ಸೊನಲೆಗೆ ಕೆಎಸ್‌ಆರ್‌ಟಿಸಿ ಬಸ್ ಮಾರ್ಗ ವಿಸ್ತರಣೆ - ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಮಾಡಿ ಆಗ್ರಹಿಸಿದ ಮಾಜಿ ಶಾಸಕ ಬಿ. ಸ್ವಾಮಿರಾವ್
ಹೊಸನಗರ : ತಾಲ್ಲೂಕಿನ ಸೊನಲೆ ಗ್ರಾಮಕ್ಕೆ ಸರ್ಕಾರಿ ಬಸ್ ಮಾರ್ಗವನ್ನು ವಿಸ್ತರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಇಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸೊನಲೆ ಗ್ರಾಮವು ರಾಜ್ಯದ ಅಭಿವೃದ್ಧಿ ಹೊಂದಿರುವ ಆಯ್ದ ಮಾದರಿ ಗ್ರಾಮಗಳಲ್ಲಿ ಒಂದಾಗಿದ್ದು, ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಈ ಗ್ರಾಮದಲ್ಲಿ ಪಂಚಾಯತಿ ಕಟ್ಟಡ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಬ್ಯಾಂಕ್ ಸೌಲಭ್ಯ, ಸಹಕಾರ ಸಂಘ ಸೇರಿದಂತೆ ಧಾರ್ಮಿಕ ಪುಣ್ಯ ಕ್ಷೇತ್ರವಾದ ಶ್ರೀ ರಾಮೇಶ್ವರ ದೇವಾಲಯವಿದ್ದು, ಇಲ್ಲಿನ ಅನೇಕ ನಿವಾಸಿಗಳು ಉದ್ಯೋಗಕ್ಕಾಗಿ, ಹೈಕೋರ್ಟ್, ಸರ್ಕಾರಿ ಕಾರ್ಯಗಳ ನಿಮಿತ್ತ ದೂರದ ಬೆಂಗಳೂರಿಗೆ ಪ್ರತಿನಿತ್ಯ ಖಾಸಗಿ ಬಸ್ ಮೂಲಕವೇ ಸಂಚರಿಸುವಂತಾಗಿದೆ. ಪ್ರತಿನಿತ್ಯ ಬೆಂಗಳೂರಿನಿಂದ ಸೊನಲೆ ಸಮೀಪದ ಹುಂಚಾ ಗ್ರಾಮಕ್ಕೆ ಬಂದು ಅಲ್ಲೇ ನಿಲುಗಡೆ ಆಗುವ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ಸನ್ನು 9 ಕಿ.ಮೀ ಹೆಚ್ಚುವರಿ ಓಡಿಸಿ ಸೊನಲೆ ಗ್ರಾಮದವರೆಗೂ ಮಾರ್ಗ ವಿಸರಣೆ ಮಾಡಿ, ಸೊನಲೆಯಲ್ಲಿ ಬಸ್ ನಿಲುಗಡೆ ಮಾಡುವಂತೆ ತಮ್ಮ ಮನವಿ ಪತ್ರದಲ್ಲಿ ಅವರು ಕೋರಿದ್ದು, ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ