತಿ ನೆಮ್ಮದಿಯೊಂದಿಗೆ ಮಳೆ ಬೆಳೆ ಸಮೃದ್ಧಿಯೊಂದಿಗೆ ಲೋಕೋದ್ಧಾರವಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿದರು. ಭಕ್ತರು ಬಾಳೆಹಣ್ಣು, ಹೂವುಗಳನ್ನು ಶ್ರದ್ಧಾಭಕ್ತಿಯೊಂದಿಗೆ ರಥದತ್ತ ಎಸೆದು ದೇವಿಯಲ್ಲಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪೂಜ್ಯ ಮುನಿ ಶ್ರೀ 108 ಅಮೋಘಕೀರ್ತಿ ಮಹಾರಾಜರು ಹಾಗೂ ಮುನಿಶ್ರೀ 108 ಅಮರಕೀರ್ತಿ ಮಹಾರಾಜರು, ಕುಂಬದಹಳ್ಳಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ಸೋಂದಾ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ದೇಶ ವಿದೇಶಗಳು ಒಳಗೊಂಡಂತೆ ಜಿಲ್ಲೆ, ಹೊರಜಿಲ್ಲೆಗಳ ಭಕ್ತ ಸಮೂಹ ಪದ್ಮಾವತಿ ದೇವಿಯ ರಥೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೇ ಭಕ್ತ ಸಮೂಹ ಮಹಾರಥೋತ್ಸವದಲ್ಲಿ ಭಾಗವಹಿಸಿ ಭಕ್ತಿಯ ಪರಾಕಾಷ್ಠತೆಯನ್ನು ಮೆರೆದರು. ವಿವಿಧ ಸಂಘ ಸಂಸ್ಥೆಗಳು ಅಲ್ಲಲ್ಲಿ ಭಕ್ತರಿಗಾಗಿ ಮಜ್ಜಿಗೆ, ಪಾನಕ, ನೀರಿನ ವ್ಯವಸ್ಥೆಯನ್ನು ಮಾಡಿದ್ದವು. ಅಲಂಕೃತ ಗಜ ಐಶ್ವರ್ಯ, ಅಶ್ವ ಮಾನವಿ ಶ್ರೀದೇವರ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ಕಾಮೆಂಟ್‌ಗಳಿಲ್ಲ