ತಹಶೀಲ್ದಾರ್ ದಿಢೀರ್ ದಾಳಿ - ಎಲ್. ಗುಡ್ಡೇಕೊಪ್ಪದಲ್ಲಿ ನಕಲಿ ಹಕ್ಕುಪತ್ರಗಳ ವಶ | ಇಂತಹ ದಾಳಿ ರಿಪ್ಪನ್‌ಪೇಟೆಯಲ್ಲಿ ಯಾವಾಗ ಎಂದು ಪ್ರಶ್ನಿಸುತ್ತಿರುವ ಜನ?!
ಹೊಸನಗರ : ತಹಶೀಲ್ದಾರ್ ರಶ್ಮಿ ಹೆಚ್.ಜೆ ನೇತೃತ್ವದ ಅಧಿಕಾರಿಗಳ ತಂಡ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೇಕೊಪ್ಪ ನಿವಾಸಿ ರಾಜೇಂದ್ರ ಎಂಬಾತನ ಮನೆಯ ಮೇಲೆ ದಿಢೀರ್ ದಾಳಿ ನಡೆಸಿ, ನೂರಾರು ನಕಲಿ ಹಕ್ಕುಪತ್ರಗಳು, ಅರಣ್ಯ ಇಲಾಖೆಯ ಎನ್‌ಓಸಿ, ಇದಕ್ಕೆ ಬಳಸಿದ ಸೀಲ್‌ಗಳು ಸೇರಿದಂತೆ ನಕಲಿ ಸರ್ಕಾರಿ ದಾಖಲೆ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಇಂದು ನಡೆದಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ನಕಲಿ ಹಕ್ಕುಪತ್ರದ ಬಗ್ಗೆ ಅನೇಕ ದಿನಗಳಿಂದ ತಮಗೆ ಬರುತ್ತಿದ್ದ ಮಾಹಿತಿ ಆಧರಿಸಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ರಾಜೇಂದ್ರನ ಮನೆ ಮೇಲೆ ದಾಳಿ ನಡೆಸಿತು. ದಾಳಿ ವೇಳೆ ರಾಜೇಂದ್ರನ ಮನೆಯಲ್ಲಿ ನೂರಾರು ನಕಲಿ ಹಕ್ಕುಪತ್ರಗಳು, ಅದಕ್ಕೆ ಬೇಕಾದ ಅರಣ್ಯ ಇಲಾಖೆ ಎನ್ಓಸಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ನಾಟಕ ಬ್ಯಾಂಕ್, ಉಪನೋಂದಣಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿ, ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ನಕಲಿ ಸೀಲ್‌ಗಳು ಕಂಡು ಬಂದಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಖಾಲಿ ಪತ್ರಗಳು, ಅದಕ್ಕೆ ಸಂಬಂಧಿಸಿದ ಅನೇಕ ನಕಲಿವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ತೆಗೆದುಕೊಂಡ ವಸ್ತುಗಳನ್ನೆಲ್ಲ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ನಕಲಿ ಹಕ್ಕುಪತ್ರ ಜಾಲ ತಾಲ್ಲೂಕಿನಲ್ಲಿ ಎಷ್ಟು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ, ತಾಲ್ಲೂಕಿನಲ್ಲಿ ಈವರೆಗೆ ಹಂಚಿಕೆಯಾಗಿರುವ ನಕಲಿ ಹಕ್ಕುಪತ್ರಗಳ ಮಾಹಿತಿ ಸೇರಿದಂತೆ ಇನ್ನಷ್ಟು ವಿಷಯಗಳನ್ನು ಕಲೆ ಹಾಕಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ಹೆಚ್.ಜೆ ತಿಳಿಸಿದ್ದಾರೆ.
CLICK ಮಾಡಿ - ಸೆಪ್ಟೆಂಬರ್ 17ಕ್ಕೆ ಹೊಸನಗರದಲ್ಲಿ ದಸರಾ ಕ್ರೀಡಾಕೂಟ
ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶಿರಸ್ತೇದಾರ್ ಮಂಜುನಾಥ, ಪಿಎಸ್ಐ ಶಂಕರಗೌಡ ಪಾಟೀಲ್, ಚಿರಾಗ್ ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಹೊಸನಗರ ತಾಲ್ಲೂಕಿನಲ್ಲಿ ಸಕ್ರಿಯವಾಗಿರುವ ನಕಲಿ ಹಕ್ಕುಪತ್ರ ಜಾಲದ ಬಗ್ಗೆ ಈ ಹಿಂದೆಯೂ ಸುದ್ದಿಯಾಗಿತ್ತು. ಆದರೆ ಅದು ಅಲ್ಲಿಂದಲ್ಲಿಗೇ ಮುಚ್ಚಿ ಹೋಗಿತ್ತು. ಈ ಬಾರಿ ತಹಶೀಲ್ದಾರ್ ದಾಳಿಯಿಂದಾಗಿ ನಕಲಿ ಹಕ್ಕುಪತ್ರದ ಜಾಲ ಬಯಲಾಗಿದೆ. ಇಂತಹದ್ದೇ ದಾಳಿ ರಿಪ್ಪನ್‌ಪೇಟೆಯಲ್ಲಿಯೂ ಆಗಬೇಕಾದ ತುರ್ತು ಅವಶ್ಯಕತೆ ಇದೆ. ಇಲ್ಲಿಯೂ ನಕಲಿ ಹಕ್ಕುಪತ್ರ ಸೃಷ್ಟಿಸುತ್ತಿರುವವರ ಬಗ್ಗೆ ಹಾಗೂ ಸರ್ಕಾರಿ ದಾಖಲೆಗಳನ್ನು ಫೋರ್ಜರಿ ಮಾಡಿ ಸರ್ಕಾರವನ್ನೇ ವಂಚಿಸುತ್ತಿರುವವರ ಬಗ್ಗೆ ಜನರು ಆಗಾಗ ದೂರು ನೀಡುತ್ತಿದ್ದು ಈ ಬಗ್ಗೆಯೂ ತಹಶೀಲ್ದಾರ್ ಗಮನ ಹರಿಸಿದರೆ ತಾಲ್ಲೂಕಿನಲ್ಲಿ ನಕಲಿ ಸರ್ಕಾರಿ ದಾಖಲೆ ಸೃಷ್ಟಿಕರ್ತರ ಗ್ಯಾಂಗು ಜನರನ್ನು ವಂಚಿಸುವುದಕ್ಕೆ ಕಡಿವಾಣ ಬೀಳಲಿದೆ ಎನ್ನುವ ಆಶಯ ತಾಲ್ಲೂಕಿನ ಜನರದ್ದು.
ಕಾಮೆಂಟ್‌ಗಳಿಲ್ಲ