Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶಿವಮೊಗ್ಗ ಗ್ಯಾಂಗ್‌ವಾರ್‌ - ಬೀರನಕೆರೆಯಲ್ಲಿ ಆರೋಪಿ ಶೋಯೆಬ್‌ ಅಲಿಯಾಸ್‌ ಅಂಡ ಕಾಲಿಗೆ ಪೊಲೀಸರ ಗುಂಡು

ಶಿವಮೊಗ್ಗ : ಇಲ್ಲಿನ ಲಷ್ಕರ್‌ ಮೊಹಲ್ಲಾದಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದಂತೆ ರೌಡಿ ಶೀಟರ್‌ ಆದಿಲ್‌‌ನ ಸಹಚರ ಹಾಗೂ ಗ್ಯಾಂಗ್‌ವಾರ್‌ನ ಪ್ರಮುಖ ಆರೋಪಿ ರೌಡಿ ಶೀಟರ್ ಶೋಯೆಬ್‌ ಅಲಿಯಾಸ್‌‌ ಅಂಡನ ಕಾಲಿಗೆ ಶಿವಮೊಗ್ಗ ಪೊಲೀಸರು, ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಬೀರನಕೆರೆಯಲ್ಲಿ ಇಂದು ಬೆಳಿಗ್ಗೆ ಗುಂಡು ಹಾರಿಸಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಸಕ್ರಿಯವಾಗಿರುವ ರೌಡಿ ಗ್ಯಾಂಗುಗಳಿಗೆ ಖಡಕ್‌ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್‌‌‌ವಾರ್‌‌‌ನಲ್ಲಿ ಶೋಯೆಬ್ ಯಾನೆ ಸೇಬು, ಗೌಸ್ ಮತ್ತು ಯಾಸೀನ್ ಹತ್ಯೆಯಾಗಿತ್ತು. ಈ ಹತ್ಯೆ ಮತ್ತು ಗ್ಯಾಂಗ್‌ವಾರ್‌ಗೆ ಇಡೀ ಶಿವಮೊಗ್ಗವೇ ಬೆಚ್ಚಿ ಬಿದ್ದಿತ್ತು. ಮತ್ತು ಪೊಲೀಸರ ಮೇಲೆ ಒತ್ತಡವೂ ಹೆಚ್ಚಾಗಿತ್ತು. ಈಗಾಗಲೇ ಈ ಪ್ರಕರಣದಲ್ಲಿ 19 ಜನ‌ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಗ್ಯಾಂಗ್‌ವಾರ್‌ಗೆ ಕಾರಣವಾಗಿದ್ದ ಆದಿ‌ಲ್‌ನ ಸಹಚರ ಶೋಯೆಬ್‌ ಅಲಿಯಾಸ್‌ ಅಂಡ ಪ್ರಕರಣ ನಡೆದ ನಂತರ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದ ಶಿವಮೊಗ್ಗ ಪೊಲೀಸರು ಇಂದು ಬೆಳಿಗ್ಗೆ ಖಚಿತ ಸುಳಿವಿನ ಮೇರೆಗೆ ಬಂಧಿಸಲು ಬೀರನಕೆರೆಗೆ ತೆರಳಿ, ತಂಡದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಅಣ್ಣಪ್ಪ ಎನ್ನುವವರು ಅಂಡನನ್ನು ಹಿಡಿಯಲು ಮುಂದಾದಾಗ ಆತ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪಿಎಸ್‌‌‌ಐ ಕುಮಾರ್ ಆರೋಪಿಗೆ ಹಲ್ಲೆ ನಡೆಸದಂತೆ ಖಡಕ್‌ ಎಚ್ಚರಿಕೆ ನೀಡಿದ ನಂತರವೂ ಅಂಡ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿದಾಗ ಅಂಡನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. 

ಪೊಲೀಸ್‌ ಫೈರಿಂಗ್‌‌ನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌ ಖಚಿತ ಪಡಿಸಿದ್ದು, ಶೋಯೆಬ್‌ ಅಲಿಯಾಸ್‌‌ ಅಂಡ ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಈತನ ಮೇಲೆ ಈಗಾಗಲೇ ಐದು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 307 ಪ್ರಕರಣ ಕೂಡಾ ಸೇರಿಕೊಂಡಿದೆ. ಪೊಲೀಸ್‌ ಮೂಲಗಳ ಪ್ರಕಾರ, ಶಿವಮೊಗ್ಗ ಪೊಲೀಸರು ಕೆಲವು ತಿಂಗಳುಗಳ ಹಿಂದೆಯೇ ಈತನ ಕುಟುಂಬ ಸದಸ್ಯರಿಗೆ ರೌಡಿ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದರು. ಹೀಗಿದ್ದೂ ಮೊನ್ನೆಯ ಗ್ಯಾಂಗ್‌ವಾರ್‌ನಲ್ಲಿ ಈತ ಸೇರಿಕೊಂಡಿದ್ದು, ಪೊಲೀಸರಿಗೆ ಸಿಕ್ಕದೆ ತಲೆಮರೆಸಿಕೊಂಡಿದ್ದು, ಈತನ ಬಂಧನದೊಂದಿಗೆ ಈವರೆಗೆ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದಂತೆ ಒಟ್ಟು 20 ಆರೋಪಿಗಳನ್ನು ಬಂಧಿಸಿದಂತಾಗಿದೆ.


ಕಾಮೆಂಟ್‌ಗಳಿಲ್ಲ