Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ನೂತನ ರಥ ನಿರ್ಮಾಣಕ್ಕೆ ಪರಿಕರಗಳ ಆಗಮನ: ಅದ್ಧೂರಿ ಸ್ವಾಗತ

ರಿಪ್ಪನ್‌‌ಪೇಟೆ: ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣಕ್ಕಾಗಿ ಶುಕ್ರವಾರ ಸಂಜೆ ಪಟ್ಟಣದ ವಿನಾಯಕ ವೃತ್ತಕ್ಕೆ ಮರದ ಪರಿಕರಗಳನ್ನು ಹೊತ್ತ ಲಾರಿಯು ಆಗಮಿಸಿತು. ಈ ಸಂದರ್ಭದಲ್ಲಿ ರಥ ನಿರ್ಮಾಣದ ಪರಿಕರಗಳನ್ನು ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ದೇವಸ್ಥಾನದ ಮುಖ್ಯದ್ವಾರದವರೆಗೂ ಚಂಡೆ ವಾದ್ಯಗಳನ್ನೊಳಗೊಂಡ ರಾಜಬೀದಿ ಉತ್ಸವದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.

ರಿಪ್ಪನ್‌‌ಪೇಟೆಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಪುನಃ ಪ್ರತಿಷ್ಠೆಯನ್ನು ಭಕ್ತರ ಸಹಕಾರದೊಂದಿಗೆ ನೆರವೇರಿಸಲಾಗಿದ್ದು, ಶ್ರೀ ಸಿದ್ಧಿವಿನಾಯಕ ದೇವರಲ್ಲಿ ಜಾತ್ರಾ ಮಹೋತ್ಸವ ನಡೆಸುವುದಾಗಿ ಮಾಡಿದ್ದ ಸಂಕಲ್ಪವನ್ನು ಇದೀಗ ನೆರವೇರಿಸುವ ಕಾಲ ಕೂಡಿಬಂದಿದೆ. ಬ್ರಹ್ಮರಥ ಎನ್ನುವುದು ಜಾತ್ರೆಯ ಬಹುಮುಖ್ಯ ಭಾಗವಾಗಿದೆ. ಬ್ರಹ್ಮರಥವೆಂದರೆ ಭಕ್ತರ ಸಮೀಪಕ್ಕೆ ಬರುವಂತಹ ದೇವಸ್ಥಾನ. ದೇವಸ್ಥಾನಕ್ಕೆ ಇರುವ ಮಹತ್ವ ಈ ರಥಕ್ಕೂ ಇರುತ್ತದೆ. ಇಂತಹ ಬ್ರಹ್ಮರಥ ನಿರ್ಮಾಣದ ಕಾರ್ಯಕ್ಕೆ ಮೊದಲ ಹೆಜ್ಜೆ ಇಡಲಾಗಿದ್ದು, ನಾಡಿನ ಪ್ರಸಿದ್ಧ ಶಿಲ್ಪಕರ್ಮಿಗಳು ರಥ ನಿರ್ಮಾಣವನ್ನು ಮಾಡುತ್ತಾರೆ. ಈ ಬ್ರಹ್ಮರಥದ ನಿರ್ಮಾಣಕ್ಕೆ ಸುಮಾರು 31 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ರಥದ ವೈಶಿಷ್ಟ್ಯ: ಉತ್ತಮ ಸಾಗುವಾನಿ ಮರ ಬಳಸಿ 31 ಅಡಿ ಎತ್ತರದ ರಥವನ್ನು ನಿರ್ಮಿಸಲಾಗುವುದು. ಇದು ಅಷ್ಟ ಭುಜಾಕೃತಿಯಲ್ಲಿದ್ದು, ಬುಡದಲ್ಲಿ ಅಷ್ಟ ದಿಕ್ಪಾಲಕರ ಮೂರ್ತಿ, ಅಷ್ಟ ಗಣಪತಿ ಚಿತ್ರ ಮೂಡಿ ಬರುತ್ತದೆ. ಮೇಲ್ಭಾಗದಲ್ಲಿ ಸುಂದರ ಕೆತ್ತನೆಗಳನ್ನು ಹೊಂದಿರುತ್ತದೆ. ಪೀಠದ ಮೇಲೆ ಎಂಟು ಕಂಬಗಳು ನಂತರ ಗೋಪುರ - ಪತಾಕೆಗಳು ಗೋಪುರದ ತುದಿಯಲ್ಲಿ ಕಳಸವನ್ನು ಹೊಂದಿರುತ್ತದೆ.

ಈ ಸಂದರ್ಭದಲ್ಲಿ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರ್ ಶೆಟ್ಟಿ, ಎಂ.ಡಿ ಇಂದಿರಮ್ಮ, ಗಣೇಶ್ ಎನ್. ಕಾಮತ್, ವೈ. ಜೆ ಕೃಷ್ಣ, ಮಂಜಪ್ಪ, ಕಗ್ಗಲಿ ಲಿಂಗಪ್ಪ, ಹೆಚ್‌. ಆರ್. ದೇವದಾಸ್, ಡಿ. ಇ. ಮಧುಸೂದನ್, ಸುಧೀಂದ್ರ ಹೆಬ್ಬಾರ್, ಮೋಹನ್ ಇನ್ನಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ