Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ - ಗ್ಯಾರಂಟಿ ಅನುಷ್ಠಾನದಲ್ಲಿ ತಾಂತ್ರಿಕ ದೋಷ ಕುರಿತು ರಾಜ್ಯಾಧ್ಯಕ್ಷರ ಗಮನ ಸೆಳೆಯಲು ನಿಯೋಗ : ಅಧ್ಯಕ್ಷ ಹೆಚ್.ಬಿ. ಚಿದಂಬರ

ಹೊಸನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ವಿವಿಧ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ವರ್‌ನ ವ್ಯಾಪಕ ತಾಂತ್ರಿಕ ದೋಷ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಜಿಲ್ಲಾ ಮಟ್ಟದ ನಿಯೋಗದೊಂದಿಗೆ ಯೋಜನೆಯ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಯೋಜನೆ ಜನಪರವಾಗಿ ಜಾರಿಗೊಳಿಸಲು ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ್ ವಿಷಯ ಪ್ರಸ್ತಾಪಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ 7ನೇ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಿಡಿಪಿಓ ಗಾಯತ್ರಿ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ 29,011 ಕಾರ್ಡ್‌ದಾರರ ಪೈಕಿ 26,534 ಮಂದಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು ಉಳಿದ 2437 ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಇಂದಿಗೆ 265 ಫಲಾನುಭವಿಗಳಲ್ಲಿ 154 ಜನರಿಗೆ ಹಣ ಸಂದಾಯವಾಗಿದ್ದು, ಆಧಾರ್ ಲಿಂಕ್ ಆಗದ ಕಾರಣ 111 ಜನರಿಗೆ ಗೃಹಲಕ್ಷ್ಮೀ ಹಣ ಜಮಾ ಆಗಿಲ್ಲ. 157 ಮಂದಿ ಮರಣ ಹೊಂದಿದ್ದು, ಮರಣ ಪ್ರಮಾಣಪತ್ರ ಸಲ್ಲಿಸಿದ ಬಳಿಕ 80 ಜನರಿಗೆ ಬಿಲ್ಲಿಂಗ್‌ಗೆ ಹೋಗಿದೆ. 35 ಫಲಾನುಭವಿಗಳ ಹೆಸರು ಇನ್ನೂ ಬದಲಾವಣೆ ಆಗಿಲ್ಲ. 42 ಫಲಾನುಭವಿಗಳ ಹೆಸರು ಬದಲಾವಣೆ ಕಂಡಿದ್ದು, ಕುಟುಂಬದ ಮತ್ತೊರ್ವ ಯಜಮಾನಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.

CLICK ಮಾಡಿ - ಹರಿದ್ರಾವತಿ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ - ನಿಸ್ವಾರ್ಥ ಸೇವೆಯನ್ನು ಸಮಾಜ ಸಮಚಿತ್ತದಿಂದ ಸ್ವೀಕರಿಸಬೇಕು : ಮಂಜುನಾಥ್ ಕೆ. ಆರ್

ಗೃಹಜ್ಯೋತಿ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಈವರೆಗೆ ಒಟ್ಟು 519656 ಸ್ಥಾವರಗಳ ಬಿಲ್ ಜಾರಿಗೊಳಿಸಿದ್ದು, 1,94,95,648 ಯೂನಿಟ್ ವಿದ್ಯುತ್ ಬಳಕೆ ಆಗಿದ್ದು, ರೂ 18,39,80,561 ಉಚಿತ ವಿದ್ಯುತ್ ನೀಡಲಾಗಿದೆ ಎಂದು ಸಭೆಗೆ ಮೆಸ್ಕಾಂ ಸಿಬ್ಬಂದಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಸಾಗರ ವಿಭಾಗದ ಡಿಪೋ ಮ್ಯಾನೇಜರ್ ಎಸ್.ಎಸ್. ಬಿರಾದಾರ್ ಮಾತನಾಡಿ, ಸಾಗರ ಘಟಕದಲ್ಲಿ ಶಕ್ತಿ ಯೋಜನೆಯಲ್ಲಿ ಡಿಸೆಂಬರ್‌ನಲ್ಲಿ ಒಟ್ಟು 15,050 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ರೂ 6,63,114 ಸಂಸ್ಥೆಗೆ ಆದಾಯ ಲಭಿಸಿದೆ ಎಂಬುದಾಗಿ ತಿಳಿಸಿದರು.

ಯುವನಿಧಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ 475 ಪದವಿ ಹಾಗೂ 4 ಡಿಪ್ಲೋಮಾ ವಿದ್ಯಾರ್ಥಿಗಳು ಯೋಜನೆಯ ರೂ 14,31,000 ಫಲಾನುಭವಿಗಳಾಗಿದ್ದಾರೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಉತ್ತರದಿಂದ ತೃಪ್ತರಾಗದ ಅಧ್ಯಕ್ಷ ಚಿದಂಬರ್, ತಾಲ್ಲೂಕಿನಲ್ಲಿ ಮುಂಬರುವ ಫೆಬ್ರವರಿ 15 ರೊಗಳಗೆ ಯುವಕರಿಗಾಗಿ ಯುವನಿಧಿ ಜಾಗೃತಿ ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಭೆಗೆ ಸೂಚಿಸಿದರು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಇಓ ನರೇಂದ್ರ ಕುಮಾರ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಶಿವಕುಮಾರ್, ಪಿಡಿಓ ಪವನ್ ಕುಮಾರ್, ಯೋಜನೆಯ ಜಿಲ್ಲಾ ಸದಸ್ಯ ಅಮೀರ್ ಹಂಜಾ, ಸದಸ್ಯರಾದ ಅನಿಲ್ ಕುಮಾರ್, ಸಂತೋಷ್ ಮಳವಳ್ಳಿ, ಕರುಣಾಕರ್, ರವೀಂದ್ರ ಕೆರೆಹಳ್ಳಿ, ಫ್ಯಾನ್ಸಿ ರಮೇಶ್, ಮಹೇಂದ್ರ ಬುಕ್ಕಿವರೆ, ಸಿಂಥಿಯಾ ಶರಾವೋ, ಸುಮಂಗಳ ದೇವರಾಜ್, ಪೂರ್ಣಿಮಾ ಮೂರ್ತಿ, ಅಕ್ಷತಾ ನಾಗರಾಜ್, ನರಸಿಂಹ ಪೂಜಾರ್, ಎಸ್‌ಡಿಎ ಮಂಜುನಾಥ್ ಉಪಸ್ಥಿತರಿಸಿದ್ದರು.


ಕಾಮೆಂಟ್‌ಗಳಿಲ್ಲ