ಈಶ್ವರಪ್ಪನ ಎದೆ ಸೀಳಿದರೇ ಈಗ ಯಡಿಯೂರಪ್ಪನೇ ಕಾಣೋದು - ಚುನಾವಣಾ ಪ್ರಚಾರದಲ್ಲಿ ಶಾಸಕ ಬೇಳೂರು ವ್ಯಂಗ್ಯ
ಹೊಸನಗರ : ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದ ಐದು ಗ್ಯಾರೆಂಟಿಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ ಪ್ರಾಮಾಣಿಕವಾಗಿ ನಡೆದುಕೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಿಳಿಸಿದರು.
ತಾಲ್ಲೂಕಿನ ಹರಿದ್ರಾವತಿ, ಮಾರುತಿಪುರ, ಹುಂಚಾರೋಡ್ ಸರ್ಕಲ್ಲಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ದೀನ ದಲಿತರ ಧ್ವನಿಯಾಗಿದ್ದ ನನ್ನ ತಂದೆ ಎಸ್. ಬಂಗಾರಪ್ಪ, ಕಳೆದ 32 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ಜಾರಿಗೆ ತಂದಿದ್ದ ಆಶ್ರಯ, ಆರಾಧನ, ವಿಶ್ವ, ಗ್ರಾಮೀಣ ಕೃಪಾಂಕ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಬಗರ್ ಹುಕುಂ ಹಕ್ಕುಪತ್ರ ವಿತರಣೆ ಕಾರ್ಯಕ್ರಮಗಳನ್ನು ಮುಂದೆ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಅವರ ಮಾದರಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ ಆಗಿದೆ. ತಾವು ಸಹ ಅವರಂತೆ ಜನಸೇವೆ ಮಾಡುವ ಬಯಕೆ ಹೊಂದಿದ್ದು, ಈ ಬಾರಿ ಕ್ಷೇತ್ರದ ಮತದಾರರು ಹೆಚ್ಚಿನ ಮತ ನೀಡುವ ಮೂಲಕ ಆಶೀರ್ವದಿಸಿ, ರೈತರ ಸಾಲಮನ್ನಾ, ಕೂಲಿ ಕಾರ್ಮಿಕರ ಅನೇಕ ಜಲ್ವಂತ ಸಮಸ್ಯೆ ಕುರಿತಂತೆ ಲೋಕಸಭೆಯಲ್ಲಿ ಧ್ವನಿಯಾಗಲು ಸಹಕರಿಸುವಂತೆ ಅವರು ಕೋರಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನನ್ನ ಮಗ ಕಾಂತೇಶ್‌ಗೆ ಈ ಬಾರಿ ಹಾವೇರಿ ಕ್ಷೇತ್ರದ ಲೋಕಸಭಾ ಟಿಕೇಟ್ ತಪ್ಪಲು ಬಿ.ಎಸ್. ಯಡಿಯೂರಪ್ಪ ಕಾರಣ ಎಂದು ಕಂಡ ಕಂಡಲ್ಲಿ ಬೊಬ್ಬೆ ಹಾಕುವ ಕೆ.ಎಸ್. ಈಶ್ವರಪ್ಪಗೆ ಈ ಹಿಂದೆ ತಮ್ಮ ಎದೆ ಬಗೆದರೆ, ಮೋದಿ ಹಾಗೂ ಶ್ರೀರಾಮನೇ ಕಾಣುತ್ತಾನೆ ಎನ್ನುತ್ತಿದ್ದರು. ಆದರೆ, ಈಗ ಅದೇ ಎದೆ ಸೀಳಿದಲ್ಲಿ ಅವರಿಗೆ ಯಡಿಯೂರಪ್ಪ ಕಾಣುತ್ತಿದ್ದಾರೆ ಹೊರತು ಬೇರೆ ಯಾರೂ ಕಾಣರು ಎಂದು ಲೇವಡಿ ಮಾಡಿದರು. ಹಿಂದುತ್ವವಾದಿ ಎಂದೇ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈಶ್ವರಪ್ಪ ಅವರನ್ನು ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಾರ್ವಜನಿಕವಾಗಿ ಅವರೊಬ್ಬ ಹಿಂದೂ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟುವ ಮೂಲಕ ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅವರದೇ ಪಕ್ಷದ ಮುಖಂಡರು ಅಪ್ಪ, ಮಕ್ಕಳ ವಿರುದ್ಧ ಭಾರೀ ಭ್ರಷ್ಟಾಚಾರದ ಗಂಭೀರ ಆರೋಪ ಮಾಡುತ್ತಿರುವುದು ಬಿಜೆಪಿ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಆಗಿದೆ ಎಂದು ಕಿಡಿಕಾರಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ನಟ ಡಾ. ಶಿವರಾಜಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ, ವೀಕ್ಷಕ ಅನಿಲ್ ಕುಮಾರ್, ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ, ಪ್ರಮುಖರಾದ ಬಂಡಿ ರಾಮಚಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ಜಯಶೀಲಪ್ಪಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಬಗರ್ ಹುಕುಂ ಸಮಿತಿ ಸದಸ್ಯೆ ಸಾಕಮ್ಮ, ಪ್ರಮುಖರಾದ ಶಿವಮೂರ್ತಿ, ನಾಗರತ್ನ, ನಾರಾಯಣಪ್ಪ, ಸಣ್ಣಕ್ಕಿ ಮಂಜು ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ