ಪುರಪ್ಪೆಮನೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳು ಕಟ್ಟಿಸಿಕೊಟ್ಟ 14 ಲಕ್ಷ ರೂ. ವೆಚ್ಚದ ನೂತನ ಭೋಜನಾಲಯ ಕಟ್ಟಡ ಉದ್ಘಾಟನೆ
ಹೊಸನಗರ : ತಾಲ್ಲೂಕಿನ ಪುರಪ್ಪೆಮನೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳ ಒಕ್ಕೂಟವು 14 ಲಕ್ಷ ರೂಪಾಯಿ ಕೊಡುಗೆಯಲ್ಲಿ ನಿರ್ಮಿಸಿ ಕೊಟ್ಟ ನೂತನ ಅನ್ನಪೂರ್ಣ ಭೋಜನಾಲಯ ಕಟ್ಟಡವನ್ನು ಆಯುರ್ವೇದ ವೈದ್ಯ ಡಾ. ಕೆ. ವಿ. ಪತಂಜಲಿ ಅವರು ಇಂದು ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಮಾತನಾಡಿದ ಅವರು, ಪಂಚ ಆಲಯಗಳಿಂದ ಗ್ರಾಮಾಭಿವೃದ್ಧಿ ಸಾಧ್ಯ. ಅಂದರೆ ಪ್ರತಿಗ್ರಾಮಕ್ಕೂ ವಾಚನಾಲಯ, ಚಿಕಿತ್ಸಾಲಯ, ಭೋಜನಾಲಯ, ಶೌಚಾಲಯ ಹಾಗೂ ವಿದ್ಯಾಲಯಗಳು ಇದ್ದಲ್ಲಿ, ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ. ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಮಕ್ಕಳು ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳುವುದರಿಂದ ಶೈಕ್ಷಣಿಕ ಪ್ರಗತಿ ಕಂಡುಕೊಳ್ಳಲು ಸಾಧ್ಯವಿದೆ. ಭೌತಿಕ ಬೆಳವಣಿಗೆಯ ಜೊತೆಗೆ ಬೌದ್ಧಿಕ ಬೆಳವಣಿಗೆ ಅಗತ್ಯ ಎಂದರು.
2000ನೇ ಇಸವಿಯ ಬಳಿಕ ದೇಶದಲ್ಲಿ ಜಾರಿಗೊಂಡ ಸರ್ವಶಿಕ್ಷಣ ಅಭಿಯಾನದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಶಿಕ್ಷಣ ತಜ್ಞರು ಜಾರಿಗೊಳಿಸಿರುವ ಶಿಕ್ಷಣ ನೀತಿಯ ಲೋಪಗಳಿಂದ ಇಂದು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಫಲವಾಗಿ ಔದ್ಯೋಗಿಕ ರಂಗದಲ್ಲಿ ಯಶಸ್ಸು ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪುರಪ್ಪೆಮನೆಯ ಸರ್ಕಾರಿ ಶಾಲೆ ಹಲವು ವರ್ಷಗಳಿಂದ ನಿರಂತರವಾಗಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪೂರಕ ವಾತಾವರಣ ಕಲ್ಪಿಸಿದೆ. ಇದರ ಫಲವಾಗಿ ಶೈಕ್ಷಣಿಕ ಸಾಧನೆಯ ಪಟ್ಟಿಯಲ್ಲಿ ಇಂದು ಜಿಲ್ಲೆಯಲ್ಲಿಯೇ ಎರಡನೇ ಸ್ಥಾನ ಪಡೆದಿರುವುದು ಶ್ಲಾಘನೀಯ ಎಂದರು.
ಬರುವ ಬೇಸಿಗೆ ರಜೆಯಲ್ಲಿ ಪ್ರತಿದಿನ ದಿನಪತ್ರಿಕೆ ಹಾಗೂ ಕನಿಷ್ಠ 20 ಪುಸ್ತಕ ಓದುವ ಪ್ರತಿ ವಿದ್ಯಾರ್ಥಿಗೆ ತಲಾ 1 ಸಾವಿರ ರೂಪಾಯಿ ಧನಸಹಾಯ ನೀಡುವ ಭರವಸೆಯನ್ನು ಡಾ. ಕೆ. ವಿ. ಪತಂಜಲಿ ಅವರು ಈ ಸಂದರ್ಭದಲ್ಲಿ ನೀಡಿದರು.
ಹಳೆ ವಿದ್ಯಾರ್ಥಿಗಳ ಒಕ್ಕೂಟದ ಕಾರ‌್ಯದರ್ಶಿ ಮೃತ್ಯುಂಜಯ ಮಾತನಾಡಿ, ಪ್ರತಿ ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ‌್ಯಕ್ರಮಗಳು ಆಗಬೇಕು. ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕೈಗೊಳ್ಳುವಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಪೋಷಕರೇ ಇಲ್ಲಿ ಭೋಜನಾಲಯ ನಿರ್ಮಿಸಿರುವುದು ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.
ಬಿಇಓ ಹೆಚ್.ಆರ್. ಕೃಷ್ಣಮೂರ್ತಿ ಮಾತನಾಡಿ, ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಮೊದಲು ಮಾದರಿಯಾಗಬೇಕು ಎಂದರು.
ಹಳೇ ವಿದ್ಯಾರ್ಥಿಗಳು ನಿರ್ಮಿಸಿಕೊಟ್ಟ ಭೋಜನಾಲಯವನ್ನು ಬಿಇಓ ಹೆಚ್.ಆರ್. ಕೃಷ್ಣಮೂರ್ತಿ ಅವರಿಗೆ ಹಸ್ತಾಂತರ ಪತ್ರ ನೀಡುವ ಮೂಲಕ ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಂದ ಗಾಯನ, ನೃತ್ಯವನ್ನು ಕೂಡಾ ಏರ್ಪಡಿಸಲಾಗಿತ್ತು.
ಶಾಲಾ ಸಮಿತಿ ಅಧ್ಯಕ್ಷ ಎಂ. ಅಶೋಕ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ದಿನೇಶ್, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಅನ್ನಪೂರ್ಣಮ್ಮ, ರಾಘವೇಂದ್ರ, ಮಹಾಲಕ್ಷ್ಮಿ, ಸಂತೋಷ, ಜಯಲಕ್ಷ್ಮಿ, ಜಯಪ್ರಕಾಶ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ, ಭೂದಾನಿ ಶಂಕರನಾರಾಯಣ ಹೆಗಡೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ ಎಸ್.ಪಿ, ಶಿಕ್ಷಕರ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ಉಪಾಧ್ಯಕ್ಷ ಮಹಮದ್ ಅಲ್ತಾಫ್, ಸಿಆರ್‌ಪಿ ಅರವಿಂದ ಮತ್ತಿತರರು ಉಪಸ್ಥಿತರಿದ್ದರು.
ಪ್ರಸನ್ನಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಭೋಜನಾಲಯದಲ್ಲಿ ಮಕ್ಕಳೊಂದಿಗೆ ಶಿಕ್ಷಕರು, ಪೋಷಕರು, ಅತಿಥಿಗಳು ಒಟ್ಟಾಗಿ ಭೋಜನ ಸವಿದು ಸಂಭ್ರಮಿಸಿದರು.
ಕಾಮೆಂಟ್‌ಗಳಿಲ್ಲ