ಶಿವಮೊಗ್ಗ ಕೋಮುಗಲಭೆ - ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಯಾರೂ ಮಾಡಬೇಡಿ : ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ : ಶಿವಮೊಗ್ಗದ ಶಾಂತಿನಗರ ರಾಗಿಗುಡ್ಡದಲ್ಲಿ ನಡೆದ ಕೋಮುಗಲಭೆ ಕುರಿತು ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಈ ಸಂದರ್ಭದಲ್ಲಿ ಯಾವುದೇ ತಪ್ಪು ಮಾಹಿತಿಗಳಿಗೆ ಜನರು ಕಿವಿಗೊಡಬಾರದು. ಶಿವಮೊಗ್ಗ ಸದಾ ಶಾಂತಿ ನೆಲೆಸಿರುವ ಕ್ಷೇತ್ರ. ಈ ಶಾಂತಿ ಶಾಶ್ವತವಾಗಿ ನೆಲೆಸಲು ಪಕ್ಷಾತೀತವಾಗಿ ನಾವೆಲ್ಲರೂ ಒಟ್ಟಾಗಿ ಗಮನ ಕೊಡುತ್ತೇವೆ ಮತ್ತು ಕೊಡಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಸದಾ ಕೋಮುಸೌಹಾರ್ದತೆ ನೆಲೆಸಬೇಕು. ಇದು ಸದಾ ಅಲ್ಲಿ ನಿಲ್ಲುತ್ತಿರುವ ಪೊಲೀಸ್ ವ್ಯಾನಿನಿಂದ ಬಗೆಹರಿಯುವ ಸಮಸ್ಯೆಯಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಪೊಲೀಸರಿರಬಹುದು, ಸಂಬಂಧಪಟ್ಟ ಅಧಿಕಾರಿಗಳಿರಬಹುದು ಇವರ ಜೊತೆ ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಕೋಮುಗಲಭೆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.
ಈಗ ಶಿವಮೊಗ್ಗದಲ್ಲಿ ನಡೆದ ರೀತಿಯ ದುಷ್ಕೃತ್ಯ ಮಾಡುವ ಯಾವುದೇ ವ್ಯಕ್ತಿಗಳಾಗಲೀ, ಯಾವುದೇ ಧರ್ಮದವರಾಗಲೀ ಅವರನ್ನು ಎಚ್ಚರಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದ ಸಂಸದರು, ಮೊನ್ನೆ ತಾನೇ ನಮ್ಮ ಶಾಸಕರ ನೇತೃತ್ವದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಶಾಂತಿಯುತವಾಗಿ ಬಿಟ್ಟು ಬಂದ ನಂತರ ಈ ರೀತಿಯ ಕೃತ್ಯ ಯಾಕೆ ನಡೆಯಿತು? ಯಾರಿಂದ ನಡೆಯಿತು? ಎಂದು ಪ್ರಶ್ನಿಸಿದರು. ಹಾಗೂ ದುಷ್ಕೃತ್ಯ ನಡೆಸಿದ ಸಮಯಸಾಧಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈಗಾಗಲೇ ಶಾಂತಿಯನ್ನು ಮರುಸ್ಥಾಪಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ ಎಂದ ಅವರು, ಶಿವಮೊಗ್ಗದಲ್ಲಿ ನಿನ್ನೆ ಹಿಂಸೆಗಿಳಿದ ಗುಂಪನ್ನು ಖುದ್ದು ರಕ್ಷಣಾಧಿಕಾರಿಗಳೇ ಎದುರಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದಾಗಿ ತಿಳಿಸಿ, ಅವರ ಕೆಲಸವನ್ನು ಪ್ರಶಂಸಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಬಿ.ವೈ. ರಾಘವೇಂದ್ರ ಅವರು, ಶಿವಮೊಗ್ಗಕ್ಕೆ ಬೇರೆ ಬೇರೆ ನಂಬರ‍್ರುಗಳುಳ್ಳ ವೆಹಿಕಲ್ಲುಗಳು ಬಂದಿರುವುದರ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ತಿಳಿಸಿರುವುದನ್ನು ನೋಡಿದ್ದೇನೆ. ಇದರ ಹಿಂದಿರುವ ಕಾರಣವೇನು ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ. ತನಿಖೆಯ ನಂತರ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
VIDEO - ಶಿವಮೊಗ್ಗ ಕೋಮುಗಲಭೆ - ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಯಾರೂ ಮಾಡಬೇಡಿ - ಸಂಸದ ಬಿ.ವೈ.ರಾಘವೇಂದ್ರ
ಕಾಮೆಂಟ್‌ಗಳಿಲ್ಲ