SPECIAL REPORT - ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ RTI ಅರ್ಜಿ ಹಾಕಿದ್ರೆ ಮೆಂಬರ್ ನಿರೂಪ್‌ನ ಕಾಲ್ ಬರುತ್ತದೆ... ಎಚ್ಚರ!! - ಅಧಿಕಾರ ದುರ್ಬಳಕೆ ಮಾಡಿಕೊಂಡನೇ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸದಸ್ಯ ನಿರೂಪ್ ಕುಮಾರ್?
ರಿಪ್ಪನ್‌ಪೇಟೆ : ಗ್ರಾಮ ಪಂಚಾಯ್ತಿಗಳ ಪಿಡಿಓಗಳು ಹೇಗೆ ಪಂಚಾಯ್ತಿ ಮೆಂಬರ‍್ರುಗಳ ಹಿಡಿತದಲ್ಲಿರುತ್ತಾರೆ ಮತ್ತು ಸರ್ಕಾರ ತಮಗೆ ಕೊಟ್ಟ ಅಧಿಕಾರವನ್ನು ಯಾವ ರೀತಿಯಲ್ಲಿ ಮೆಂಬರ‍್ರುಗಳ ಪಾದಪೂಜೆಗೆ ಬಳಸುತ್ತಾರೆ ಎನ್ನುವುದಕ್ಕೆ ನಿಮಗೆ ಸಾಕ್ಷಿ ಬೇಕೆಂದರೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಡೆಗೊಮ್ಮೆ ಹೋಗಿ ಬನ್ನಿ. ಇಲ್ಲಿ ಈ ಹಿಂದಿದ್ದ ಪಿಡಿಓ ಚಂದ್ರಶೇಖರನದ್ದೊಂದು ಕಥೆಯಾದರೆ, ಈಗ ಆ ಜಾಗಕ್ಕೆ ಬಂದು ಕುಳಿತಿರುವ ಮಧುಸೂದನನದ್ದು ಇನ್ನೊಂದು ಕಥೆ. ಇವರಿಬ್ಬರೂ ರಿಪ್ಪನ್‌ಪೇಟೆ ಪಂಚಾಯ್ತಿಯ ಕೆಲವು ಮೆಂಬರ‍್ರುಗಳು ಅಕ್ರಮವೆಸಗುತ್ತಾರೆ, ಅಕ್ರಮ ದಾಖಲೆ ಸೃಷ್ಟಿಗೆ ಮುಂದಾಗುತ್ತಾರೆ, ಇಲ್ಲದೇ ಇರುವ ರಸ್ತೆಯನ್ನು ಇದೆ ಎಂದು ಬರೆದುಕೊಡಿ ಎಂದರೆ ಕೇವಲ ಸರ್ಕಾರಿ ಕೆಲಸದ ಸಮಯವಲ್ಲದೇ, ರಾತ್ರಿ ಕೂಡಾ ಓಟಿ ಮಾಡಿ ಪಾವನರಾಗುತ್ತಾರೆ. ಮಾಡಿದ್ದಕ್ಕೆ ತಕ್ಕ ಟಿಪ್ಸ್ ಕೂಡಾ ಪಡೆಯುತ್ತಾರೆ.
ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನ್ಯೂಸ್ ಪೋಸ್ಟ್‌ಮಾರ್ಟಮ್‌ಗೆ ಸಿಕ್ಕಿರುವುದರಿಂದಲೇ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಈ ವರದಿಯನ್ನು ಈಗ ನಿಮ್ಮ ಮುಂದಿಡುತ್ತಿದ್ದೇವೆ.
ರಿಪ್ಪನ್‌ಪೇಟೆಯಲ್ಲಿ ಪಿಎನ್‌ಆರ್ ಡೆವಲಪರ್ಸ್ ಎನ್ನುವ ರಿಯಲ್ ಎಸ್ಟೇಟ್ ಸಂಸ್ಥೆಯೊಂದಿದೆ. ಈ ಸಂಸ್ಥೆ ಕೆರೆಹಳ್ಳಿ ಹೋಬಳಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೆ ನಂ.426ರ 1.39 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಲೇಔಟ್‌ವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಲೇಔಟ್‌ನಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮಗಳೇ ತುಂಬಿ ಹೋಗಿವೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಇಲ್ಲದೇ ಇರುವ ರಸ್ತೆಯನ್ನು ಇದೆ ಎಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯ ಪಿಡಿಓ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ. ಪಿಡಿಓ ನಕಲಿ ದಾಖಲೆ ಸೃಷ್ಟಿ ಮಾಡುವುದಕ್ಕೆ ಪಿಎನ್‌ಆರ್ ಡೆವಲಪರ್ಸ್‌ನ ಮಾಲೀಕನಾಗಿರುವ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯ ಸದಸ್ಯ ನಿರೂಪ್ ಕುಮಾರ್‌ನೇ ಕಾರಣ. ನಿರೂಪ್‌ಕುಮಾರ್ ತಾನು ಪಂಚಾಯ್ತಿ ಸದಸ್ಯ ಎನ್ನುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪಿಡಿಓ ಜೊತೆಗೆ ತನ್ನ ಲೇಔಟಿಗೆ ಇಲ್ಲದೇ ಇರುವ ದಾರಿ ಇತ್ಯಾದಿಗಳನ್ನು ಇದೆ ಎಂದು ದಾಖಲೆ ಸೃಷ್ಟಿಸುತ್ತಿದ್ದಾನೆ ಎನ್ನುವ ದೂರುಗಳು ನ್ಯೂಸ್ ಪೋಸ್ಟ್‌ಮಾರ್ಟಮ್‌ಗೆ ತಲುಪಿದ್ದವು.
ಆದ್ದರಿಂದಲೇ ಈ ಬಗೆಗಿನ ದಾಖಲೆಗಳನ್ನು ಅಧಿಕೃತವಾಗಿ ಸಂಗ್ರಹಿಸಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು, ವರದಿ ಸಿದ್ಧಪಡಿಸಬೇಕು ಎಂದುಕೊಂಡು ನ್ಯೂಸ್ ಪೋಸ್ಟ್‌ಮಾರ್ಟಮ್‌ನಿಂದ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ ಎರಡು ಆರ್‌ಟಿಐ ಅರ್ಜಿಗಳನ್ನು ನೋಂದಾಯಿತ ಅಂಚೆ ಮೂಲಕ ಕಳಿಸಲಾಗಿತ್ತು. ಹೀಗೆ ಕಳಿಸಿದ ಆರ್‌ಟಿಐ ಅರ್ಜಿಯನ್ನು ಗ್ರಾಮ ಪಂಚಾಯ್ತಿಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ ತೆರೆದು ನೋಡಬೇಕು. ದಾಖಲೆ ಇದ್ದರೆ ನಿಗದಿತ ಸಮಯದಲ್ಲಿ ಕಳಿಸಬೇಕು, ಇಲ್ಲದೇ ಹೋದರೆ ದಾಖಲೆ ಇಲ್ಲ ಎಂದಾದರೂ ಹೇಳಬೇಕು. ಆದರೆ ವಿಚಿತ್ರ ನೋಡಿ, ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ ನಮ್ಮ ಆರ್‌ಟಿಐ ಅರ್ಜಿ ತಲುಪುತ್ತಿದ್ದಂತೆ ಮೊದಲು ಇಲ್ಲಿನ ಪಿಡಿಓ ಮಧುಸೂದನ್ ತಕ್ಷಣವೇ ನಿರೂಪ್‌ಕುಮಾರ್‌ನಿಗೆ ತಿಳಿಸುತ್ತಾನೆ! ಅರ್ಜಿಯಲ್ಲಿರುವ ಮೊಬೈಲ್ ನಂಬರ‍್ರನ್ನು ಕೂಡಾ ನಿರೂಪ್‌ಕುಮಾರ್‌ನಿಗೆ ಕೊಡುತ್ತಾನೆ!! ಅಂದರೆ ಅಕ್ರಮವೊಂದು ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದಾಗ ಹೇಗೆ ಪಿಡಿಓ ಅಲ್ಲಿನ ಮೆಂಬರ್ ಜೊತೆ ಕೈ ಜೋಡಿಸುತ್ತಾನೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಿದೆಯಾ?! ಇಷ್ಟೇ ಆಗಿದ್ದರೆ ಬಹುಶಃ ಈ ವರದಿಯನ್ನು ನಾವು ನಿಮ್ಮ ಮುಂದಿಡುತ್ತಿರಲಿಲ್ಲ. ಪಿಡಿಓ ಕೊಡುವ ನ್ಯೂಸ್ ಪೋಸ್ಟ್‌ಮಾರ್ಟಮ್ ನಂಬರ‍್ರು ತೆಗೆದುಕೊಂಡ ನಿರೂಪ್‌ಕುಮಾರ್ ನೇರವಾಗಿ ಕಾಲ್ ಮಾಡಿ, ಆರ್‌ಟಿಐ ಅರ್ಜಿ ಬಗ್ಗೆ ವಿಚಾರಿಸುತ್ತಾನೆ! ಇಷ್ಟಕ್ಕೂ ಈ ಅಧಿಕಾರವನ್ನು ಪಂಚಾಯ್ತಿ ಸದಸ್ಯ ನಿರೂಪ್ ಕುಮಾರ್‌ನಿಗೆ ಕೊಟ್ಟವರ‍್ಯಾರು?! ಪಂಚಾಯ್ತಿಗೆ ಬರುವ ಆರ್‌ಟಿಐ ಅರ್ಜಿಗಳನ್ನೇ ನಿರೂಪ್ ಕುಮಾರ್‌ನ ವಶಕ್ಕೆ ಪಿಡಿಓ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವವರು ಕೊಡುತ್ತಾರೆಂದರೆ, ಇನ್ನು ಪಂಚಾಯ್ತಿಗೆ ಸಂಬಂಧಿಸಿದ ಯಾವೆಲ್ಲ ದಾಖಲೆಗಳನ್ನು ಈ ನಿರೂಪ್‌ಕುಮಾರ್‌ನಿಗೆ ಕೊಡಬಹುದು? ಅದೆಷ್ಟು ಅಕ್ರಮಗಳು ಪಂಚಾಯ್ತಿಯಲ್ಲಿ ಸೃಷ್ಟಿಯಾಗುವಲ್ಲಿ ಈ ಹಿಂದಿನ ಮತ್ತು ಈಗಿನ ಪಿಡಿಓ ಸೇರಿದಂತೆ ಪಂಚಾಯ್ತಿ ಸಿಬ್ಬಂದಿಗಳು ಕೈ ಜೋಡಿಸಿರಬಹುದು ಎನ್ನುವುದನ್ನು ಯೋಚಿಸಿದರೇ ಇಲ್ಲಿ ಅಕ್ರಮ - ಅನ್ಯಾಯ ಹಾಗೂ ಭ್ರಷ್ಟಾಚಾರದ ಕೊಳೆತು ನಾರುವ ವಾಸನೆ ಮೂಗಿಗೆ ಬಡಿಯುತ್ತದೆ.
ಅಕ್ಟೋಬರ್ 25ನೇ ತಾರೀಖು ಬೆಳಿಗ್ಗೆ 11.50ಕ್ಕೆ ನ್ಯೂಸ್ ಪೋಸ್ಟ್‌ಮಾರ್ಟಮ್ ಸಂಪಾದಕರಿಗೆ ಕಾಲ್ ಮಾಡಿದ ನಿರೂಪ್ ಕುಮಾರ್, ’ನನ್ನ ಮೇಲೆ ಅರ್ಜಿ ಕೊಟ್ಟಿದ್ದೀರಿ?’ ಎಂದು ಪ್ರಶ್ನಿಸಿದವನು, ’ಅದೇನಿದೆ ಅದನ್ನು ಮಾತನಾಡೋಣ, ನಾನು ವಿಷಯವನ್ನು ನಿಮಗೆ ಕೂಲಂಕುಶವಾಗಿ ತಿಳಿಸುತ್ತೇನೆ’ ಎಂದೆಲ್ಲ ಹೇಳುತ್ತಾನೆ. ಸಂಪಾದಕರು ನಿಮಗೆ ನನ್ನ ನಂಬರ್ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಂತೆ ಪಿಡಿಓ ಎಂದು ಹೇಳುತ್ತಾನೆ. ನಿನ್ನ ದಾಖಲೆ ಸರಿ ಇದೆ, ನೀನು ಪ್ರಾಮಾಣಿಕ ಎಂದರೆ ಯಾವುದೇ ವ್ಯಕ್ತಿ ಕಾಲ್ ಮಾಡಿ ವಿಚಾರಿಸುವ ಅಗತ್ಯವೇನಿದೆ? ಇಷ್ಟಕ್ಕೂ ಆರ್‌ಟಿಐ ಅರ್ಜಿಯ ಬಗ್ಗೆ ಮಾತನಾಡುವುದು, ವಿಲೇವಾರಿ ಮಾಡುವುದು ಪಂಚಾಯ್ತಿ ಸದಸ್ಯನಾಗಿ ನಿರೂಪ್‌ಕುಮಾರ್‌ನ ಕೆಲಸವಲ್ಲ. ಅಂದಮೇಲೆ ಈತ ಪಂಚಾಯ್ತಿಯ ಈ ಕೆಲಸದಲ್ಲೇಕೆ ಹಸ್ತಕ್ಷೇಪ ಮಾಡಿದ? ಅದರ ಅಗತ್ಯವೇನಿತ್ತು? ಈ ಮೂಲಕ ಪಂಚಾಯ್ತಿ ಸದಸ್ಯನಾಗಿ ಸಾಂವಿಧಾನಿಕವಾಗಿ ಈತ ತನಗೆ ಸಿಕ್ಕಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಂತಲ್ಲವಾ? ಖಂಡಿತ ಈ ಮೂಲಕ ನಿರೂಪ್ ಕುಮಾರ್ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.
ಮೊದಲನೇಯದಾಗಿ ಈತನೇ ಹೇಳಿಕೊಂಡಂತೆ ಪಿಡಿಓ ಆರ್‌ಟಿಐ ಅರ್ಜಿ ಬಗ್ಗೆ ತಿಳಿಸಿ, ನ್ಯೂಸ್ ಪೋಸ್ಟ್‌ಮಾರ್ಟಮ್‌ನ ನಂಬರ್ ಕೊಟ್ಟಿದ್ದೇ ಹೌದಾದರೆ ಈ ಮೂಲಕ ಪಿಡಿಓ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಂತೆ. ಎರಡನೇಯದಾಗಿ, ಪಂಚಾಯ್ತಿ ಸದಸ್ಯನಾಗಿ ಅಧಿಕಾರದಲ್ಲಿರುವ ನಿರೂಪ್ ಕುಮಾರ್ ತಾನು ಪಂಚಾಯ್ತಿ ಸದಸ್ಯನಾಗಿದ್ದಕ್ಕೇ, ತನ್ನ ಬಗ್ಗೆ ಬಂದ ಆರ್‌ಟಿಐ ಅರ್ಜಿ ಬಗ್ಗೆ ತಿಳಿದುಕೊಂಡು ಕಾಲ್ ಮಾಡಿದ್ದಾನೆಂದರೆ ಈ ಮೂಲಕ ನಿರೂಪ್ ಕುಮಾರ್ ಕೂಡಾ ತನ್ನ ಪಂಚಾಯ್ತಿ ಸದಸ್ಯತ್ವದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಂತೆ. ಇಲ್ಲಿ ಇನ್ನೂ ಒಂದು ಮುಖ್ಯವಾದ ಸಂಗತಿ ಏನೆಂದರೆ, ನಿರೂಪ್ ಕುಮಾರ್ ಬಗ್ಗೆ ಅಥವಾ ಆತನ ರಿಯಲ್ ಎಸ್ಟೇಟ್‌ನಂತಹ ವ್ಯವಹಾರಗಳ ಬಗ್ಗೆ ಪಂಚಾಯ್ತಿಯಿಂದ ಯಾರೇ ಆರ್‌ಟಿಐ ಮೂಲಕ ಮಾಹಿತಿ ಕೇಳಿದರೆ, ಅವರಿಗೆಲ್ಲ ಈತ ಹೀಗೇ ಕರೆ ಮಾಡುತ್ತಾನಾ? ಕರೆ ಮಾಡಿ ಬೆದರಿಸುತ್ತಾನಾ? ಪತ್ರಿಕೆಯವರು ಮಾಹಿತಿ ಕೇಳಿದ್ದಾರೆ ಎಂದಾಗಲೇ ಹೀಗೆ ಕಾಲ್ ಮಾಡುವ ನಿರೂಪ್ ಕುಮಾರ್, ಇತರರು ತನ್ನ ಬಗ್ಗೆ ಅರ್ಜಿ ಹಾಕಿದರೆ ಸುಮ್ಮನಿರಲು ಸಾಧ್ಯವೇ ಇಲ್ಲ. ಒಂದೊಮ್ಮೆ ಹೀಗೆ ಅರ್ಜಿ ಹಾಕಿದವರೆಲ್ಲರನ್ನೂ ನಿರೂಪ್ ಕುಮಾರ್ ಬೆದರಿಸಿದ್ದೇ ಹೌದಾದರೆ ಅದು ಕ್ರಿಮಿನಲ್ ಅಪರಾಧವೂ ಆಗುತ್ತದೆ ಮತ್ತು ಈತನ ಪಂಚಾಯ್ತಿ ಸದಸ್ಯತ್ವಕ್ಕೂ ಸಂಚಕಾರ ಬರುತ್ತದೆ.
ಅಕ್ಟೋಬರ್ 25ನೇ ತಾರೀಖು ಬೆಳಿಗ್ಗೆಯೇ ನಿರೂಪ್ ಕುಮಾರ್‌ನ ಈ ಕಾಲ್ ಬಂದ ನಂತರ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯ ಸೆಕ್ರೆಟರಿ ಹಾಗೂ ಮಾಹಿತಿ ಹಕ್ಕು ಅರ್ಜಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿ ಮಧುಶ್ರೀ ಅವರಿಗೆ ಮಧ್ಯಾಹ್ನ 2.27ಕ್ಕೆ ಕಾಲ್ ಮಾಡಲಾಯಿತು. ದುರಂತವೆಂದರೆ, ಮಧ್ಯಾಹ್ನ ಊಟದ ಸಮಯವಾದರೂ ರಿಪ್ಪನ್‌ಪೇಟೆ ಪಂಚಾಯ್ತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ನಾವು ಕಳಿಸಿದ ಅರ್ಜಿಯನ್ನು ನೋಡೇ ಇಲ್ಲ. ಅವರಿಗೆ ತಲುಪುವ ಮೊದಲೇ ನಿರೂಪ್‌ಕುಮಾರ್‌ನಿಗೆ ನಮ್ಮ ಆರ್‌ಟಿಐ ಅರ್ಜಿ ತಲುಪುತ್ತದೆ ಎಂದರೆ ನಿರೂಪ್‌ಕುಮಾರ್ ಅದ್ಯಾವ ಮಟ್ಟದಲ್ಲಿ ಪಂಚಾಯ್ತಿಯಲ್ಲಿ ಎಲ್ಲರ ದಾಖಲೆಗಳನ್ನು ಚೆಕ್ ಮಾಡುತ್ತಿರಬಹುದು, ತನಗೆ ಬೇಕಾದಂತೆ ಬದಲಿಸುತ್ತಿರಬಹುದು ಯೋಚಿಸಿ.
ಪಿಎನ್‌ಆರ್ ಡೆವಲಪರ್ಸ್‌ನ ಲೇಔಟ್ ಜಾಗ |
ಸೆಕ್ರೆಟರಿ ಮಧುಶ್ರೀ ಅವರು ಹೀಗೆ ಹೇಳಿದ ನಂತರ ಪಿಡಿಓ ಮಧುಸೂದನನಿಗೆ ಮಧ್ಯಾಹ್ನ 2.31ಕ್ಕೆ ಕಾಲ್ ಮಾಡಲಾಯಿತು. ಪಿಡಿಓ ಮಧುಸೂದನ ಯಾವ ಡ್ರಾಮಾ ಆರ್ಟಿಸ್ಟುಗಳಿಗೂ ಕಡಿಮೆ ಇಲ್ಲದಂತೆ ಕಾಲ್‌ನಲ್ಲಿ ಮಾತನಾಡಲಾರಂಭಿಸಿದ... ನಿರೂಪ್ ಕುಮಾರ್ ನೋಡಿದರೆ ಇದೇ ಪಿಡಿಓ ನಿಮ್ಮ ನಂಬರ್ ಕೊಟ್ಟಿದ್ದು ಎಂದು ಹೇಳುತ್ತಾನೆ. ಆದರೆ ಈ ಮಧುಸೂದನ ನಾವು ಕಾಲ್ ಮಾಡಿದಾಗಲೇ ಅರ್ಜಿ ಇರುವ ಫೈಲ್‌ನ್ನು ತನ್ನ ಬಳಿ ಕೂಗಿ ತರಿಸಿಕೊಂಡಂತೆ ವೇಷ ಕಟ್ಟಿ, ಆಗಲೇ ಅರ್ಜಿ ಓದುತ್ತಿರುವಂತೆಯೂ ನಾಟಕವಾಡುತ್ತಾನೆ! ಅಂದರೆ ಈ ಮೂಲಕ ಪಿಡಿಓ ಕೂಡಾ ತಾನಿನ್ನೂ ನಾವು ಕಳಿಸಿದ ಆರ್‌ಟಿಐ ಅರ್ಜಿ ನೋಡಿಲ್ಲ ಎಂದೇ ಹೇಳುತ್ತಾನೆ. ಆ ಕಡೆ ಸೆಕ್ರೆಟರಿ ಮಧುಶ್ರೀ ಅವರಿಗೂ ನಾವು ಕಳಿಸಿದ ಅರ್ಜಿ ಸಿಕ್ಕಿಲ್ಲ, ಇಲ್ಲಿ ನೋಡಿದರೆ ಪಿಡಿಓ ಮಧುಸೂದನನಿಗೂ ನಾವು ಕಾಲ್ ಮಾಡಿದಾಗಲೇ ಅರ್ಜಿ ಸಿಕ್ಕಿದ್ದಾದರೆ ಇವರಿಬ್ಬರಿಗಿಂತ ಮೊದಲೇ ಮೆಂಬರ್ ನಿರೂಪ್‌ಕುಮಾರ್‌ನಿಗೆ ಅರ್ಜಿ ಸಿಕ್ಕಿದ್ದು ಹೇಗೆ? ಅರ್ಜಿಯನ್ನು ಪಡೆದುಕೊಂಡು ನಂಬರ್ ನೋಡಿ ನಿರೂಪ್‌ಕುಮಾರ್ ಎನ್ನುವ ಪಂಚಾಯ್ತಿ ಮೆಂಬರ್ ಕರೆ ಮಾಡಿ ಈ ಬಗ್ಗೆ ವಿವರ ಕೇಳುತ್ತಾನೆ, ಪರೋಕ್ಷವಾಗಿ ಬೆದರಿಸುತ್ತಾನೆ ಎಂದರೆ ರಿಪ್ಪನ್‌ಪೇಟೆಯ ಪಂಚಾಯ್ತಿಯ ಪಿಡಿಓ ಸೇರಿ ಸರ್ಕಾರಿ ಸಿಬ್ಬಂದಿಗಳೇನು ಗೆಣಗು ಕೆರೆಯುತ್ತಿದ್ದಾರಾ?! ಕೊನೆಗೆ ಹೀಗೆ ಮೂರನೇ ವ್ಯಕ್ತಿ ಕೈಗೆ ಆರ್‌ಟಿಐ ಅರ್ಜಿ ಕೊಟ್ಟಿರುವುದು ನಿಮ್ಮ ತಪ್ಪು, ನನ್ನ ನಂಬರ್ ಅವರಿಗೆ ಕೊಟ್ಟಿರುವುದು ಕೂಡಾ ತಪ್ಪು ಎಂದರೆ ಅದು ಸಾರ್ವಜನಿಕ ಮಾಹಿತಿ ಅಧಿಕಾರಿ ಜವಾಬ್ದಾರಿ ಎಂದು ನುಣುಚಿಕೊಳ್ಳಲು ಪ್ರಯತ್ನಿಸುವ ಮಧುಸೂದನ ಎನ್ನುವ ಅಕ್ರಮಗಳ ಜೋಡಿದಾರ ಈವರೆಗೂ ನಮ್ಮ ಅರ್ಜಿಯ ವಿವರ ನಿರೂಪ್ ಕುಮಾರ್‌ನಿಗೆ ಹೇಗೆ ಲೀಕ್ ಆಗಿದ್ದು ಎನ್ನುವ ಪ್ರಶ್ನೆಗೆ ಉತ್ತರಿಸಿಲ್ಲ. ಉತ್ತರಿಸುವುದೂ ಇಲ್ಲ ಎನ್ನುವುದು ತಿಳಿದಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿ ಮಧುಶ್ರೀಯೇ ಆದರೂ, ಇಡೀ ಪಂಚಾಯ್ತಿಯ ಜವಾಬ್ದಾರಿ ಇರುವುದು ಪಂಚಾಯ್ತಿ ಪಿಡಿಓಗೆ. ಅಂದಮೇಲೆ ಅಲ್ಲಿ ಏನೇ ಎಡವಟ್ಟುಗಳಾದರೂ, ಅದಕ್ಕೇ ಪಿಡಿಓನೇ ಜವಾಬ್ದಾರಿಯಾಗಿರುತ್ತಾನೆಯೇ ಹೊರತು ಬೇರೆ ಯಾರೂ ಅಲ್ಲ. ಇಷ್ಟೂ ಕಾಮನ್‌ಸೆನ್ಸ್ ಇಲ್ಲದಂತೆ ಮಾತನಾಡುತ್ತಾನೆ ಪಿಡಿಓ ಮಧುಸೂದನ...
ಈ ನಡುವೆ, ನ್ಯೂಸ್ ಪೋಸ್ಟ್‌ಮಾರ್ಟಮ್‌ನಿಂದ ಹೋದ ಆರ್‌ಟಿಐ ಅರ್ಜಿ ನೋಡಿಯೇ ಬೆವರಿ ಹೋದ ನಿರೂಪ್‌ಕುಮಾರ್ ಹಾಗೂ ಪಿಡಿಓ ಮಧುಸೂದನ ಪಂಚಾಯ್ತಿಯಲ್ಲಿ ನೈಟ್ ಡ್ಯೂಟಿ ಮಾಡಿರುವ ಸುದ್ದಿ ಇದೆ. ಮರಗೆಲಸದ ನೆಪ ಹೇಳಿಕೊಂಡು ಸಿಸಿಟಿವಿ ಕ್ಯಾಮರಾವನ್ನು ಬೇರೆಡೆ ತಿರುಗಿಸಿಟ್ಟು ನಿರೂಪ್‌ಕುಮಾರ್, ಪಿಡಿಓ ಜೊತೆಗೆ ಮತ್ತೊಂದಿಬ್ಬರು ಸೇರಿಕೊಂಡು ರಾತ್ರಿಯಿಡೀ ಪಂಚಾಯ್ತಿಯಲ್ಲಿ ದಾಖಲೆಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು ಎನ್ನುವ ಸುದ್ದಿ ಈಗ ಗುಟ್ಟಾಗಿ ಉಳಿದಿಲ್ಲ. ರಿಪ್ಪನ್‌ಪೇಟೆಯ ಸ್ಥಳೀಯ ಪತ್ರಕರ್ತರೊಬ್ಬರು ಈ ನೈಟ್ ಡ್ಯೂಟಿ ಬಗ್ಗೆ ಫೇಸ್‌ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ವೈರಲ್ ಆಗಿದ್ದು ಮಾತ್ರವಲ್ಲ, ಪಂಚಾಯ್ತಿಯಲ್ಲಿ ದಾಖಲೆಗಳನ್ನು ತಿದ್ದುವ ಕೆಲಸ ನಡೆಯುತ್ತಿರುವುದು ಇದರಿಂದ ದೃಢಪಟ್ಟಿದೆ. ಈ ಮಧ್ಯೆ ಶಾಸಕ ಬೇಳೂರು ಗೋಪಾಲಕೃಷ್ಣರ ಹೊಸನಗರ ಭಾಗದ ಆಪ್ತಕಾರ್ಯದರ್ಶಿ ಸಣ್ಣಕ್ಕಿ ಮಂಜ ಅವರಿಗೂ ಕೂಡಾ ಈ ಬಗ್ಗೆ ದೂರುಗಳು ಹೋಗಿದ್ದು, ಈವರೆಗೆ ಅವರು ಈ ಬಗ್ಗೆ ಕ್ರಮ ಕೈಗೊಂಡ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಂದರೆ ರಿಪ್ಪನ್‌ಪೇಟೆ ಪಂಚಾಯ್ತಿಯಲ್ಲಿ ನ್ಯೂಸ್ ಪೋಸ್ಟ್‌ಮಾರ್ಟಮ್ ಕೇಳಿರುವ ಮಾಹಿತಿಗೆ ಕಳಿಸಬೇಕಾದ ದಾಖಲೆಗಳನ್ನು ತಿದ್ದುವ ಕೆಲಸ ನಡೆಯುತ್ತಿದೆಯೋ, ಇದರೊಂದಿಗೆ ಇನ್ನ್ಯಾವ ದಾಖಲೆಗಳನ್ನು ತಿದ್ದಿ ಇನ್ನ್ಯಾರಿಗೆ ಉಂಡೆ ನಾಮ ತಿಕ್ಕಲು ತಯಾರಿ ಮಾಡಿದ್ದಾರೋ ದೇವರೇ ಬಲ್ಲ.
![]() |
ಪಿಎನ್‌ಆರ್ ಡೆವಲಪರ್ಸ್‌ನ ಲೇಔಟ್ ಪರಿಶೀಲನೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಓ ಮತ್ತು ರಿಪ್ಪನ್‌ಪೇಟೆ ಗ್ರಾ.ಪಂ ಪಿಡಿಓ |
ಇಂತಿಪ್ಪ ನಿರೂಪ್‌ಕುಮಾರ್, ಈಗ ಪೇಟೆಯೆಲ್ಲೆಡೆ ನಾನು ನ್ಯೂಸ್ ಪೋಸ್ಟ್‌ಮಾರ್ಟಮ್ ಎಡಿಟರ್ ಜೊತೆ ಮಾತನಾಡಿ, ‘ಸೆಟಲ್ ಮಾಡಿದ್ದೇನೆ. ಏನೂ ತೊಂದರೆಯಿಲ್ಲ’ ಎಂದು ಹೇಳಿಕೊಂಡು ಓಡಾಡುತ್ತಿದ್ದಾನಂತೆ. ಆದರೆ ನ್ಯೂಸ್ ಪೋಸ್ಟ್‌ಮಾರ್ಟಮ್ ಈವರೆಗೂ ನಿರೂಪ್ ಸೇರಿದಂತೆ ಯಾರೊಂದಿಗೂ ಸೆಟಲ್‌ಮೆಂಟ್ ಇತ್ಯಾದಿಗಳನ್ನು ಮಾಡಿಕೊಂಡಿಲ್ಲ, ಮುಂದೆ ಮಾಡಿಕೊಳ್ಳುವುದೂ ಇಲ್ಲ ಎನ್ನುವುದನ್ನು ಈ ಮೂಲಕ ಎಲ್ಲರ ಗಮನಕ್ಕೆ ತರುತ್ತಿದೆ. ಯಾವುದೇ ಸುದ್ದಿ ಮಾಡುವ ಮೊದಲು ಸುದ್ದಿಯ ಎರಡೂ ಕಡೆಯವರೊಂದಿಗೆ ಮಾತನಾಡಿ ವಾಸ್ತವ ಏನಿದೆಯೋ ಅದನ್ನು ಜನರ ಮುಂದಿಡುವ ಪ್ರಯತ್ನವನ್ನು ನ್ಯೂಸ್ ಪೋಸ್ಟ್‌ಮಾರ್ಟಮ್ ಸದಾ ಮಾಡುತ್ತದೆ. ಬಹುಶಃ ನಿರೂಪ್ ಕುಮಾರ್ ಕೂಡಾ ನಮ್ಮೆದುರು ಬಂದು ಮಾತನಾಡಿ ತನ್ನ ವ್ಯವಹಾರ ಸರಿ ಇದೆ ಎಂದು ದಾಖಲೆ ನೀಡಿದ್ದರೆ ಆಗ ಅದನ್ನೂ ನ್ಯೂಸ್ ಪೋಸ್ಟ್‌ಮಾರ್ಟಮ್ ಒಪ್ಪಿಕೊಳ್ಳುತ್ತಿತ್ತು. ಆದರೆ ಹಾಗೆ ಮಾಡದೆ ಸೆಟಲ್‌ಮೆಂಟ್ ಎನ್ನುತ್ತಾ ಓಡಾಡುತ್ತಿರುವುದು, ಪಂಚಾಯ್ತಿಯಲ್ಲಿ ರಾತ್ರಿಯಿಡಿ ದಾಖಲೆ ತಿದ್ದುವ ಕೆಲಸ ನಡೆಸುತ್ತಿರುವುದು ಇವನು ಅಕ್ರಮಗಳ ಕುಮಾರ ಎನ್ನುವುದನ್ನು ಸಾಬೀತು ಪಡಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಿಪ್ಪನ್‌ಪೇಟೆ ನಿರೂಪ್ ಕುಮಾರ್ ಮಾಲೀಕತ್ವದ ಪಿಎನ್‌ಆರ್ ಡೆವಲಪರ್ಸ್‌ನ ಲೇಔಟ್ ಯಾವ ರೀತಿ ಅಕ್ರಮ ಹಾಗೂ ಅಲ್ಲಿ ಸೈಟು ಖರೀದಿಸಲು ದುಡ್ಡು ಕೊಟ್ಟವರ ಕೈಗೆ ಹೇಗೆ ಚೊಂಬು ಸಿಗುತ್ತದೆ ಮತ್ತು ನಿರೂಪ್ ಅಂಡ್ ಗ್ಯಾಂಗ್ ಯಾವ ರೀತಿ ಎಲ್ಲರಿಗೂ ನಾಮ ಹಾಕಲು ಸಜ್ಜಾಗಿದೆ, ಇದರಲ್ಲಿ ಶಾಮೀಲಾಗಿರುವ ಸರ್ಕಾರಿ ಶಿಕ್ಷಕರ ಭವಿಷ್ಯವೇನು ಎನ್ನುವುದರ ವಿವರವಾದ ವರದಿಗಳನ್ನು ಪ್ರಸಾರ ಮಾಡಲಿದೆ. ಅನ್ಯಾಯ - ಅಕ್ರಮ - ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೀಗೇ ಮುಂದುವರಿಯಲಿದೆ.
ಕಾಮೆಂಟ್‌ಗಳಿಲ್ಲ