ಹೊಸನಗರ - ನೂತನ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆರಗ ಜ್ಞಾನೇಂದ್ರ
ಹೊಸನಗರ : ನಾಗರೀಕ ಸೌಲಭ್ಯಗಳನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸುಮಾರು 5 ಕೋಟಿ 75 ಲಕ್ಷ ರೂಪಾಯಿ ಅನುದಾನದಲ್ಲಿ ತಾಲ್ಲೂಕಿನ ಜಕ್ಕನಗದ್ದೆ-ತೊಗರೆ-ಇಟ್ಟಕ್ಕಿ ಸಂಪರ್ಕ ಜಿಲ್ಲಾ ಮುಖ್ಯ ರಸ್ತೆಯ ನೂತನ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಿ.ವೈ. ರಾಘವೇಂದ್ರ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದಾಗ, ಈ ಭಾಗದ ರಸ್ತೆ ಕಾಮಗಾರಿಗೆ ಅವರ ಗಮನ ಸೆಳೆದ ಪರಿಣಾಮ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ದಿ ಆಯಿತು. ಆದರೆ, ಈ ಭಾಗದ ಮತದಾರರು ನನ್ನ ವಿರೋಧಿಗಳು ಹೇಳುವ ಮಾತಿಗೆ ತಲೆದೂಗಿ, ನನ್ನ ಈ ಶ್ರಮಕ್ಕೆ ಚುನಾವಣೆಯಲ್ಲಿ ತಕ್ಕ ಮತಗಳನ್ನೇ ನೀಡಲಿಲ್ಲ. ಆದರೂ ನಾನು, ಈ ಕುರಿತು ಬೇಧ ಮಾಡದೇ, ಈ ಭಾಗದ ಜನರ ಸಂಕಷ್ಟಗಳ ನಿವಾರಣೆಗಾಗಿ, ನೂತನ ಸೇತುವೆ, ರಸ್ತೆಯ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಅಭಿವೃದ್ದಿ ಕಾರ್ಯಗಳಲ್ಲಿ ಎಲ್ಲೂ ರಾಜಕೀಯ ನುಸುಳದಂತೆ ಎಚ್ಚರವಹಿಸಿದ್ದೇನೆ ಎಂದರು.
ಸಾರ್ವಜನಿಕ ಜೀವನದಲ್ಲಿ ಕಾಲಕಾಲಕ್ಕೆ ನಾಗರೀಕರು ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ತಿದ್ದಿ, ತೀಡಿ, ಶ್ಲಾಘಿಸುವ ಕಾರ್ಯ ಆಗಬೇಕಿದೆ. ಅದು ಜನಪ್ರತಿನಿಧಿಗಳಿಗೆ ಮತ್ತಷ್ಟು ಕಾರ್ಯ ನಿರ್ವಹಿಸಲು ಉತ್ತೇಜನ ನೀಡುವ ಟಾನಿಕ್ ಇದ್ದಂತೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತ್ರಿಣಿವೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಾವತಿ, ಸದಸ್ಯೆ ಚಂದ್ರಮತಿ, ಕೊಳಗಿ ಸತೀಶ್ ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ