SPECIAL REPORT - ಸಮಸ್ಯೆಗಳಿಂದ ಕೋಮಾಗೆ ಜಾರುವ ಮೊದಲು ಹೊಸನಗರ ಸರ್ಕಾರಿ ಆಸ್ಪತ್ರೆಗೇ ಆಗಬೇಕಿದೆ ಎಮರ್ಜೆನ್ಸಿ ಆಪರೇಶನ್!!
ಹೊಸನಗರ : ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡ ನಂತರ ಆ ಕಡೆಯೂ ಇಲ್ಲದ, ಈ ಕಡೆಯೂ ಸಲ್ಲದ ಸ್ಥಿತಿಯಲ್ಲಿರುವ ಹೊಸನಗರ ತಾಲ್ಲೂಕು ಕೇಂದ್ರದ ಒಂದೊಂದು ಸರ್ಕಾರಿ ಕಚೇರಿಗಳದ್ದು ಒಂದೊಂದು ಅವಸ್ಥೆ. ಈಗ ‘ನ್ಯೂಸ್ ಪೋಸ್ಟ್‌ಮಾರ್ಟಮ್’, ಸ್ಥಳೀಯವಾಗಿ ಹಲವರ ದೂರು ಕೇಳಿಸಿಕೊಂಡ ನಂತರ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಸಮಸ್ಯೆಗಳೇನು ಎನ್ನುವುದನ್ನು ಈ ವರದಿ ಮೂಲಕ ನಿಮ್ಮ ಮುಂದಿಡುತ್ತಿದೆ.
ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹೆಸರಿಗಷ್ಟೇ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಎಂದು ಕರೆಸಿಕೊಳ್ಳುತ್ತಿದೆಯಾ? ನೂರು ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಇರಬೇಕಾದ ಸೌಲಭ್ಯಗಳು ಇಲ್ಲಿವೆಯಾ? ಸಿಬ್ಬಂದಿಗಳ ಸಂಖ್ಯೆ ಅದಕ್ಕೆ ಅನುಗುಣವಾಗಿದೆಯಾ? ಎನ್ನುವ ಪ್ರಶ್ನೆಗಳನ್ನೆಲ್ಲ ಎದುರಿಟ್ಟುಕೊಂಡು ಹೊರಟರೆ ನಿಮಗೆ ಈ ಆಸ್ಪತ್ರೆಯಲ್ಲಿ ಸಮಸ್ಯೆಗಳೇ ಹೆಚ್ಚಾಗಿ ಎದುರಾಗುತ್ತವೆ. ಮೊದಲನೇಯದಾಗಿ, ಈ ಆಸ್ಪತ್ರೆಗೆ ಇಲಾಖೆಯಿಂದ ಮಂಜೂರಾದ ವೈದ್ಯ ಸಿಬ್ಬಂದಿಗಳಲ್ಲಿ ಅರ್ಧಕ್ಕಿಂತ ಕಡಿಮೆ ಜನ ಕರ್ತವ್ಯ ನಿರ್ವಹಿಸುತ್ತಿರುವುದರಿಂದ, ಸದಾ ಇಲ್ಲಿಗೆ ಬರುವ ರೋಗಿಗಳು ಪರದಾಡುವುದು ನಿತ್ಯದ ಚಿತ್ರಣವಾಗಿದೆ. ಶಸ್ತ್ರಚಿಕಿತ್ಸಕರು, ನೇತ್ರ ತಜ್ಞರು, ಕೀಲು ಮೂಳೆ ತಜ್ಞರು, ಮಕ್ಕಳ ತಜ್ಞರು, ದಂತ ವೈದ್ಯರು, ತುರ್ತು ಅಪಘಾತ ಚಿಕಿತ್ಸೆ ವೈದ್ಯರುಗಳು ಮಾತ್ರ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಿವಿ ಮೂಗು ಗಂಟಲು ತಜ್ಞರು, ಅರಿವಳಿಕೆ ತಜ್ಞರು, ಫಿಜೀಷಿಯನ್, ಸ್ತ್ರೀರೋಗ ತಜ್ಞರು ಹಾಗೂ ತುರ್ತು ಅಪಘಾತ ಚಿಕಿತ್ಸೆ ವಿಭಾಗದ ಇಬ್ಬರು ವೈದ್ಯರುಗಳ ಹುದ್ದೆ ಖಾಲಿಯಾಗಿ ಕೆಲವು ತಿಂಗಳುಗಳೇ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳನ್ನಿಟ್ಟುಕೊಂಡು ಇಲ್ಲಿಗೆ ಬರುವ ಸಾರ್ವಜನಿಕರ ಒದ್ದಾಟ ಹೇಳತೀರದು. ಇಲ್ಲಿ ಈ ಸೌಲಭ್ಯವಿದೆ ಎಂದು ಯಾರದ್ದೋ ಮಾತು ಕೇಳಿಕೊಂಡು ಬರುವ ಹೆಚ್ಚಿನವರು ಇಲ್ಲಿ ಆ ಚಿಕಿತ್ಸೆ ಸಿಗದೇ ಬೇರೆಡೆ ಹೋಗುವುದು, ಅದಕ್ಕಾಗಿ ಪ್ರಯಾಸ ಪಡುವುದು ಇಲ್ಲಿ ನಿತ್ಯ ಕಾಣಸಿಗುವ ನೋವಿನ ಚಿತ್ರಗಳು!
ಇಬ್ಬರು ಶುಶ್ರೂಷಣಾ ಅಧಿಕಾರಿಗಳು ಸೇರಿದಂತೆ ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್ ಕಂ ಟೈಪಿಸ್ಟ್, ಗ್ರೇಡ್ 2 ನರ್ಸಿಂಗ್ ಅಧೀಕ್ಷಕರು, ನೇತ್ರಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಫಾರ್ಮಾಸಿಸ್ಟ್, ಕಿರಿಯ ಪ್ರಯೋಗಶಾಲಾ ಟೆಕ್ನಾಲಜಿಸ್ಟ್ ಸೇರಿದಂತೆ ಇತರೆ 33 ಗ್ರೂಪ್ ಡಿ ನೌಕರರ ಹುದ್ದೆಯೂ ಖಾಲಿಯೇ ಇರುವುದರಿಂದ, ಆಸ್ಪತ್ರೆಯ ಆಡಳಿತ ವಿಭಾಗದ ಕೆಲಸಗಳು ಕೂಡಾ ಕುಂಟುತ್ತಾ ಸಾಗುತ್ತಿವೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳು ಅವುಗಳನ್ನು ಉಪಯೋಗಿಸುವ ತಂತ್ರಜ್ಞರಿಲ್ಲದೆ ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ. ಇಡೀ ಆಸ್ಪತ್ರೆ ಸಂಕೀರ್ಣಕ್ಕೆ ಲಭ್ಯವಾಗುವ ಸೋಲಾರ್ ವ್ಯವಸ್ಥೆಯನ್ನೇನೋ ಮಾಡಿ ಕೆಲವು ವರ್ಷವಾಗಿದೆ. ಆದರೆ ಅದರ ನಿರ್ವಹಣೆ ಇಲ್ಲದೇ, ಸೋಲಾರ ವ್ಯವಸ್ಥೆ ಇದ್ದೂ ಉಪಯೋಗವಿಲ್ಲದಂತಾಗಿದೆ. ಇದರಿಂದಾಗಿ ಪ್ರತಿ ತಿಂಗಳು ಮೆಸ್ಕಾಂಗೆ 50 ಸಾವಿರಕ್ಕೂ ಹೆಚ್ಚು ರೂಪಾಯಿಗಳ ಬಿಲ್ಲನ್ನು ಕಟ್ಟುವ ದುಃಸ್ಥಿತಿ ಹೊಸನಗರ ಸರ್ಕಾರಿ ಆಸ್ಪತ್ರೆಯದ್ದಾದರೆ, ಇನ್ನೊಂದು ಕಡೆ ಇಲ್ಲಿ ಕರೆಂಟ್ ಕೈಕೊಡುವುದು ಸಾಮಾನ್ಯವಾದ್ದರಿಂದ ಜನರೇಟರ್‌ಗೂ ಹಣ ವ್ಯಯಿಸಬೇಕಾಗಿದೆ!
ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಸಹ ಕೆಲ ಸಮಯಗಳಿಂದ ಮುಚ್ಚಿದ್ದು, ಈ ಬಗ್ಗೆ ಈಗಾಗಲೇ ಹಲವು ಮಾಧ್ಯಮಗಳು ವರದಿ ಮಾಡಿದ್ದರೂ ಈವರೆಗೂ ಜನೌಷಧಿ ಮಳಿಗೆ ತೆರೆದೇ ಇಲ್ಲ. ಇದರಿಂದ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿರುವ ಈ ಭಾಗದ ಜನರು ಇಲ್ಲಿನ ಆಸ್ಪತ್ರೆಗೆ ಬಂದು ಉಚಿತವಾಗಿ ಚಿಕಿತ್ಸೆ ಪಡೆದರೂ, ಹೆಚ್ಚಿನ ಹಣ ನೀಡಿ ಖಾಸಗಿ ಮೆಡಿಕಲ್ಲುಗಳಲ್ಲಿ ಔಷಧಿಗಳನ್ನು ಅನಿವಾರ್ಯವಾಗಿ ಖರೀದಿಸುವಂತಾಗಿದೆ. ಸಿದ್ಧರಾಮಯ್ಯನ ರಾಜ್ಯ ಸರ್ಕಾರ ಸ್ಥಿತಿವಂತರಿಗೆ ಪಂಚ ಗ್ಯಾರಂಟಿ ಹೆಸರಿನಲ್ಲಿ ಸವಲತ್ತುಗಳನ್ನು ಉಚಿತವಾಗಿ ನೀಡುವ ಬದಲು, ಔಷಧಿಗಳನ್ನು ಖರೀದಿಸಲು ಆಗದ ಜನರಿಗೆ ಉಚಿತವಾಗಿ ಔಷಧಗಳನ್ನು ನೀಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದು ಆಸ್ಪತ್ರೆಗೆ ಬರುವ ಸ್ಥಳೀಯರು ಹೇಳುತ್ತಾರೆ.
ಪ್ರತಿ ದಿನ 400 ರಿಂದ 500 ಹೊರರೋಗಿಗಳು ಈ ಆಸ್ಪತ್ರೆಗೆ ಬರುವುದು ಸಾಮಾನ್ಯ. ಆದರೆ ಇಲ್ಲಿಗೆ ಬಂದ ಬಡ ಕೃಷಿ ಕೂಲಿ ಕಾರ್ಮಿಕ ರೋಗಿಗಳು ಹಾಗೂ ಅವರ ಕುಟುಂಬದವರು ವೈದ್ಯರುಗಳ ಹಾಗೂ ಪ್ರಧಾನಮಂತ್ರಿ ಜನೌಷಧಿಗಳ ಕೊರತೆಯಿಂದ, ಗೊಣಗಿಕೊಂಡೇ ಬೇರೆ ದಾರಿ ಕಾಣದೆ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಮಣಿಪಾಲಕ್ಕೆ ಚಿಕಿತ್ಸೆಯನ್ನು ಅರಸಿ ಹೋಗಬೇಕಾಗಿದೆ. ಕಳೆದ ತಿಂಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ರೋಗಿಗಳು ಓಪಿಡಿಯಲ್ಲಿ ದಾಖಲಾಗಿದ್ದು, ಆಸ್ಪತ್ರೆಗೆ ತುರ್ತಾಗಿ ಡಯಾಲಿಸಿಸ್ ಸೆಂಟರ್ ಹಾಗೂ ಸ್ಕ್ಯಾನಿಂಗ್ ಉಪಕರಣಗಳು ಅಗತ್ಯವಾಗಿ ಬೇಕಾಗಿದೆ.
ಹೊಸನಗರದ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ ಬಂದರೆ ನಿಮಗೆ ಇಲ್ಲಿನ ಸಮಸ್ಯೆಗಳ ಅರಿವಾಗುತ್ತದೆ. ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲಾಗದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳೇ ಇಲ್ಲಿಲ್ಲದಂತಾಗಿದೆ. ಒಂದೊಮ್ಮೆ ಹೊಸನಗರದ ಸರ್ಕಾರಿ ಆಸ್ಪತ್ರೆ ನೂರು ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತಹ ಸೌಲಭ್ಯ ಹಾಗೂ ಸಿಬ್ಬಂದಿಗಳನ್ನು ಪಡೆದುಕೊಂಡಿದ್ದೇ ಹೌದಾದರೆ ತಾಲ್ಲೂಕಿನ ಜನರು ಆರೋಗ್ಯದ ವಿಷಯದಲ್ಲಿ ನೆಮ್ಮದಿಯಿಂದಿರಬಹುದು. ಈ ನಿಟ್ಟಿನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತುರ್ತಾಗಿ ಯೋಚಿಸಿ, ಹೊಸನಗರ ಸರ್ಕಾರಿ ಆಸ್ಪತ್ರೆ ಈಗಿರುವ ಸಮಸ್ಯೆಗಳಿಂದ ಕೋಮಾಗೆ ಜಾರುವ ಮೊದಲು ಸಕ್ಸಸ್‌ಫುಲ್ ಆಪರೇಶನ್ ನಡೆಸಬೇಕಿದೆ.
ಕಾಮೆಂಟ್‌ಗಳಿಲ್ಲ