ಧ್ವಜಾವರೋಹಣದೊಂದಿಗೆ ಹೊಂಬುಜ ರಥೋತ್ಸವ ಸಂಪನ್ನ
ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾಗತ ವಾರ್ಷಿಕ ರಥೋತ್ಸವ ಮಹೋತ್ಸವವು ನಿರಂತರ ಆರು ದಿನಗಳ ಕಾಲ ವಿವಿಧ ಜಿನಾಗಮ ಶಾಸ್ತ್ರೋಕ್ತ ಪೂಜೆ, ಆರಾಧನೆ, ಉತ್ಸವಾದಿಗಳು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಿತ್ಯವಿಧಿ ಸಹಿತ ಪೂಜಾ ವಿಧಾನಗಳು, ಕುಂಕುಮೋತ್ಸವವು ಸಾಂಗವಾಗಿ ಏರ್ಪಟ್ಟಿತ್ತು. ಕುಮಧ್ವತಿ ತೀರ್ಥದಲ್ಲಿ ಉತ್ಸವ ಮೂರ್ತಿಯ ಅವಭೃತ ಸ್ನಾನದ ಬಳಿಕ ಸಾಲಾಂಕೃತ ಪಲ್ಲಕ್ಕಿ, ಆ ಬಳಿಕ ಗಜವಾಹನದಲ್ಲಿ ಶ್ರೀ ದೇವರ ಬಿಂಬವನ್ನು ಜಿನಾಲಯಕ್ಕೆ ಸ್ವಸ್ತಿಶ್ರೀ ಸ್ವಾಮೀಜಿಯವರು ಬರಮಾಡಿಕೊಂಡರು. ಅಷ್ಟಾವಧಾನದ ನಂತರ ಧ್ವಜಾವರೋಹಣಗೈದು ಶ್ರೀ ಪದ್ಮಾವತಿ ದೇವಿ ಬಿಂಬವನ್ನು ಜಿನಾಲಯದಲ್ಲಿ ಪೂಜಿಸಲಾಯಿತು. ಮಹಾಪೂಜೆಯ ಮಹಾಮಂಗಳಾರತಿ ಸಂದರ್ಭದಲ್ಲಿ ಭಕ್ತರು ಶ್ರೀ ಪದ್ಮಾವತಿ ಮಾತಾಕೀ ಜೈ, ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಜೈನ ಧರ್ಮಕೀ ಜೈ ಎಂದು ಭಕ್ತಿಪೂರ್ವಕವಾಗಿ ಜಯಕಾರ ಹಾಕಿದರು.
ಧರ್ಮ ಸಂದೇಶ : ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈ ಸಂದರ್ಭದಲ್ಲಿ, ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ತಮ್ಮ ಜೀವನದಲ್ಲಿ ನಿತ್ಯವೂ ಧರ್ಮಪಥದಲ್ಲಿ ಸಾಗಿದಾಗ ಇಷ್ಟಾರ್ಥ, ಸದೀಚ್ಛೆ ಲಭಿಸುತ್ತದೆ ಎಂಬ ಧರ್ಮ ಸಂದೇಶ ನೀಡಿದರು.
ಕಾಮೆಂಟ್‌ಗಳಿಲ್ಲ