ಹೊಸನಗರದಲ್ಲಿ ಯಶಸ್ವಿಯಾಗಿ ನಡೆದ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಮ್ಮೇಳನ - ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸದಾ ನನ್ನ ಬೆಂಬಲವಿದೆ : ಶಾಸಕ ಬೇಳೂರು ಗೋಪಾಲಕೃಷ್ಣ
ಹೊಸನಗರ : ನನ್ನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧನಿದ್ದೇನೆ. ಅವರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ನಡೆಸುತ್ತೇನೆ. ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸದಾ ನನ್ನ ಬೆಂಬಲವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಗೊಳಿಸುವ ಹೊಣೆಗಾರಿಕೆ ಇಲಾಖಾ ನೌಕರರ ಮೇಲಿದೆ ಎಂದು ಹೇಳುವ ಮೂಲಕ ನೌಕರರ ಹೊಣೆಗಾರಿಕೆ ಎಷ್ಟು ಮಹತ್ತರವಾದದ್ದು ಎಂದು ವಿವರಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಂಘಟನೆಯಿಂದ ಸಬಲತೆ ಸಾಧ್ಯವಿದೆ. ಆದರೆ ಸಂಘಟನೆಗೆ ಕೆಟ್ಟ ಹೆಸರು ತರುವಂತಹ ಕಾರ್ಯವನ್ನುಯಾರೊಬ್ಬರೂ ಮಾಡಬಾರದು. ನೌಕರರ ಕಲ್ಯಾಣವು ಸರ್ಕಾರದ ಕರ್ತವ್ಯ ಎಂದರು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಹಿರಿಯರ ಶ್ರಮದಿಂದ ಸಂಘಟನೆ ಇಂದು ಬಲಿಷ್ಠವಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ನೌಕರರು ಹೆಚ್ಚು ಕೌಶಲ್ಯಪೂರ್ಣರಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಾಬೀತಾಗಿದೆ. ಹಲವು ಒತ್ತಡಗಳ ನಡುವೆ ನೌಕರರು ಕೆಲಸ ಮಾಡಬೇಕಾಗಿದೆ. ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.
ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಜಾರಿಗೊಳಿಸಿದೆ. ನೌಕರರ ಸಂಘದ ಹಲವು ಬೇಡಿಕೆಗಳನ್ನು ಸರ್ಕಾರ 6ನೇ ಗ್ಯಾರಂಟಿ ಎಂದು ಭಾವಿಸಿ ಅವುಗಳನ್ನು ಕೂಡಲೇ ಈಡೇರಿಸಬೇಕು ಎಂದು ಸಿ.ಎಸ್.ಷಡಕ್ಷರಿ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಕೆ.ಬಿ.ಸಿ.ಕೃಷ್ಣ, ಎಸ್.ಸಿ. ಕೃಷ್ಣಮೂರ್ತಿ, ಹೆಚ್.ಎಲ್.ಗುರುಮೂರ್ತಿ, ರೇಣುಕಪ್ಪ, ಸಿ.ಕೃಷ್ಣಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಪ್ರವಚನಕಾರ ಜಿ.ಎಸ್. ನಟೇಶ್ ಅವರು ಪ್ರಜಾಸ್ನೇಹಿ ಆಡಳಿತ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಅಧ್ಯಕ್ಷ ಎಂ. ಬಸವಣ್ಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಬಿಇಓ ಕೃಷ್ಣಮೂರ್ತಿ, ಹಾಲಪ್ಪ ಸಂಕೂರು, ಹೆಚ್.ಆರ್. ಸುರೇಶ್, ಮಲ್ಲಿಕಾರ್ಜುನ ಸ್ವಾಮಿ, ರಂಗಸ್ವಾಮಿ, ರೇಣುಕೇಶ್ ಕೆ, ಸುಧೀಂದ್ರಕುಮಾರ್, ರಮೇಶ ಕುಮಾರ್, ಮಾಲತೇಶ್ ಮತ್ತಿತರರು ಇದ್ದರು. ಪ್ರದೀಪ್ ಮತ್ತು ರೇಖಾ ಪ್ರಭಾಕರ ಕಾರ್ಯಕ್ರಮ ನಿರ್ವಹಿಸಿದರು.
ಕಾಮೆಂಟ್‌ಗಳಿಲ್ಲ