ಹೊಸನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಜಾಗೃತಿಗಾಗಿ ರಸ್ತೆ ಸುರಕ್ಷತಾ ಸಪ್ತಾಹ - ದೇಶದ ಪ್ರತಿಯೊಬ್ಬ ನಾಗರೀಕನಿಗೆ ಕಾನೂನಿನ ಅರಿವು ಅತಿ ಮುಖ್ಯ: ನ್ಯಾ. ಫಾರೂಖಾ ಝರೆ
ಹೊಸನಗರ : ದೇಶದ ಪ್ರತಿಯೊಬ್ಬ ನಾಗರೀಕನಿಗೆ ಕಾನೂನಿನ ಅರಿವಿರಬೇಕು. ತಿಳಿಯದೆ ಮಾಡಿದ ತಪ್ಪಿಗೂ ಶಿಕ್ಷೆ, ದಂಢ ವಿಧಿಸುವ ಅವಕಾಶ ಕಾನೂನಿನಲ್ಲಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ವ್ಯವಹಾರಗಳ ನ್ಯಾಯಾಧೀಶ ಫಾರೂಖಾ ಝರೆ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕರ ಜಾಗೃತಿಗಾಗಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದು ಮುಖ್ಯ ಕರ್ತವ್ಯವಾಗಿದೆ. ಇದು ಸರ್ಕಾರಿ ನೌಕರರಿಗೂ ಅನ್ವಯವಾಗಿದ್ದು, ಇದರಿಂದ ಸಂಭವನೀಯ ಅವಘಡ ತಪ್ಪಿಸಬಹುದು. ಬೈಕ್ ಸವಾರರು ಪ್ರಮಾಣೀಕೃತ ಹೆಲ್ಮೆಟ್ ಧರಿಸಿ ಚಾಲನೆಗೆ ಮುಂದಾಗಬೇಕು. ಅಲ್ಲದೆ, ಪ್ರತಿಯೊಬ್ಬ ವಾಹನದ ಮಾಲೀಕರು ನಿಯಮಿತವಾಗಿ ವಾಹನ ವಿಮಾ, ಹೊಗೆ ಉಗುಳು ಪರಿಶೀಲನಾ ದೃಢೀಕೃತ ಪತ್ರ, ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯ. ಇದರಿಂದ ಪೊಲೀಸ್ ತಪಾಸಣೆ ವೇಳೆ ಕೇಸ್, ದಂಡ, ಶಿಕ್ಷೆಯಿಂದ ಮುಕ್ತವಾಗಲು ಸಾಧ್ಯವೆಂದು ವಿವರಿಸಿದರು. ಬೈಕ್ ಸವಾರರು ತಮ್ಮ ಹಾಗೂ ಕುಟುಂಬದ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಕೋರಿದರು.
ಸಿಪಿಐ ಗುರಣ್ಣ ಎಸ್. ಹೆಬ್ಬಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ವಾಹನ ದಟ್ಟಣೆ ಹೆಚ್ಚುತ್ತಿದೆ. ಜನರಿಗಿರುವ ವಿವಿಧ ಆಧುನಿಕ ಯಂತ್ರೋಪಕರಣಗಳ ಮೇಲಿನ ವ್ಯಾಮೋಹವೇ ಇದಕ್ಕೆ ಕಾರಣ. ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವ ಮೂಲಕ ಕಾನೂನನ್ನು ಗೌರವಿಸಬೇಕು. ಸ್ಥಳೀಯ ಹಲವು ದಾನಿಗಳು ಈ ಕುರಿತು ಜಾಗೃತಿ ಮೂಡಿಸಲು ಸೈನ್ ಬೋರ್ಡ್‌ಗಳನ್ನು ದೇಣಿಗೆ ಕೊಟ್ಟು ಸಹಕಾರ ನೀಡಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ವ್ಯವಹಾರಗಳ ನ್ಯಾಯಾಧೀಶ ಮಾರುತಿ ಸಿಂಧೆ ಜನಜಾಗೃತಿ ಪೊಲೀಸ್ ಬೈಕ್ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.
ಕಾರ್ಯಕ್ರಮ ದಾನಿಗಳಾದ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಹೊಟೇಲ್ ಉದ್ಯಮಿ ಶೀತಲ್ ಶ್ರೀನಿವಾಸ್ ರಾವ್, ಆಟೋ ಸಂಘದ ಪದಾಧಿಕಾರಿಗಳು, ವಾಹನ ಚಾಲಕರು, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮುಖ್ಯ ಪೇದೆ ವೆಂಕಟೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ