ಹೊಸನಗರ ಶಾಸಕರ ಮಾದರಿ ಸರ್ಕಾರಿ ಶಾಲೆಯಲ್ಲಿ ಎಸ್‌ಡಿಎಂಸಿ ಸಂಘರ್ಷ - ಸದಸ್ಯ ನೇರಲೆ ರಮೇಶ್ ಮೇಲೆ ಸರ್ಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿ ಕುಮಾರ್ ಹಲ್ಲೆ ಖಂಡಿಸಿ ಬಿಜೆಪಿ-ಪೋಷಕರ ಪ್ರತಿಭಟನೆ
ಹೊಸನಗರ : ಇಷ್ಟು ಸಮಯ ಹೊಸತನ, ಹೊಸ ಬೆಳವಣಿಗೆಗಳಿಂದ ಸುದ್ದಿಯಾಗುತ್ತಿದ್ದ ಹೊಸನಗರ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರ ನಡುವಿನ ಕಿತ್ತಾಟದಿಂದಾಗಿ ಸುದ್ದಿಯಾಗಿದೆ. ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿ ಕುಮಾರ್, ಸದಸ್ಯ ನೇರಲೆ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಈ ಬಾರಿಯ ಕೆಟ್ಟ ಸುದ್ದಿ! ಹೌದು, ಎಸ್‌ಡಿಎಂಸಿಯವರ ಕಿತ್ತಾಟದಿಂದಾಗಿ ಶಾಸಕರ ಮಾದರಿ ಶಾಲೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ನಡೆದಿದ್ದು ಇಷ್ಟು. ಮೊನ್ನೆ ಅಂದರೆ ಫೆಬ್ರವರಿ 3ನೇ ತಾರೀಖು ಶನಿವಾರ ಶಾಲೆಯ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯವರೊಂದಿಗೆ ಪೋಷಕರು ಹಾಗೂ ಸಾರ್ವಜನಿಕರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸದಸ್ಯ ನೇರಲೆ ರಮೇಶ್, ಈ ಶಾಲೆ ನೂರು ವರ್ಷವನ್ನು ಪೂರ್ಣಗೊಳಿಸಿರುವುದರ ಬಗ್ಗೆ ಗೊಂದಲಗಳಿವೆ. ಶಾಲೆ ಆರಂಭವಾಗಿ ನೂರು ವರ್ಷ ಪೂರ್ಣಗೊಂಡಿದೆ ಎನ್ನುವುದಕ್ಕೆ ಸಂಬಂಧಿಸಿದ ಹಾಗೆ ಶಾಲೆಯಲ್ಲಿ ಏನಾದರೂ ಲಿಖಿತ ದಾಖಲೆಗಳಿವೆಯೇ ಎಂದು ಪ್ರಶ್ನಿಸಿದ್ದಾರೆ. ಇದು ಸಹಜವಾಗಿಯೇ ಸಭೆಯಲ್ಲಿ ಗೊಂದಲ ಮೂಡಿಸಿತ್ತು. ಸಭೆ ಮುಗಿದ ನಂತರ ಈ ವಿಷಯದ ಬಗ್ಗೆ ಇನ್ನೊಮ್ಮೆ ಗುಂಪಿನ ನಡುವೆ ಮಾತುಗಳಾಗಿ, ಅಧ್ಯಕ್ಷ ಅಶ್ವಿನಿ ಕುಮಾರ್ ಹಾಗೂ ರಮೇಶ್ ನಡುವೆ ಮಾತುಕತೆ ಕಾವು ಪಡೆದುಕೊಂಡಿದೆ. ಕೊನೆಗೆ ಇದು ವಿಪರೀತಕ್ಕೆ ತಿರುಗಿಕೊಂಡು, ಅಧ್ಯಕ್ಷರು ಸದಸ್ಯ ರಮೇಶ್‌ಗೆ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರಮೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಕೂಡಾ ಪಡೆದುಕೊಂಡಿದ್ದಲ್ಲದೇ, ಈ ಬಗ್ಗೆ ಹಲ್ಲೆ ನಡೆಸಿದ ಅಶ್ವಿನಿ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಇಷ್ಟಕ್ಕೆ ವಿಷಯ ತಣ್ಣಗಾಗದೇ, ಅಧ್ಯಕ್ಷ ಅಶ್ವಿನಿ ಕುಮಾರ್, ಹಲ್ಲೆಗೊಳಗಾದರು ಎನ್ನಲಾದ ರಮೇಶ್ ಮದ್ಯಸೇವನೆ ಮಾಡಿ ಶಾಲೆಗೆ ಬಂದಿದ್ದರು, ಆದ್ದರಿಂದ ಸಭೆಯಿಂದ ಹೊರ ನಡೆಯುವಂತೆ ನಾನು ತಿಳಿಸಿದ್ದೆ. ಇದಕ್ಕೆ ಒಪ್ಪದ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿ ಕುಮಾರ್ ಸದಸ್ಯ ನೇರಲೆ ರಮೇಶ್ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಇಂದು ಹೊಸನಗರದಲ್ಲಿ ಬಿಜೆಪಿ ಪಕ್ಷ ಹಾಗೂ ಶಾಲೆಯ ಪೋಷಕರು ಒಟ್ಟಾಗಿ ಪ್ರತಿಭಟನೆಯನ್ನು ನಡೆಸಿದ್ದು, ಕ್ಷುಲ್ಲಕ ಕಾರಣಕ್ಕೆ ನೇರಲೆ ರಮೇಶ್ ಮೇಲೆ ಹಲ್ಲೆ ನಡೆಸಿದ ಅಶ್ವಿನಿ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು, ಎಸ್.ಡಿ.ಎಂ.ಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಶ್ಮಿ ಹಾಗೂ ಬಿಇಓ ಕೃಷ್ಣಮೂರ್ತಿ ಅವರಿಗೆ, ಮಕ್ಕಳು ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾದ ಶಾಲೆಯ ಆವರಣದಲ್ಲಿ ಎಸ್‌ಡಿಎಂಸಿ ಸದಸ್ಯರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಈವರೆಗೂ ಕ್ರಮ ತೆಗೆದುಕೊಳ್ಳದೇ ಇರುವುದು ದುರಂತ. ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು ಈ ರೀತಿಯ ಉದ್ಧಟತನ, ದೌರ್ಜನ್ಯ ಹಾಗೂ ರೌಡಿಸಂ ಮಾಡುವಂತಹ ವ್ಯಕ್ತಿಯನ್ನು ಕೂಡಲೇ ವಜಾ ಮಾಡಬೇಕು ಮತ್ತು ಬಂಧಿಸಬೇಕು ಎನ್ನುವುದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರ ಒತ್ತಾಯವಾಗಿದೆ ಎಂದು ವೀರೇಶ್ ಆಲವಳ್ಳಿ ವಿವರಿಸಿದರು. ತಕ್ಷಣ ಕ್ರಮ ತೆಗೆದುಕೊಳ್ಳದೇ ಹೋದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದೂ ಎಚ್ಚರಿಸಿದರು.
ಪ್ರತಿಭಟನಾಕಾರರು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೂ ದೌರ್ಜನ್ಯ ನಡೆಸುತ್ತಿದ್ದಾರೆ, ಈ ಕುರಿತು ಕೂಡಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿ ದೂರು ನೀಡಿದರು.
ಈ ಪ್ರತಿಭಟನೆಯಲ್ಲಿ ಹೊಸನಗರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಮತ್ತಿಮನೆ ಸುಬ್ರಹ್ಮಣ್ಯ, ಸುರೇಶ್ ಸ್ವಾಮಿರಾವ್, ನಾಗಾರ್ಜುನ ಸ್ವಾಮಿ, ಉಮೇಶ್ ಕಂಚುಗಾರ್, ಎನ್.ಆರ್ ದೇವಾನಂದ್, ಎಂ.ಎನ್ ಸುಧಾಕರ್, ಕೆ.ವಿ ಕೃಷ್ಣಮೂರ್ತಿ, ನೇರಲೆ ರಮೇಶ್, ಪ್ರಹ್ಲಾದ್ ಜಯನಗರ ಮತ್ತಿತರರು ಪಾಲ್ಗೊಂಡಿದ್ದರು.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಅವುಗಳ ಅಭಿವೃದ್ಧಿಗೆ ಸಮುದಾಯ ಕೈ ಜೋಡಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗಲೇ, ಹೊಸನಗರದ ಸರ್ಕಾರಿ ಶಾಲೆಯಲ್ಲಿ ನಡೆದ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಈ ಜಗಳ ತಾಲ್ಲೂಕಿನ ಜನರಲ್ಲಿ ಬೇಸರ ಮೂಡಿಸಿದೆ. ಈಗಾಗಲೇ ದಾಖಲಾಗಿರುವ ದೂರು ಪ್ರತಿದೂರುಗಳ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ಚಪ್ಪಲಿಯಲ್ಲಿ ಹೊಡೆದರಂತೆ, ಮದ್ಯ ಸೇವನೆ ಮಾಡಿಕೊಂಡು ಬಂದಿದ್ದರಂತೆ ಎನ್ನುವ ಆರೋಪಗಳೇ ಎಸ್‌ಡಿಎಂಸಿಯವರ ಮನಸ್ಥಿತಿ ಎಂತಹದ್ದು ಎನ್ನುವುದನ್ನೂ ತೋರಿಸುತ್ತಿದೆ. ಶಾಲಾಭಿವೃದ್ಧಿ ಸಮಿತಿ ಎನ್ನುವುದು ಶಾಲೆಯ ಪ್ರಗತಿಗೆ ಸಾರ್ವಜನಿಕರ ಕೊಡುಗೆ ಇರಲಿ ಎನ್ನುವ ಕಾರಣಕ್ಕೆ ಇರುವುದೇ ಹೊರತು, ತಮ್ಮ ಪಕ್ಷ ಪ್ರತಿಷ್ಠೆಯ ವಿಷಯವನ್ನು ಎದುರಿಟ್ಟುಕೊಂಡು ಕಿತ್ತಾಡುವುದಕ್ಕಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕಿದೆ. ಯಾಕೆಂದರೆ, ಇವರಿವರ ನಡುವಿನ ಈ ವಿವಾದಗಳು ಅಲ್ಲಿ ಕಲಿಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಸೂಕ್ಷ್ಮವನ್ನು ಮೊದಲು ಅರಿತುಕೊಂಡು ಬಿಇಓ ಮತ್ತು ತಹಶೀಲ್ದಾರ್ ಈಗಿರುವ ಎಸ್‌ಡಿಎಂಸಿಯನ್ನೇ ಸಂಪೂರ್ಣವಾಗಿ ವಜಾ ಮಾಡಿ ಹೊಸ ಸಮಿತಿಯನ್ನು ರಚಿಸಬೇಕು ಎನ್ನುವುದು ಹೊಸನಗರದ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಾಮೆಂಟ್‌ಗಳಿಲ್ಲ