ರಾಷ್ಟಮಟ್ಟಕ್ಕೆ ಆಯ್ಕೆಯಾದ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ್ - ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ಕಂಡು ಹಿಡಿದ ಅಭಿಷೇಕ್
ರಿಪ್ಪನ್‌ಪೇಟೆ : ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ್, ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇದೇ 27ನೇ ತಾರೀಖಿನಂದು ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನಡೆದಿದ್ದು, ಅಲ್ಲಿ ಪಾಲ್ಗೊಂಡಿದ್ದ ಅಭಿಷೇಕ್ ಸಿದ್ಧಪಡಿಸಿರುವ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರವು ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಮೂಲಕ ಹೊಸನಗರ ತಾಲ್ಲೂಕಿನ ಪುಟ್ಟ ಹಳ್ಳಿಯ ವಿದ್ಯಾರ್ಥಿಯೊಬ್ಬ ತನ್ನ ಸಾಧನೆ ಮೂಲಕ ತಾಲ್ಲೂಕಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದಂತಾಗಿದೆ.
ಕೋಡೂರು ಗ್ರಾಮದ ಕಾರಕ್ಕಿ ನಿವಾಸಿಗಳಾದ ಸತೀಶ್ ಹಾಗೂ ಆಶಾ ದಂಪತಿಗಳ ಪುತ್ರನಾದ ಅಭಿಷೇಕ್ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಮಹೇಶ್ ಇವರ ಮಾರ್ಗದರ್ಶನದಲ್ಲಿ ಮನೆಯಲ್ಲಿಯೇ ಲಭ್ಯವಿದ್ದ ಸೋಲಾರ್ ಪ್ಲೇಟ್, ಕಟ್ ಪೀಸ್ ಕಬ್ಬಿಣದ ಸಹಾಯದಿಂದ ಕೇವಲ ಒಂದು ಸಾವಿರ ರೂಪಾಯಿ ಖರ್ಚಿನಲ್ಲಿ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರವನ್ನು ಸಿದ್ಧಪಡಿಸಿದ್ದ. ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.
ನಾಳೆ ಶಾಲೆಯಲ್ಲಿ ಅಭಿನಂದನಾ ಸಮಾರಂಭ :
ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಆರ್. ಕೃಷ್ಣಮೂರ್ತಿ, ಚಿಕ್ಕಜೇನಿ ಗ್ರಾ.ಪಂ. ಅಧ್ಯಕ್ಷರಾದ ರಾಜು ಎನ್. ಪಿ. ಹಾಗೂ ಎಲ್ಲ ಸದಸ್ಯರು, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಉಮೇಶ್ ಕೆ. ಮತ್ತು ಎಲ್ಲ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರಾದ ಶಿವಾಜಿ ಟಿ. ಎಂ.ಮತ್ತು ಶಿಕ್ಷಕವೃಂದದವರು ಅಭಿಷೇಕ್ ಮಾಡಿರುವ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ. ಈ ಪ್ರಯುಕ್ತ ನಾಳೆ ಅಂದರೆ 29/12/23 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅಭಿಷೇಕ್‌ಗೆ ಶಾಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕಾಮೆಂಟ್‌ಗಳಿಲ್ಲ