Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಾಗರಕೊಡಿಗೆಯಲ್ಲಿ ಹೊಸನಗರ ತಾಲ್ಲೂಕು ಕಸಾಪದಿಂದ ಯಶಸ್ವಿಯಾಗಿ ನಡೆಯಿತು ಮನೆ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಮೊದಲ ಹೆಜ್ಜೆ

ಹೊಸನಗರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಗಣೇಶಮೂರ್ತಿ ನಾಗರಕೊಡಿಗೆಯವರು ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಕಾರ್ಯಕ್ರಮ ಮನೆ - ಮನೆಯ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಮೊದಲ ಹೆಜ್ಜೆ 2024ರ ಕೊನೆಯ ದಿನ ನಾಗರಕೊಡಿಗೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಣೇಶ ಮೂರ್ತಿ ನಾಗರಕೊಡಿಗೆ ಮಾತನಾಡಿ, ಸಾಹಿತ್ಯದ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನ ಒಂದುಗೂಡಲು ಇದೊಂದು ಸೇತುವೆಯಾಗಬೇಕು. ಇಂದು ಸಾಹಿತ್ಯ-ಸಾಹಿತಿಗಳ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮೂಡಿದೆ. ಇದರಿಂದಾಗಿ ಕಥೆ, ಕಾದಂಬರಿಗಳ ಮೂಲಕ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ನಾವು ಎಡವುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ ಮುಂದಿನ ತಲೆಮಾರಿನವರಿಗೆ ಈ ಮೂಲಕ ನಾವು ಬಹುದೊಡ್ಡ ದ್ರೋಹವನ್ನು ಎಸಗುತ್ತೇವೆ ಎಂದರು.

ಮನುಷ್ಯನ ಮನಸ್ಸು ಮುದಗೊಳ್ಳಬೇಕಾದರೆ, ಪ್ರವಾಸ ಮತ್ತು ಅಧ್ಯಯನ, ಚರ್ಚೆ ಇವುಗಳ ಅವಶ್ಯಕತೆ ಬಹಳ ಇದೆ. ನಾವು ಮುಂದಿನ ಪೀಳಿಗೆಗೆ ಈಗಿನ ಸಂಸ್ಕೃತಿಯನ್ನೇ ಬಿಟ್ಟು ಹೋದರೆ, ಇನ್ನು ೫೦ ವರ್ಷಗಳೊಳಗೆ ನಮ್ಮ ದೇಶವು ಮತ್ತೆ ಗುಲಾಮಗಿರಿಯತ್ತ ವಾಲುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಸಾಹಿತ್ಯವು ಈ ಎಲ್ಲ ಸಮಸ್ಯೆಗಳಿಗೆ ಔಷಧಿಯಾಗಬಲ್ಲದು. ಈ ಹಿನ್ನೆಲೆಯಲ್ಲಿ ಮನೆ ಮನೆ ಅಂಗಳದಲ್ಲಿ ಸಾಹಿತ್ಯದಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

CLICK ಮಾಡಿ - ಮುಂಬಾರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎನ್. ಕುಮಾರ್ ಅವಿರೋಧ ಆಯ್ಕೆ

ಹೊಸನಗರ ಕಸಾಪ ನೂತನ ಕಾರ್ಯದರ್ಶಿ ಕುಬೇಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯವನ್ನು ಮನೆಮನೆಗೆ ಕೊಂಡೊಯ್ಯುವ ಮತ್ತು ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಆಸಕ್ತಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದರು.

ರಮಾಕಾಂತಿ ದಿವಾಕರ್ ಮಾತನಾಡಿ, ಸಾಹಿತ್ಯವು ಮನುಷ್ಯನ ಬುದ್ಧಿ ವಿಕಾಸಕ್ಕೆ ಹೇಗೆ ಪೂರಕ ಎನ್ನುವುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಡಿ.ಎಸ್. ರಾಘವೇಂದ್ರ ಜೋಯಿಸರ ನಿವೃತ್ತಿಯ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಡಾಕ್ಟರ್ ಶರಧಿ ಪ್ರಾರ್ಥಿಸಿ, ರಾಘವೇಂದ್ರ ಜೋಯ್ಸ್ ಸ್ವಾಗತಿಸಿದರು. ಗ್ರಾಮದ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಹೊಸ ವರ್ಷದಾಗಮನದ ರಾತ್ರಿ ಊಟದ ವ್ಯವಸ್ಥೆ ಇದ್ದು, ಮನೆ ಮನೆಯ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಮೊದಲ ಹೆಜ್ಜೆ ಹೀಗೆ ಯಶಸ್ವಿಯಾಗಿ ಪೂರ್ಣಗೊಂಡಿತು. 

ಕಾಮೆಂಟ್‌ಗಳಿಲ್ಲ